ಟಿಪ್ಪು ಜಯಂತಿ ಫೈಟ್, ಪ್ರತಿಭಟನಾಕಾರರು ಅರೆಸ್ಟ್, ಕೊಡಗಿನಲ್ಲಿ ಅಘೋಷಿತ ಬಂದ್

Tippu-Jayanthi--01

ಬೆಂಗಳೂರು/ಮಡಿಕೇರಿ/ಮಂಗಳೂರು,ನ.10- ಟಿಪ್ಪು ಜಯಂತಿ ಕದನ ರಾಜ್ಯಾದ್ಯಂತ ಜೋರಾಗಿತ್ತು. ಜಯಂತಿ ಆಚರಣೆಗೆ ಪರ-ವಿರೋಧ ವ್ಯಕ್ತವಾಗಿದ್ದು, ಪೊಲೀಸರು ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ, ಪರಸ್ಪರ ಆರೋಪ-ಪ್ರತ್ಯಾರೋಪ, ತಳ್ಳಾಟ, ನೂಕಾಟಗಳು ನಡೆದು ಜಯಂತಿ ಆಚರಣೆ ವಿರೋಧಿಸಿ ಪ್ರತಿಭಟನೆ ನಡೆಸಿದ ನೂರಾರು ಜನರನ್ನು ವಿವಿಧೆಡೆ ಪೊಲೀಸರು ವಶಕ್ಕೆ ಪಡೆದಿರುವ ಘಟನೆಗಳ ನಡುವೆಯೂ ಟಿಪ್ಪು ಜಯಂತಿಯನ್ನು ಸರ್ಕಾರದ ವತಿಯಿಂದ ಆಚರಿಸಲಾಯಿತು.

ಕೊಡಗಿನಲ್ಲಿ ಅಘೋಷಿತ ಬಂದ್ ನಡೆದರೆ, ಚಿತ್ರದುರ್ಗದಲ್ಲಿ ನಾಯಕ ಸಮುದಾಯದವರು ಟಿಪ್ಪು ಜಯಂತಿ ಆಚರಣೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದರು. ಕೊಡಗು, ಚಿಕ್ಕಮಗಳೂರು, ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿ, ಧಾರವಾಡ, ಮೈಸೂರು, ಶ್ರೀರಂಗಪಟ್ಟಣ, ಮಂಡ್ಯ ಮುಂತಾದೆಡೆ ಬಿಜೆಪಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಪ್ರತಿಭಟನೆಯ ನಡುವೆಯೂ ನಡೆದ ಟಿಪ್ಪುಸುಲ್ತಾನ್ ಜಯಂತಿ ಆಚರಣೆಯಲ್ಲಿ ಈವರೆಗೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಕೆಎಸ್‍ಆರ್ ತುಕಡಿ, ಆರ್‍ಎಎಫ್ ಕಂಪನಿ, ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿತ್ತು.

ಕೊಡಗು ಜಿಲ್ಲೆ ವಿರಾಜಪೇಟೆಯಲ್ಲಿ ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ಪ್ರತಿಭಟನೆ ಜೋರಾಗಿತ್ತು. ಜಯಂತಿ ಆಚರಣೆಯ ವೇದಿಕೆಯಲ್ಲೇ ಹಲವರು ಪ್ರತಿಭಟನೆ ನಡೆಸಿ ವಿರೋಧ ವ್ಯಕ್ತಪಡಿಸಿದರು. ಸರ್ಕಾರದ ನಡೆಗೆ ತೀವ್ರ ವಿರೋಧ ವ್ಯಕ್ತವಾಯಿತು. ಕೆ.ಜಿ.ಬೋಪಯ್ಯ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.
ಮಡಿಕೇರಿ ಕೋಟೆ ಆವರಣದಲ್ಲಿ ನಡೆದ ಟಿಪ್ಪು ಜಯಂತಿ ಕಾರ್ಯಕ್ರಮದಲ್ಲಿ ಕಪ್ಪು ಪಟ್ಟಿ ಧರಿಸಿ ಆಗಮಿಸಿದ ಎಂಎಲ್‍ಸಿ ಸುನೀಲ್ ಸುಬ್ರಹ್ಮಣ್ಯ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.

ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು. ಆಹ್ವಾನಪತ್ರಿಕೆ ಇಲ್ಲದೆ ಆಗಮಿಸಿದವರನ್ನು ಪ್ರವೇಶದ್ವಾರದಲ್ಲಿಯೇ ತಡೆಯಲಾಯಿತು. ಪ್ರತಿಭಟನೆ ನಡೆಸಿದ ಹಲವರನ್ನು ಪೊಲೀಸರು ವಶಕ್ಕೆ ಪಡೆದರು. ಎರಡು ವರ್ಷಗಳ ಹಿಂದೆ ಸಣ್ಣ ಭದ್ರತಾ ಲೋಪದೋಷದ ಕಾರಣ ಇಬ್ಬರು ಪ್ರಾಣ ಕಳೆದುಕೊಳ್ಳಬೇಕಾಯಿತು. ಈ ಹಿನ್ನೆಲೆಯಲ್ಲಿ ಪೊಲೀಸರು ಸಾಕಷ್ಟು ಮುನ್ನೆಚ್ಚರಿಕಾ ಕ್ರಮ ವಹಿಸಿದ್ದಾರೆ.
ಮಡಿಕೇರಿಯಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಪೊಲೀಸರು ಭದ್ರತಾ ಕಾರ್ಯದಲ್ಲಿ ತೊಡಗಿದ್ದಾರೆ. ಪ್ರತಿಭಟನೆಗೆ ಅವಕಾಶದ ನೀಡದಂತೆ ಎಚ್ಚರವಹಿಸಿದ್ದಾರೆ.

