ವಿರೋಧದ ನಡುವೆಯೂ ಟಿಪ್ಪು ಜಯಂತಿ ಆಚರಣೆಗೆ ಸಕಲ ಸಿದ್ಧತೆ

BJP-Tippu-Jayanthi--0111111

ಬೆಂಗಳೂರು, ನ.9- ನಾಳೆ ಸರ್ಕಾರ ಆಚರಿಸಲು ಉದ್ದೇಶಿಸಿರುವ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಟಿಪ್ಪು ಜಯಂತಿ ಆಚರಣೆಗೆ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಎರಡು ಸಾವಿರ ಜನರಿಗೆ ಪ್ರವೇಶಕ್ಕೆ ಪಾಸ್ ನೀಡಲಾಗಿದೆ. ಟಿಪ್ಪು ಜಯಂತಿ ಆಚರಣೆಗೆ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳಿಂದ ವ್ಯಾಪಕ ವಿರೋಧ ವ್ಯಕ್ತವಾಗಿದ್ದು, ಇಂದಿನಿಂದಲೇ ಪ್ರತಿಭಟನೆಗಳು ಪ್ರಾರಂಭವಾಗಿವೆ.

ಮುನ್ನೆಚ್ಚರಿಕೆ ವಹಿಸುವಂತೆ ಎಲ್ಲ ಜಿಲ್ಲಾಡಳಿತಗಳಿಗೆ ಸರ್ಕಾರ ಸೂಚನೆ ನೀಡಿದೆ. ಕೊಡಗು, ಚಿಕ್ಕಮಗಳೂರು, ಚಿತ್ರದುರ್ಗ, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಮದ್ದೂರು, ಶ್ರೀರಂಗಪಟ್ಟಣ ಮುಂತಾದ ಕಡೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಸಿದ್ದರಾಮಯ್ಯ ಸರ್ಕಾರದಲ್ಲಿ ಟಿಪ್ಪು ಜಯಂತಿ ಆಚರಣೆಯನ್ನು ಜಾರಿಗೆ ತಂದಿದ್ದು, ಆ ಸಂದರ್ಭದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿ ಕೊಡಗು ಸೇರಿದಂತೆ ಹಲವೆಡೆ ದುರ್ಘಟನೆಗಳು ಸಂಭವಿಸಿದ್ದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕೊಡಗಿನಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಇದಲ್ಲದೆ, ಚಿಕ್ಕಮಗಳೂರು, ಮೂಡಿಗೆರೆ, ಆಲ್ದೂರು, ಕಡೂರು ಮುಂತಾದ ಕಡೆಯೂ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಇಂದು ಬೆಳಗ್ಗೆ 6 ರಿಂದ ನವೆಂಬರ್ 11ರ ಸಂಜೆ 6ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ಚಿತ್ರದುರ್ಗದಲ್ಲೂ ಕೂಡ ಇದೇ ಕ್ರಮ ಕೈಗೊಳ್ಳಲಾಗಿದೆ.
ಹುಬ್ಬಳ್ಳಿ, ಧಾರವಾಡ ಪಟ್ಟಣಗಳಲ್ಲೂ ನಿಷೇಧಾಜ್ಞೆ ಜಾರಿಗೊಳಿಸಿರುವುದಲ್ಲದೆ ಹೆಚ್ಚಿನ ಬಂದೋಬಸ್ತ್ ಮಾಡಲಾಗಿದೆ. ವಿಧಾನಸೌಧದಲ್ಲಿ ನಾಳೆ ನಡೆಯಲಿರುವ ಟಿಪ್ಪು ಜಯಂತಿ ಆಚರಣೆಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಪಾಲ್ಗೊಳ್ಳುತ್ತಿಲ್ಲ. ಅನಾರೋಗ್ಯದ ಹಿನ್ನೆಲೆಯಲ್ಲಿ ವಿಶ್ರಾಂತಿಗೆ ತೆರಳುತ್ತಿರುವುದಾಗಿ ಅವರು ಹೇಳಿ ತಮ್ಮ ಕುಟುಂಬದವರೊಂದಿಗೆ ಮೂರು ದಿನಗಳ ಕಾಲ ನಗರದಿಂದ ಹೊರಹೋಗಿದ್ದಾರೆ.

ಇನ್ನು ನಾಳೆ ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಇದಕ್ಕೂ ಮುನ್ನ ಕಾನೂನು ಸುವ್ಯವಸ್ಥೆ ಹಿನ್ನೆಲೆಯಲ್ಲಿ ರವೀಂದ್ರ ಕಲಾಕ್ಷೇತ್ರದಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡಲು ನಿರ್ಧರಿಸಲಾಗಿತ್ತು. ನಂತರ ಮತ್ತೆ ವಿಧಾನಸೌಧದಲ್ಲೇ ಆಚರಿಸಲು ನಿರ್ಧಾರ ಕೈಗೊಳ್ಳಲಾಗಿದೆ.
ಕಾರ್ಯಕ್ರಮ ಪ್ರವೇಶಕ್ಕೆ ಎರಡು ಸಾವಿರ ಜನರಿಗೆ ಟಿಕೆಟ್‍ಗಳನ್ನು ನೀಡಲು ನಿರ್ಧರಿಸಲಾಗಿದೆ. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಆಹ್ವಾನಿಸಲಾಗಿದ್ದು, ಯಾವುದೇ ರೀತಿಯ ಗೊಂದಲ ಉಂಟಾಗದಂತೆ ಕಟ್ಟೆಚ್ಚರ ವಹಿಸಲಾಗಿದೆ. ಮೆರವಣಿಗೆಗಳನ್ನು ಎಲ್ಲ ಕಡೆ ನಿಷೇಧಿಸಲಾಗಿದೆ. ಒಳಾಂಗಣದಲ್ಲಿ ಮಾತ್ರ ಟಿಪ್ಪು ಜಯಂತಿ ಆಚರಣೆ ಮಾಡಲು ಸೂಚಿಸಲಾಗಿದೆ. ಮೈದಾನಗಳಲ್ಲಿ ಟಿಪ್ಪು ಜಯಂತಿ ಆಚರಣೆಗೆ ಅವಕಾಶ ನೀಡಿಲ್ಲ.