ಬೆಂಗಳೂರು,ಜೂ.18- ಬಹುಭಾಷಾ ನಟ ಕಮಲ್‌ಹಾಸನ್ ಅವರ ನಟನೆಯ ಥಗ್‌ಲೈಫ್ ಚಿತ್ರ ಬಿಡುಗಡೆಯ ನಿಟ್ಟಿನಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕನ್ನಡಪರ ಸಂಘಟನೆಗಳ ಮುಖಂಡರಿಗೆ ಪೊಲೀಸರು ನೋಟೀಸ್ ನೀಡಿದ್ದಾರೆ.
ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಥಗ್‌ಲೈಫ್ ಬಿಡುಗಡೆಗೆ ಸಿದ್ಧತೆಗಳು ನಡೆದಿವೆ. ಈ ಸಂಬಂಧಪಟ್ಟಂತೆ ಯಾವುದೇ ಅಹಿತಕರ ಘಟನೆಗಳು ನಡೆಯಬಾರದು ಎಂಬ ಕಾರಣಕ್ಕಾಗಿ ಪೊಲೀಸರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
ಕರವೇ ರಾಜ್ಯಾಧ್ಯಕ್ಷ ಪ್ರವೀಣ್‌ಶೆಟ್ಟಿ ಅವರ ಮನೆಗೆ ಪೊಲೀಸರು ನೋಟೀಸ್ ಅಂಟಿಸಿದ್ದಾರೆ. ಪೊಲೀಸರ ನೋಟೀಸ್ ಸ್ವೀಕರಿಸಲು ಪ್ರವೀಣ್‌ಶೆಟ್ಟಿ ನಿರಾಕರಿಸಿದ್ದು, ಯಾರಾದರೂ ಥಿಯೇಟರ್‌ಗೆ ಬೆಂಕಿ ಹಚ್ಚಿದರೆ ನಾವು ಹೊಣೆಯಾಗಲು ಸಾಧ್ಯವೇ?, ನಾನು ನೋಟೀಸ್ ತೆಗೆದುಕೊಳ್ಳುವುದಿಲ್ಲ. ನೀವು ಕಾನೂನಿನ ಪ್ರಕಾರ ಕಾಂಪೌಂಡ್‌ಗೆ ನೋಟೀಸ್ ಅಂಟಿಸಿದ್ದೀರ. ಇದಕ್ಕೆ ನನ್ನ ವಿರೋಧವಿಲ್ಲ ಎಂದು ಹೇಳಿದ್ದಾರೆ.
ಕಮಲ್‌ಹಾಸನ್ ಹೇಳಿಕೆ ವಿರುದ್ಧ ಕ್ರಮ ಕೈಗೊಳ್ಳುವಂತೆ ನಾವು ಪೊಲೀಸ್ ಠಾಣೆಗೆ ದೂರು ನೀಡಿದ್ದೆವು. ಅದರ ಬಗ್ಗೆ ಯಾವ ಕ್ರಮ ಕೈಗೊಳ್ಳಲಾಗಿದೆ? ಅವರು ನ್ಯಾಯಾಲಯಕ್ಕೆ ಹೋಗುವ ಮುನ್ನವೇ ನಾವು ದೂರು ನೀಡಿದ್ದೆವು. ಅದಕ್ಕೆ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಹೈಕೋರ್ಟ್ ಸೂಚನೆ ಹೊರತಾಗಿಯೂ ಅವರು ಕ್ಷಮೆ ಕೇಳಿಲ್ಲ. ಹೀಗಾದರೆ ಕನ್ನಡ ಹಾಗೂ ಕನ್ನಡ ಹೋರಾಟದ ಕತೆಯೇನು? ಎಂದು ಪ್ರವೀಣ್‌ಶೆಟ್ಟಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹೋರಾಟಕ್ಕೆ ನಾವೇ ಇನ್ನೂ ಸಿದ್ಧವಾಗಿಲ್ಲ. ಅದಕ್ಕೂ ಮೊದಲೇ ಪೊಲೀಸರು ನೋಟೀಸ್ ನೀಡಿದ್ದಾರೆ. ಹೀಗಾದರೆ ಮುಂದಿನ ದಿನಗಳಲ್ಲಿ ಕನ್ನಡ ಭಾಷೆಯ ಸ್ಥಿತಿಗತಿಯೇನು?, ನಾವು ಹಲವು ಠಾಣೆಗಳಿಗೆ ನೀಡಿರುವ ದೂರನ್ನು ಆಧರಿಸಿ ಪ್ರಕರಣ ದಾಖಲಿಸುವ ಕೆಲಸವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನಾವು ಎಲ್ಲಿಯೂ ಕಲ್ಲು ಹೊಡೆಯುವುದಿಲ್ಲ, ಬೆಂಕಿ ಹಚ್ಚುವುದಿಲ್ಲ, ಕಲ್ಲು ಹೊಡೆಯಲು ಆಗುವುದಿಲ್ಲ ಎಂದಾದ ಮೇಲೆ ಕನಿಷ್ಠ ಪಕ್ಷ ಸೊಲ್ಲನ್ನಾದರೂ ಎತ್ತಬೇಕು. ಅದಕ್ಕೂ ಅವಕಾಶ ಇಲ್ಲ ಎಂದರೆ ಹೇಗೆ? ಎಂದು ಪ್ರಶ್ನಿಸಿದರು.
ಯಾವ ರೀತಿ ಹೋರಾಟ ನಡೆಯುತ್ತದೆ ಎಂಬ ಬಗ್ಗೆ ನಾವು ಪೊಲೀಸರಿಗೆ ಪೂರ್ವ ಮಾಹಿತಿ ನೀಡುತ್ತೇವೆ. ಅಗತ್ಯವಿರುವ ಎಲ್ಲಾ ಸಹಕಾರಗಳನ್ನು ನೀಡುತ್ತೇವೆ ಎಂದು ಹೇಳಿದರು.
ಪೊಲೀಸರು ಕನ್ನಡಪರ ಸಂಘಟನೆಗಳ ಹಾಗೂ ಅದರ ಮುಖಂಡರುಗಳ ಮನೆಗಳಿಗೆ ನೋಟೀಸ್ ತಲುಪಿಸಿದ್ದು, ಥಗ್‌ಲೈಫ್ ಚಿತ್ರ ಬಿಡುಗಡೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆದರೆ ಸಂಘಟನೆಯ ಮುಖಂಡರೇ ಹೊಣೆಯಾಗಬೇಕಾಗುತ್ತದೆ, ಎಚ್ಚರಿಕೆ ಎಂದಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಹೋರಾಟಕ್ಕೆ ಅವಕಾಶವಿದೆ. ಅದಕ್ಕೆ ಹೊರತಾಗಿ ಬೇರೆ ರೀತಿಯ ಪ್ರತಿಭಟನೆಗಳು ವ್ಯಕ್ತವಾಗಬಾರದು ಎಂಬ ಕಾರಣಕ್ಕೆ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಕಾನೂನು ಸುವ್ಯವಸ್ಥೆ ಪಾಲನೆಗೆ ಇಂತಹ ಕ್ರಮಗಳು ಅನಿವಾರ್ಯ ಎಂದು ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ.