ಬೆಂಗಳೂರು,ಜ.4- ವ್ಯಕ್ತಿಯೊಬ್ಬರ ಜೇಬು ಕತ್ತರಿಸಿ ಚಿನ್ನದ ಒಡವೆಗಳನ್ನು ಕಳವು ಮಾಡಿ ಕರಗಿಸಿ ಮಾರಾಟ ಮಾಡಿದ್ದ ಮೂವರು ಆರೋಪಿಗಳನ್ನು ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಬಂಧಿಸಿ 4.14 ಲಕ್ಷ ರೂ. ಬೆಲೆಯ 92 ಗ್ರಾಂ ತೂಕದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ. ಸಯ್ಯದ್ ಬಾಬಾ ಜಾನ್, ಖಲೀಂ ಖಾನ್ ಮತ್ತು ಸುರೇಶ್ ಬಂಧಿತ ಆರೋಪಿಗಳು.
ಡಿ.21ರಂದು ಸಂಜೆ 6.30ರ ಸುಮಾರಿನಲ್ಲಿ ಪಿರ್ಯಾದುದಾರರು ಒಡವಗಳಿದ್ದ ಬಾಕ್ಸನ್ನು ಜೇಬಿನಲ್ಲಿಟ್ಟುಕೊಂಡು ಸಿಟಿ ಮಾರ್ಕೆಟ್ ವ್ಯಾಪ್ತಿಯ ಜನಸಂದಣಿಯಲ್ಲಿ ನಡೆದು ಹೋಗುತ್ತಿದ್ದಾಗ ಯಾರೋ ಕಳ್ಳರು ಅವರ ಜೇಬನ್ನು ಕತ್ತರಿಸಿ ಅವರ ಜೇಬಿನಲ್ಲಿದ್ದ ಚಿನ್ನದ ಒಡವೆ ಕಳವು ಮಾಡಿದ್ದರು.
ಈ ಬಗ್ಗೆ ಸಿಟಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್‍ಸ್ಪೆಕ್ಟರ್ ಕುಮಾರಸ್ವಾಮಿ ಮತ್ತು ಸಿಬ್ಬಂದಿ ತನಿಖೆ ಕೈಗೊಂಡು ಮೂವರು ಆರೋಪಿಗಳನ್ನು ಬಂಸಿ ವಿಚಾರಣೆಗೊಳಪಡಿಸಿದರು.
ಈ ಆರೋಪಿಗಳು ಚಿನ್ನದ ಒಡವೆಗಳನ್ನು ಕಳವು ಮಾಡಿ ಅವುಗಳನ್ನು ಕರಗಿಸಿ ಮಾರಾಟ ಮಾಡಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ 4.14 ಲಕ್ಷ ರೂ. ಬೆಲೆ ಬಾಳುವ 92 ಗ್ರಾಂ ತೂಕದ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಳ್ಳುವಲ್ಲಿ ಸಿಟಿ ಮಾರ್ಕೆಟ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
