ಬಿಜೆಪಿ ಸೇರುವಂತೆ ಶಾಸಕರನ್ನು ಖರೀದಿಸಲು ಯತ್ನಿಸುತ್ತಿದ್ದ ಮೂವರ ಬಂಧನ

Social Share

ಹೈದರಬಾದ್,ಅ.27- ತೆಲಂಗಾಣದ ಆಡಳಿತ ಪಕ್ಷದ ಶಾಸಕರನ್ನು ಬಿಜೆಪಿಗೆ ಸೇರಿಸಿಕೊಳ್ಳಲು ಕುದುರೆ ವ್ಯಾಪಾರ ನಡೆಸಲು ಯತ್ನಿಸುತ್ತಿದ್ದ ಆರೋಪದ ಮೇಲೆ ಮೂವರನ್ನು ಫಾರಂಹೌಸ್‍ನಿಂದ ಬಂಧಿಸಲಾಗಿದೆ ಎಂದು ತೆಲಂಗಾಣ ಪೊಲೀಸರು ತಿಳಿಸಿದ್ದಾರೆ.

ಹರಿಯಾಣದ ಫರೀದಾಬಾದ್ನಲ್ಲಿ ಅರ್ಚಕರಾಗಿರುವ ಸತೀಶ್ ಶರ್ಮಾ (33), ತಿರುಪತಿಯಲ್ಲಿ ಮಠವೊಂದರ ಪೀಠಾಪತಿ ಡಿ.ಸಿಂಹಯಾಜಿ (45), ಸ್ವಾಮೀಜಿಯ ಭಕ್ತರಾದ ರೋಹಿತ್ ರೆಡ್ಡಿ ಹಾಗೂ ಸರೂರ್ನಗರದ ಉದ್ಯಮಿ ನಂದಕುಮಾರ್ (48) ಬಂಧಿತರು.

ಶಾಸಕರಾದ ಪಿ.ರೋಹಿತ್ ರೆಡ್ಡಿ, ಭೀರಾಮ್ ಹರ್ಷವರ್ಧನ್ ರೆಡ್ಡಿ, ಪಿ.ರೇಗಾ ಕಾಂತ ರಾವ್, ಗುವ್ವಾಲಾ ಬಾಲರಾಜು ಅವರು ತಮಗೆ ಬಿಜೆಪಿ ಆಮಿಷವೊಡ್ಡುವ ಮೂಲಕ ಸೆಳೆದುಕೊಳ್ಳಲು ಪ್ರಯತ್ನಿಸಿರುವುದಾಗಿ ಆರೋಪಿಸಿದ್ದಾರೆ.

ತಾಂಡೂರು ಶಾಸಕ ಪೈಲಟ್ ರೋಹಿತ್ ರೆಡ್ಡಿ ಅವರ ಫಾರಂಹೌಸ್‍ನಲ್ಲಿ ಈ ಡೀಲ್ ನಡೆದಿದ್ದು, ಅವರೇ ಮೊದಲು ಪೊಲೀಸರಿಗೆ ದೂರು ನೀಡಿದ್ದು ಎಂದು ಹೇಳಲಾಗಿದೆ. ನಂತರ, ಆ ನಾಲ್ವರು ಶಾಸಕರನ್ನು ಮುಖ್ಯಮಂತ್ರಿಗಳ ಅಧಿಕೃತ ನಿವಾಸ ಪ್ರಗತಿ ಭವನಕ್ಕೆ ಕರೆದೊಯ್ಯಲಾಗಿದೆ.

ತೆಲಂಗಾಣ ರಾಷ್ಟ್ರ ಸಮಿತಿಯ ನಾಲ್ವರು ಶಾಸಕರು ಈ ಬಗ್ಗೆ ಪೊಲೀಸರಿಗೆ ಸುಳಿವು ನೀಡಿದ್ದಾರೆ ಎಂದು ಪೊಲೀಸ್ ಮುಖ್ಯಸ್ಥ ಸ್ಟೀಫನ್ ರವೀಂದ್ರ ಮಾಧ್ಯಮಗಳಿಗೆ ಹೇಳಿದ್ದಾರೆ. 100 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಮೊತ್ತದ ಡೀಲ್‍ಗಳು ನಡೆದಿರಬಹುದು. ಪ್ರಮುಖ ವ್ಯಕ್ತಿಗೆ 100 ಕೋಟಿ, ಜೊತೆಗೆ ಪ್ರತಿ ಶಾಸಕರಿಗೆ 50 ಕೋಟಿ ನೀಡುವುದಾಗಿ ಹೇಳಿದ್ದರು ಎಂದೂ ಪೊಲೀಸರು ಆರೋಪಿಸಿದ್ದಾರೆ.

ಅ.27ಕ್ಕೆ ಪತ್ರಿಕಾ ರಂಗದ ಭೀಷ್ಮನ ಸ್ವರಚಿತ ‘ನಾನು ಹಿಂದೂ ರಾಮಯ್ಯ’ ಕೃತಿ ಲೋಕಾರ್ಪಣೆ

ಸುಮಾರು 100 ಕೋಟಿ ರೂಪಾಯಿ ಹಣದ ಆಮಿಷವೊಡ್ಡುವ ಮೂಲಕ ಶಾಸಕರನ್ನು ಪಕ್ಷ ತೊರೆಯುವಂತೆ ಮನವೊಲಿಸಲು ಪ್ರಯತ್ನಿಸಿರುವ ಬಗ್ಗೆ ವರದಿಯಾಗಿದೆ. ನಕಲಿ ಐಡಿ ಕಾರ್ಡ್‍ಗಳನ್ನು ಬಳಸಿ ಅವರು ನಗರಕ್ಕೆ ಬಂದಿರುವ ಸುಳಿವು ದೊರೆತಿದೆ. ಆಮಿಷ ಆರೋಪದ ಸಂಬಂಧ ತನಿಖೆ ಕೈಗೊಳ್ಳುವುದಾಗಿ ಪೊಲೀಸ್ ಕಮಿಷನರ್ ಹೇಳಿದ್ದಾರೆ.

ಅಜೀಜ್ ನಗರದಲ್ಲಿರುವ ಫಾರಂಹೌಸ್‍ನಲ್ಲಿ ನಿನ್ನೆ ಸಂಜೆ ಈ ಬಗ್ಗೆ ಶೋಧ ನಡೆಸಲಾಯಿತು. ಪಕ್ಷ ಬದಲಾಯಿಸಲು ಆಮಿಷ ಮತ್ತು ಲಂಚ ನೀಡಲಾಗುತ್ತಿದೆ ಎಂದು ಶಾಸಕರು ಪೊಲೀಸರಿಗೆ ಕರೆ ಮಾಡಿದ್ದರು. ಪಕ್ಷ ಬದಲಾಯಿಸಲು ಅವರಿಗೆ ದೊಡ್ಡ ಮೊತ್ತದ ಹಣ ಮತ್ತು ಹುದ್ದೆಗಳನ್ನು ನೀಡಲಾಗುತ್ತದೆ ಎಂದು ಅವರು ಹೇಳಿದರು ಎಂದೂ ಪೊಲೀಸರು ಹೇಳಿಕೊಂಡಿದ್ದಾರೆ.

ಈ ವರ್ಷದ ಆರಂಭದಲ್ಲಿ ಏಕನಾಥ್ ಶಿಂಧೆಯವರ ಬಿಜೆಪಿ ಬೆಂಬಲಿತ ಬಂಡಾಯವು ಉದ್ಧವ್ ಠಾಕ್ರೆ ಸರ್ಕಾರವನ್ನು ಉರುಳಿಸಿದ ಮಹಾರಾಷ್ಟ್ರದ ಬೆಳವಣಿಗೆಗಳ ಬಳಿಕ ಆಪರೇಷನ್ ಕಮಲದ ಆರೋಪಗಳು ಹೆಚ್ಚಾಗಿ ಕೇಳಿಬರುತ್ತಿದೆ. ಇತ್ತೀಚೆಗೆ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷ ಸಹ ದೆಹಲಿ ಮತ್ತು ಪಂಜಾಬ್ನಲ್ಲಿ ಬಿಜೆಪಿ ತನ್ನ ಶಾಸಕರನ್ನು ತಮ್ಮ ಪಕ್ಷಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂದು ಹೇಳಿಕೊಂಡಿದೆ.

ಈ ಮಧ್ಯೆ, ಟಿಆರ್‍ಎಸ್‍ನ ಸುಮಾರು 18 ಶಾಸಕರು ಶೀಘ್ರದಲ್ಲೇ ಬಿಜೆಪಿಗೆ ಸೇರಲಿದ್ದಾರೆ ಎಂದು ಆಗಸ್ಟ್‍ನಲ್ಲಿ ಬಿಜೆಪಿ ನಾಯಕರೊಬ್ಬರು ಹೇಳಿಕೊಂಡಿದ್ದಾರೆ ಎಂದು ವರದಿಯಾಗಿತ್ತು. ಆಡಳಿತ ಪಕ್ಷದ ಡ್ರಾಮಾ ಇನ್ನು, ಕುದುರೆ ವ್ಯಾಪಾರ ಆರೋಪ ತಳ್ಳಿಹಾಕಿದ ತೆಲಂಗಾಣ ಬಿಜೆಪಿ ನಾಯಕರಾದ ಡಿ.ಕೆ.ಅರುಣಾ ಮತ್ತು ನಿಜಾಮಾಬಾದ್‍ನ ಬಿಜೆಪಿ ಸಂಸದ ಡಿ.ಅರವಿಂದ್, ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಮತ್ತು ಅವರ ಪಕ್ಷವು ಮುನುಗೋಡೆ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಈ ಗಮನವನ್ನು ಬೇರೆಡೆ ಸೆಳೆಯಲು ಕುದುರೆ ವ್ಯಾಪಾರ ನಾಟಕವನ್ನು ಆಯೋಜಿಸಿದೆ ಎಂದು ಹೇಳಿದ್ದಾರೆ.

ಗ್ರಾ. ಪಂ. ಅಧ್ಯಕ್ಷನ ಮನೆಗೆ ನುಗ್ಗಿ 23 ಲಕ್ಷ ಹಣ, ಚಿನ್ನ ದರೋಡೆ

ಇದೊಂದು ನಾಟಕ. ಮುನುಗೋಡಿನಲ್ಲಿ ಟಿಆರ್‍ಎಸ್ ಸೋಲುತ್ತಿದೆ ಎಂದು ಕೆಸಿಆರ್ ಅರ್ಥಮಾಡಿಕೊಂಡಿದ್ದಾರೆ. ಹಾಗಾಗಿ ಅವರು ಈ ನಾಟಕವನ್ನು ರೂಪಿಸಿದ್ದಾರೆ ಎಂದು ಬಿಜೆಪಿ ಮುಖಂಡ ವಿವೇಕ್ ವೆಂಕಟಸ್ವಾಮಿ ಹೇಳಿದ್ದಾರೆ.

Articles You Might Like

Share This Article