ಬೆಂಗಳೂರು, ಮಾ.8- ಜೈಲಿನಲ್ಲಿದ್ದಾಗ ಪರಿಚಯವಾಗಿ ಹೊರಬಂದ ನಂತರವೂ ಕನ್ನಕಳವು ಮಾಡುತ್ತಿದ್ದ ಕುಖ್ಯಾತ ಮೂವರು ಆರೋಪಿಗಳನ್ನು ನಂದಿನಿ ಲೇಔಟ್ ಠಾಣೆ ಪೊಲೀಸರು ಬಂಧಿಸಿ 55.18 ಲಕ್ಷ ರೂ. ಮೌಲ್ಯದ 1.12 ಕೆ.ಜಿ. ಚಿನ್ನಾಭರಣ ಮತ್ತು 1.96 ಕೆ.ಜಿ. ಬೆಳ್ಳಿ ಸಾಮಾನುಗಳನ್ನು ವಶಪಡಿಸಿಕೊಂಡಿದ್ದಾರೆ.
ನಂದಿನಿ ಲೇಔಟ್‍ನ ಜೈಮಾರುತಿ ನಗರದಲ್ಲಿ ಪಿರ್ಯಾದುದಾರರು ವಾಸವಿದ್ದು, ಫೆ.15ರಂದು ಬೆಳಿಗ್ಗೆ 11.15ರ ಸುಮಾರಿನಲ್ಲಿ ಮನೆಗೆ ಬೀಗ ಹಾಕಿಕೊಂಡು ತಮ್ಮ ಸಂಬಂಧಿಕರ ಮಗನ ವಿವಾಹ ನಿಶ್ಚಯ ಕಾರ್ಯಕ್ರಮಕ್ಕೆ ಹೋಗಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಅಂದು ಮಧ್ಯಾಹ್ನ 2.30ಕ್ಕೆ ಮನೆಗೆ ಬಂದಾಗ ಬಾಗಿಲ ಬೀಗ ಮುರಿದಿರುವುದು ಗಮನಿಸಿ ಒಳಗೆ ಹೋಗಿ ನೋಡಿದಾಗ ಮನೆಯಲ್ಲಿದ್ದ ಚಿನ್ನಾಭರಣ ಕಳವಾಗಿರುವುದು ಕಂಡುಬಂದಿದೆ.
ತಕ್ಷಣ ಪಿರ್ಯಾದುದಾರರು ನಂದಿನಿಲೇಔಟ್ ಪೊಲೀಸ್ ಠಾಣೆಗೆ ನೀಡಿದ ದೂರಿನ ಮೇರೆಗೆ ಹಗಲು ಕನ್ನಾ ಕಳವು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕಿ ಪತ್ತೆಹಚ್ಚಿ ಮೂವರನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ವಿಚಾರಣೆಗೊಳಪಡಿಸಿ ಸುಮಾರು 55.18 ಲಕ್ಷ ರೂ. ಮೌಲ್ಯದ 1.12 ಕೆ.ಜಿ. ತೂಕದ ಚಿನ್ನಾಭರಣ, 1.96 ಕೆ.ಜಿ. ತೂಕದ ಬೆಳ್ಳಿ ಸಾಮಾನುಗಳನ್ನು ಮತ್ತು ಕೃತ್ಯಕ್ಕೆ ಬಳಸಿದ 1-ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳುವಲ್ಲಿ ನಂದಿನಿ ಲೇಔಟ್ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದಾಗ ಮೊದಲನೆ ಆರೋಪಿಯು ಈ ಹಿಂದೆ ಯಶವಂತಪುರ, ಹೆಬ್ಬಗೋಡಿ ಪೊಲೀಸ್ ಠಾಣೆಯ ದರೋಡೆಗೆ ಸಂಚು, ಹಗಲು ರಾತ್ರಿ ಕನ್ನಾ ಕಳವು, ಸಾಮಾನ್ಯ ಕಳವು ಪ್ರಕರಣದಲ್ಲಿ ಭಾಗಿಯಾಗಿ 2018ನೇ ಸಾಲಿನಲ್ಲಿ ಹೆಬ್ಬಗೋಡಿ ಪೊಲೀಸ್ ಠಾಣೆಯ ದರೋಡೆಗೆ ಸಂಚು ಪ್ರಕರಣದಲ್ಲಿ ಜೈಲಿಗೆ ಹೋಗಿ, ಜಾಮೀನಿನ ಮೇಲೆ ಬಿಡುಗಡೆಯಾಗಿರುತ್ತಾನೆ.
ಎರಡನೆ ಆರೋಪಿ ವಿರುದ್ಧ ಯಶವಂತಪುರ, ಸಂಜಯನಗರ, ಕೊತ್ತನೂರು, ವರ್ತೂರು, ಅಮೃತೂರು, ಆರ್.ಟಿ.ನಗರ, ಹೆಬ್ಬಾಳ, ಕೊಡಿಗೇಹಳ್ಳಿ ಪೊಲೀಸ್ ಠಾಣೆಯಲ್ಲಿ ಸುಲಿಗೆ, ಹಗಲು ರಾತ್ರಿ ಕನ್ನಕಳವು, ಮನೆ ಕಳವು, ಸಾಮಾನ್ಯ ಕಳವು ಪ್ರಕರಣಗಳು ದಾಖಲಾಗಿರುತ್ತವೆ. 2018ನೇ ಸಾಲಿನಲ್ಲಿ ಯಶವಂತಪುರ ಪೊಲೀಸ್ ಠಾಣೆಯ ಹಗಲು ಕನ್ನಕಳವು ಪ್ರಕರಣದಲ್ಲಿ ಈತ ಜೈಲಿಗೆ ಹೋಗಿ ಜಾಮೀನಿನ ಮೇಲೆ ಬಿಡುಗಡೆಯಾಗಿರುತ್ತಾನೆ.
ಮೂರನೆ ಆರೋಪಿಯು 2021ನೇ ಸಾಲಿನ ಬಸವೇಶ್ವರನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಹಣಕ್ಕಾಗಿ ಅಪಹರಣ ಪ್ರಕರಣದಲ್ಲಿ ಜೈಲಿಗೆ ಹೋಗಿ ಬಂದಿರುತ್ತಾನೆ. ಈ ಆರೋಪಿಗಳು ಜೈಲಿನಲ್ಲಿದ್ದಾಗ ಪರಿಚಯವಾಗಿ ಬಿಡುಗಡೆಯಾದ ನಂತರ ಒಟ್ಟಾಗಿ ಸೇರಿಕೊಂಡಿದ್ದಾರೆ.
ತಾಯಿಗೆ ಸ್ನೇಹಿತರೆಂದು ತಿಳಿಸಿ, ತಮ್ಮ ಮನೆಯಲ್ಲಿ ಉಳಿಸಿಕೊಂಡು ಕಳವು ಮಾಡಲು ಯೋಜನೆ ರೂಪಿಸಿಕೊಂಡು ಈ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದುದು ವಿಚಾರಣೆಯಿಂದ ತಿಳಿದುಬಂದಿದೆ.
