ಕೊರೊನಾ ಸೋಂಕಿನಿಂದ ಗುಣಮುಖರಾದವರಿಗೆ ಕಾಡುತ್ತಿದೆ ಥೈರಾಯ್ಡ್ ಸಮಸ್ಯೆ

Social Share

ಬೆಂಗಳೂರು, ಫೆ.9- ಕೊರೊನಾ ಸೋಂಕು ಕಾಣಿಸಿಕೊಂಡು ಗುಣಮುಖರಾದವರಿಗೆ ಹೊಸ ತಲೆ ಬೇನೆ ಆರಂಭವಾಗಿದೆ. ಸೋಂಕು ಕಾಣಿಸಿಕೊಂಡು ಗುಣಮುಖರಾದವರಿಗೆ ಇದೀಗ ಇದ್ದಕ್ಕಿಂದ್ದಂತೆ ಥೈರಾಯ್ಡ್ ಸಮಸ್ಯೆ ಕಾಡಲಾರಂಭಿಸಿದೆ. ಈ ಮೊದಲು ಕೊರೊನಾ ಸೋಂಕು ಕಾಣಿಸಿಕೊಂಡು ಗುಣಮುಖರಾದವರಿಗೆ ಸಕ್ಕರೆ ಕಾಯಿಲೆ, ಹೃದಯಸಂಬಂಧಿ ರೋಗ ಲಕ್ಷಣ ಹಾಗೂ ಗ್ಯಾಸ್ಟ್ರಿಕ್ ಸಮಸ್ಯೆ ಕಾಣಿಸಿಕೊಳ್ಳುವುದು ಮಾಮೂಲಾಗಿತ್ತು.
ಸಕ್ಕರೆ ಕಾಯಿಲೆ ಇಲ್ಲದವರಿಗೂ ಸೋಂಕು ಕಾಣಿಸಿಕೊಂಡ ನಂತರ ಸಕ್ಕರೆ ಅಂಶ ಹೆಚ್ಚಾಗಿರುವುದು ಕಂಡು ಬರುತಿತ್ತು. ಇದೀಗ ಸಕ್ಕರೆ ಕಾಯಿಲೆ, ಗ್ಯಾಸ್ಟ್ರಿಕ್ ಸಮಸ್ಯೆ ಜತೆಗೆ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಳ್ಳುತ್ತಿರುವುದು ಸೋಂಕಿತರ ತಲೆಬೇನೆಗೆ ಕಾರಣವಾಗಿದೆ.
ಕೆಲ ದಿನಗಳಿಂದ ಸೋಂಕು ತಗುಲಿ ಗುಣಮುಖರಾಗಿ ಮನೆಗಳಿಗೆ ತೆರಳಿದವರಿಗೆ ಇದ್ದಕ್ಕಿದ್ದಂತೆ ಗಂಟಲು ನೋವು ಕಾಣಿಸಿಕೊಳ್ಳತೊಡಗಿದೆ. ಹೀಗಾಗಿ ಮತ್ತೆ ಸೋಂಕಿನಿಂದ ಗುಣಮುಖರಾದವರು ಆಸ್ಪತ್ರೆಗಳಿಗೆ ದೌಡಾಯಿಸುತ್ತಿದ್ದಾರೆ. ಗಂಟಲು ನೋವು, ಕುತ್ತಿಗೆ ಭಾಗದಲ್ಲಿ ಊತ, ಉಗಳು ನುಂಗಲು ಕಷ್ಟವಾಗುವುದು ಸಮಸ್ಯೆಯಿಂದ ಆಸ್ಪತ್ರೆಗಳಿಗೆ ಬಂದವರನ್ನು ತಪಾಸಣೆ ನಡೆಸಿದ ಸಂದರ್ಭದಲ್ಲಿ ಅವರಿಗೆ ಥೈರಾಯ್ಡ್ ಸಮಸ್ಯೆ ಇರುವುದು ದೃಢಪಟ್ಟಿದೆ.
ಸೋಂಕು ಕಾಣಿಸಿಕೊಂಡ ಸಂದರ್ಭದಲ್ಲಿ ನೀಡಲಾಗುವ ಅತಿಯಾದ ಆಂಟಿಬಯೋಟೆಕ್ ಸೇವನೆಯಿಂದ ಹಾರ್ಮೋನ್‍ಗಳಲ್ಲಿ ಬದಲಾವಣೆಯಾಗಿ ಥೈರಾಯ್ಡ್ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ ಎಂದು ತಜ್ಞ ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಹಾಗಂತ ಜನ ಆತಂಕಪಡುವ ಅವಶ್ಯಕತೆ ಇಲ್ಲ. ಸೋಂಕಿನಿಂದ ಗುಣಮುಖರಾದ ವರಿಗೆ ಕೇವಲ ನಾಲ್ಕು ವಾರಗಳ ನಂತರ ಥೈರಾಯ್ಡ್ ಸಮಸ್ಯೆ ದೂರವಾಗಲಿದೆ. ಆದರೆ, ಗುಣಮುಖರಾದವರು ಗಂಟಲು ನೋವು ಕಾಣಿಸಿಕೊಂಡ ಕೂಡಲೆ ವೈದ್ಯರನ್ನು ಭೇಟಿಯಾಗಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ ಎಂದು ವೈದ್ಯರು ಸಲಹೆ ನೀಡಿದ್ದಾರೆ.

Articles You Might Like

Share This Article