ಸಿರಖ್ , ಅ 8-ಇಂದು ಮುಂಜಾನೆ ರಾಜಸ್ಥಾನದ ಸಿಕಖ್ ಜಿಲ್ಲಾಯ ಐತಿಹಾಸಿಕ ಖಾತು ಶ್ಯಾಮ್ ದೇವಾಲಯದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ ಮೂವರು ಮಹಿಳೆಯರು ಸಾವನ್ನಪ್ಪಿ, ಹಲವರು ಗಾಯಗೊಂಡಿದ್ದಾರೆ. ಹಿಂದೂಗಳ ಶುಭ ದಿನವಾದ ಗೈರಾಸ್ ಹಬ್ಬಕ್ಕಾಗಿ ರಾಜ್ಯದ ವಿವಿದೆಡೆಗಳಿಂದ ದೇವರ ದರ್ಶನಕ್ಕೆ ಮುಂಜಾನೆಯೆ ಭಕ್ತರು ಜಮಾಯಿಸಿ ಉದ್ದನೆಯ ಸರತಿ ಸಾಲುಗಳಲ್ಲಿ ನಿಂತಿದ್ದರು.
ಬೆಳಗಿನ ಜಾವ 4.30ರ ಸುಮಾರಿಗೆ ದೇವಸ್ಥಾನದ ಬಾಗಿಲು ತೆರೆಯುತ್ತಿದ್ದಂತೆಯೇ ಭಕ್ತರ ದಂಡು ದರ್ಶನಕ್ಕೆ ಮುಗಿಬಿದ್ದು ನುಗ್ಗಿದಾಗ ಈ ದುರ್ಘಟನೆ ನಡೆದಿದೆ. ಸರದಿ ನಿಂತಿದ್ದ 63 ವರ್ಷದ ಮಹಿಳೆ ಕುಸಿದು ಬಿದ್ದಿದ್ದಾರೆ. ಆಕೆಯ ಹಿಂದೆಯೇ ಇನ್ನಿಬ್ಬರು ಮಹಿಳೆಯರು ಕೂಡ ರಭಸದಿಂದ ಅವರ ಮೇಲೆ ಬಿದ್ದಿದ್ದಾರೆ. ಉಳಿದ ಭಕ್ತರು ಅರಿತದೆ ಮುನ್ನುಗಿದಾಗ ಕಾಲ್ತುಳಿತದಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ ರಾಷ್ಟ್ರದೀಪ್ ತಿಳಿಸಿದ್ದಾರೆ.
ಘಟನೆಯ ಸ್ಪಷ್ಟತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ಹೇಳಿದರು.ಭಕ್ತರ ದಂಡನ್ನು ನಿಯಂತ್ರಿಸಲು ಭದ್ರತಾ ಸಿಬಂದಿ ಹರಸಾಹಸ ಪಟ್ಟಿದಾರೆ.