ಒಂದೆರಡು ಪ್ರಕರಣಗಳಲ್ಲಿ ಕಳವು ಮಾಡಿದ್ದ ಚಿನ್ನಾಭರಣಗಳನ್ನು ಮೂರನೆ ಆರೋಪಿಯು ತನ್ನ ತಾಯಿಗೆ ನೀಡಿ, ತನ್ನ ಸ್ನೇಹಿತರಿಗೆ ಕಷ್ಟವಿದೆ ಎಂದು ತಿಳಿಸಿ, ತನ್ನ ತಾಯಿ ಹೆಸರಿನಲ್ಲಿ ಗಿರವಿ ಇಟ್ಟಿದ್ದನು. ಮೊದಲನೆ ಮತ್ತು ಎರಡನೆ ಆರೋಪಿ ಕೃತ್ಯವೆಸಗುವುದಕ್ಕೆ ಮುಂಚಿತವಾಗಿ ಸಂಜೆ ಸಮಯದಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿಕೊಂಡು ಹೋಗಿ ಆ ಮನೆಗೆ ಹತ್ತಿರದಲ್ಲೇ ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ಗುರುತಿಸಿಕೊಂಡು ರಾತ್ರಿ ವೇಳೆ ಊಟ ಮುಗಿಸಿಕೊಂಡು ಅದೇ ಕಟ್ಟಡದಲ್ಲಿ ಬಚ್ಚಿಟ್ಟುಕೊಳ್ಳುತ್ತಿದ್ದರು.
ಮಧ್ಯರಾತ್ರಿ 1 ಗಂಟೆ ಸಮಯದಲ್ಲಿ ಹಲವು ನಕಲಿ ಕೀಗಳನ್ನು ಬಳಸಿ ಬೀಗ ತೆಗೆಯಲು ಪ್ರಯತ್ನಿಸಿ ಸಾಧ್ಯವಾಗದಿದ್ದಾಗ ಕಬ್ಬಿಣದ ರಾಡುಗಳಿಂದ ಮೀಟಿ ಬೀಗ ಮುರಿದು ಕಳವು ಮಾಡುತ್ತಿದ್ದರು. ರಾತ್ರಿ ವೇಳೆ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋದರೆ ಪೋಲಿಸರ ಕೈ ಸಿಕ್ಕಿ ಬೀಳುತ್ತೇವೆಂದು ಕೃತ್ಯಕ್ಕೂ ಮೊದಲು ಬಚ್ಚಿಟ್ಟುಕೊಂಡಿದ್ದ ನಿರ್ಮಾಣ ಹಂತದ ಕಟ್ಟಡದಲ್ಲಿ ಬೆಳಗಿನ ಜಾವದವರೆಗೆ ಉಳಿದುಕೊಂಡು ವಾಹನಗಳ ಓಡಾಟ ಪ್ರಾರಂಭವಾದ ನಂತರ ಅಲ್ಲಿಂದ ಹೊರಟು ಹೋಗುತ್ತಿದ್ದರು.
ಆರೋಪಿಗಳ ಬಂಧನದಿಂದ ನಂದಿನಿಲೇಔಟ್-2 ಪ್ರಕರಣ, ವಿದ್ಯಾರಣ್ಯಪುರ-3 ಪ್ರಕರಣ, ಬಾಗಲಗುಂಟೆ-3 ಪ್ರಕರಣಗಳು, ಕೊಡಿಗೇಹಳ್ಳಿ-01, ಸಂಜಯನಗರ-1, ಪೀಣ್ಯ-1 ರಾತ್ರಿ ಕನ್ನ ಕಳವು ಪ್ರಕರಣ, ಗಂಗಮ್ಮನಗುಡಿ-1 ಮನೆ ಕಳವು ಪ್ರಕರಣ ಸೇರಿದಂತೆ ಒಟ್ಟು 14 ಪ್ರಕರಣಗಳು ಪತ್ತೆಯಾಗಿವೆ.
ಈ ಪ್ರಕರಣದಲ್ಲಿ ಮಲ್ಲೇಶ್ವರಂ ಉಪ ವಿಭಾಗದ ಎಸಿಪಿ ಕೆ.ಎಸ್. ವೆಂಕಟೇಶ್ ನಾಯ್ಡು ಮಾರ್ಗದರ್ಶನದಲ್ಲಿ ಪೊಲೀಸ್ ಇನ್ಸ್‍ಪೆಕ್ಟರ್ ವೆಂಕಟೇಗೌಡ ಮತ್ತು ಸಿಬ್ಬಂದಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
