ದೇವನಹಳ್ಳಿ, ಜು.15- ಕಾರಿನಲ್ಲಿ ಬಂದು ವ್ಯಕ್ತಿಯ ಕಾಲಿಗೆ ಹೊಡೆದು 10 ಗ್ರಾಂ ಸರ ಕಿತ್ತುಕೊಂಡು ಎಟಿಎಂನಿಂದ 15 ಸಾವಿರ ಹಣ ಡ್ರಾಮಾಡಿಸಿಕೊಂಡು ಪರಾರಿಯಾಗಿದ್ದ ಮೂವರನ್ನು ದೇವನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿಯ ಅನಿಲ್ಕುಮಾರ್ ಅಲಿಯಾಸ್ ದೇವು (22), ಸುಬ್ರಹ್ಮಣಿ ಅಲಿಯಾಸ್ ಸುಟ್ಟ (19) ಮತ್ತು ಪವನ್ಕುಮಾರ್ (24) ಬಂಧಿತರು.
ಆರೋಪಿಗಳಿಂದ 10 ಗ್ರಾಂ ಸರ, ಮಾರುತಿ 800 ಕಾರು ಹಾಗೂ ಕಬ್ಬಿಣದ ರಾಡನ್ನು ವಶಪಡಿಸಿಕೊಂಡಿದ್ದಾರೆ.
ಜುಲೈ 8ರಂದು ದೇವನಹಳ್ಳಿ ಬೈಪಾಸ್ನಲ್ಲಿರುವ ರಿಗಾನ್ ಹೋಟೆಲ್ನಲ್ಲಿ ಪಿರ್ಯಾದುದಾರರು ತನ್ನ ಗೆಳತಿಯೊಂದಿಗೆ ಊಟ ಮುಗಿಸಿಕೊಂಡು ರಾತ್ರಿ 10.30ರ ಸುಮಾರಿನಲ್ಲಿ ದೇವನಹಳ್ಳಿಯಿಂದ ಬೆಂಗಳೂರು ನಗರದ ಕಡೆಗೆ ಹೊರಡುತ್ತಿದ್ದರು.
ಡಾಬಾಗೇಟ್ ಬಳಿ ಮಾರುತಿ 800 ಕಾರಿನಲ್ಲಿ ಬಂದ ಇಬ್ಬರು ದರೋಡೆಕೋರರು ಇವರನ್ನು ಅಡಗಟ್ಟಿ ಕಬ್ಬಿಣದ ರಾಡ್ನಿಂದ ಪಿರ್ಯಾದಿ ಎಡಗಾಲಿಗೆ ಹೊಡೆದು ಅವರ ಕತ್ತಿನಲ್ಲಿದ್ದ 10 ಗ್ರಾಂ ಚಿನ್ನದ ಸರವನ್ನು ಕಿತ್ತುಕೊಂಡಿದ್ದಾರೆ.
ನಂತರ ದೇವನಹಳ್ಳಿ ವಿಜಯಪುರ ಕ್ರಾಸ್ಬಳಿ ಇರುವ ಬ್ಯಾಂಕ್ ಆಫ್ ಇಂಡಿಯಾ ಎಟಿಎಂ ಬಳಿ ಪಿರ್ಯಾದಿಯನ್ನು ಕರೆದುಕೊಂಡು ಹೋಗಿ ಎಟಿಎಂನಲ್ಲಿ 15 ಸಾವಿರ ಹಣ ಡ್ರಾ ಮಾಡಿಸಿಕೊಂಡು ಪರಾರಿಯಾಗಿದ್ದರು.
ಈ ಬಗ್ಗೆ ಪಿರ್ಯಾದಿದಾರರು ದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿ ಸರ, ಕಾರು ವಶಪಡಿಸಿಕೊಂಡಿದ್ದಾರೆ.
ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ಅನೂಪ್ ಎ ಶೆಟ್ಟಿ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ರಮೇಶ್ ನೇತೃತ್ವದ ಸಿಬ್ಬಂದಿ ತಂಡ ಈ ಕಾರ್ಯಾಚರಣೆ ಕೈಗೊಂಡಿತ್ತು.