ಟಿಪ್ಪು ಜಯಂತಿ ಆಚರಣೆ ಹಮ್ಮಿಕೊಂಡಿರುವ ತುಮಕೂರಿನ ಬಾಲಭವನದ ಸುತ್ತ ಒಂದು ಕಿ.ಮೀವರೆಗೆ ಪೊಲೀಸರನ್ನು ನಿಯೋಜಿಸಲಾಗಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಹಿರಿಯ ಪೊಲೀಸ್ ಅಧಿಕಾರಿಗಳು ನೀಡಿದ್ದಾರೆ. ಟಿಪ್ಪು ಜಯಂತಿ ಆಚರಣೆಗೆ ಮುನ್ನುಡಿ ಬರೆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಸಚಿವ ಜಮೀರ್ ಅಹಮದ್ ಖಾನ್ ಅವರು ಮುಸ್ಲಿಂ ಧರ್ಮಗುರುಗಳೊಂದಿಗೆ ಅವರ ನಿವಾಸಕ್ಕೆ ತೆರಳಿ ಅವರನ್ನು ಸನ್ಮಾನಿಸಿದರು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಪೊಲೀಸ್ ಬಿಗಿಭದ್ರತೆಯೊಂದಿಗೆ ಟಿಪ್ಪು ಜಯಂತಿ ಕಾರ್ಯಕ್ರಮ ನಡೆಯಿತು. ಮಾಧ್ಯಮದವರನ್ನು ಕೂಡ ಆರಂಭದಲ್ಲಿ ನಿರ್ಬಂಧಿಸಲಾಗಿತ್ತು.

ವಿಧಾನಸೌಧದ ನಾಲ್ಕು ಗೇಟ್‍ಗಳಲ್ಲೂ ಪೊಲೀಸ್ ಬಿಗಿಬಂದೋಬಸ್ತ್ ಏರ್ಪಡಿಸಿದ್ದು, ಆಹ್ವಾನಪತ್ರಿಕೆ ಇದ್ದವರಿಗೆ ಮಾತ್ರ ಕಾರ್ಯಕ್ರಮಕ್ಕೆ ಬರಲು ಅವಕಾಶ ನೀಡಲಾಗಿತ್ತು. ಚಿತ್ರದುರ್ಗದಲ್ಲೂ ಟಿಪ್ಪು ಜಯಂತಿ ಆಚರಣೆಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆಯಾದರೂ ಜಿಲ್ಲಾಡಳಿತ ಪೊಲೀಸ್ ಬಂದೋಬಸ್ತ್‍ನಲ್ಲಿ ಜಯಂತಿ ಆಚರಣೆ ಮಾಡಿತು. ಬಿಜೆಪಿ ಜನಪ್ರತಿನಿಧಿಗಳು ಕಾರ್ಯಕ್ರಮದಿಂದ ದೂರ ಉಳಿದಿರು. ಶಾಸಕರಾದ ಶ್ರೀರಾಮುಲು, ಪೂರ್ಣಿಮಾ ಶ್ರೀನಿವಾಸ್, ಗೂಳಿಹಟ್ಟಿ ಶೇಖರ್, ತಿಪ್ಪಾರೆಡ್ಡಿ ಅವರ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ಮುದ್ರಿಸಿದ್ದರೂ ಯಾರೂ ಕಾರ್ಯಕ್ರಮಕ್ಕೆ ಆಗಮಿಸಿರಲಿಲ್ಲ. ಯಾವುದೇ ಬೈಕ್ ರ್ಯಾಲಿ, ಮೆರವಣಿಗೆ, ಪಟಾಕಿ ಸಿಡಿಸದಂತೆ ಜಿಲ್ಲಾಧಿಕಾರಿ ಗಿರೀಶ್ ಖಡಕ್ ಆದೇಶ ನೀಡಿದ ಹಿನ್ನೆಲೆಯಲ್ಲಿ ಯಾವುದಕ್ಕೂ ಆಸ್ಪದ ಕೊಡಲಿಲ್ಲ.

ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ನಾಯಕ ಸಮುದಾಯದವರು ಮತ್ತಿತರ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದರು. ಸರ್ಕಾರದ ಸಕಾಲಿಕ ಕ್ರಮಗಳಿಂದ ಯಾವುದೇ ಅಹಿತಕರ ಘಟನೆಗಳು ನಡೆಯಲಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಟಿಪ್ಪು ಜಯಂತಿ ಆಚರಣೆ ಅಂಗವಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಬಿಜೆಪಿ , ಹಿಂದೂಪರ ಸಂಘಟನೆಗಳು ಧರಣಿ ನಡೆಸಿದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು.