ಗೊಂದಲದ ಗೂಡಾದ ಟಿಪ್ಪು ಜಯಂತಿ | ಕಾರ್ಯಕ್ರಮಕ್ಕೆ ‘ಕೈ’ ಕೊಟ್ಟ ಗಣ್ಯರು | ಜಮೀರ್ ಅಸಮಾಧಾನ

Jameer--01

ಬೆಂಗಳೂರು,ನ.10- ಟಿಪ್ಪು ಜಯಂತಿ ಆಚರಣೆಗೆ ವಿರೋಧ ಒಂದು ಕಡೆಯಾದರೆ, ಮತ್ತೊಂದು ಕಡೆ ಅದರ ಆಚರಣೆಯ ಕಾರ್ಯಕ್ರಮಗಳು ಸಾಕಷ್ಟು ಗೊಂದಲಗಳ ಗೂಡಾಗಿತ್ತು. ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಏರ್ಪಡಿಸಿದ್ದ ಟಿಪ್ಪು ಸುಲ್ತಾನ್ ಜಯಂತಿ ಕಾರ್ಯಕ್ರಮ ಸಂಜೆ 6.30ಕ್ಕೆ ಎಂದು ಸಮಯ ನಿಗದಿಪಡಿಸಿದ್ದರು. ಏಕಾಏಕಿ ಸಮಯವನ್ನು ಬೆಳಗ್ಗೆ 11.30ಕ್ಕೆ ನಿಗದಿ ಮಾಡಿದ್ದರಿಂದ ಗೊಂದಲ ಉಂಟಾಗಿತ್ತು.  ಸರ್ಕಾರದ ವತಿಯಿಂದ ಆಚರಿಸುತ್ತಿರುವ ಟಿಪ್ಪು ಜಯಂತಿಯನ್ನು ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಸಚಿವರು ಉದ್ಘಾಟಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಕಾರ್ಯಕ್ರಮ ಉದ್ಘಾಟಿಸಬೇಕಿತ್ತು. ಆದರೆ ಅವರು ವಿದೇಶ ಪ್ರವಾಸದಲ್ಲಿರುವುದರಿಂದ ಕಾರ್ಯಕ್ರಮ ಉದ್ಘಾಟನೆಗೆ ಹಾಜರಾಗಿರಲಿಲ್ಲ.

ಅಂತಿಮ ಕ್ಷಣದಲ್ಲಿ ರಾಮನಗರಕ್ಕೆ ತೆರಳಬೇಕಿದ್ದ ಸಚಿವ ಡಿ.ಕೆ.ಶಿವಕುಮಾರ್ ಅವರನ್ನು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವೊಲಿಸಿದ್ದರಿಂದ ಅವರು ಕೊನೆ ಕ್ಷಣದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದರು.  ಉಳಿದಂತೆ ಆಹ್ವಾನ ಪತ್ರಿಕೆಯಲ್ಲಿ ವಿಧಾನಪರಿಷತ್‍ನ ಸಭಾಪತಿ ಬಸವರಾಜ್ ಹೊರಟ್ಟಿ, ಸಚಿವರಾದ ಯು.ಟಿ.ಖಾದರ್, ಜಮೀರ್ ಅಹಮ್ಮದ್ ಖಾನ್, ಮಾಜಿ ಸಚಿವರಾದ ರೋಷನ್ ಬೇಗ್, ತನ್ವೀರ್ ಸೇಠ್ ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ ಜನಪ್ರತಿನಿಧಿಗಳ ಹೆಸರಿತ್ತಾದರೂ ಅವರಲ್ಲಿ ಬಹುತೇಕರು ಗೈರಾಗಿದ್ದರು.

ಮುಖ್ಯ ಅತಿಥಿಗಳಾದ ಬಸವರಾಜ್ ಹೊರಟ್ಟಿ ಕಾರ್ಯಕ್ರಮದಿಂದ ದೂರ ಉಳಿದಿದ್ದರು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬದಲಿಗೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಭಾಗವಹಿಸುತ್ತಾರೆ ಎಂದು ಹೇಳಲಾಗಿತ್ತು. ಆದರೆ ಅವರು ಹಾಸನದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಕೊನೆ ಕ್ಷಣದಲ್ಲಿ ಸಚಿವ ಡಿ.ಕೆ.ಶಿವಕುಮಾರ್ ಅವರು ಕಾರ್ಯಕ್ರಮಕ್ಕೆ ಆಗಮಿಸದಿದ್ದರೆ ಕಾರ್ಯಕ್ರಮ ಇನ್ನಷ್ಟು ಅದ್ವಾನಗೊಳುತ್ತಿತ್ತು.   ಕಾರ್ಯಕ್ರಮ ಆರಂಭಗೊಳ್ಳುವ ವೇಳೆಗೆ ಮುಖ್ಯ ಅತಿಥಿಗಳು ಕೈ ಕೊಟ್ಟಿದ್ದರಿಂದ ಕಾರ್ಯಕ್ರಮ ಆಯೋಜಿಸಿದ್ದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ನಿರ್ದೇಶಕ ವಿಶುಕುಮಾರ್ ಮತ್ತು ಜಯಮಾಲಾ ಅವರು ಚಡಪಡಿಸಲಾರಂಭಿಸಿದರು. ತರಾತುರಿಯಲ್ಲಿ ಗಣ್ಯರಿಗೆ ಫೋನ್ ಮಾಡಿ ಕಾಯಕ್ರಮಕ್ಕೆ ಕರೆಯುವ ಪ್ರಯತ್ನ ನಡೆಸಿದರು. ಆದರೆ ಕಾರ್ಯಕ್ರಮ ಉದ್ಘಾಟಿಸಬೇಕಾದವರು ಗೈರುಹಾಜರಾಗಿದ್ದರು.

# ಜಮೀರ್ ಅಹಮ್ಮದ್ ಅಸಮಾಧಾನ:
ಸಮಯ ಬದಲಾವಣೆಯಾಗಿ ಕಾರ್ಯಕ್ರಮದಲ್ಲಿ ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಜಮೀರ್ ಅಹಮ್ಮದ್ ಖಾನ್ ಅಸಮಾಧಾನಗೊಂಡರು.  ದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಜೆ 6.30ಕ್ಕೆ ಕಾರ್ಯಕ್ರಮ ನಿಗದಿ ಮಾಡಲಾಗಿತ್ತು.ಹಾಗಾಗಿ ಎಲ್ಲರಿಗೂ ಸಂಜೆ ಬರಲು ಹೇಳಿದ್ದೆ. ಆದರೆ ಇಲ್ಲಿ ಬೆಳಿಗ್ಗೆಯೇ ಕಾರ್ಯಕ್ರಮ ಆಯೋಜಿಸಲಾಗಿದೆ. ನನಗೂ ಈ ಬಗ್ಗೆ ಸರಿಯಾದ ಮಾಹಿತಿ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಇದು ನನ್ನ ಇಲಾಖೆಯ ಕಾರ್ಯಕ್ರಮ ಅಲ್ಲ. ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಆಯೋಜಿಸಲಾಗಿದೆ. ಸಂಜೆ 6.30ಕ್ಕೆ ಕಾರ್ಯಕ್ರಮ ಎಂದು ನನಗೆ ಹೇಳಲಾಗಿತ್ತು. ಏಕಾಏಕಿ ಸಮಯ ಬದಲಾಗಿದೆ. ಇದಕ್ಕೆ ಕಾರಣ ಯಾರು ಗೊತ್ತಿಲ್ಲ. ಸಚಿವೆ ಜಯಮಾಲ ಅವರೇ ಇದಕ್ಕೆ ಉತ್ತರ ಹೇಳಬೇಕು ಎಂದರು. ಚೆನ್ನಿಗಪ್ಪ ಅವರ ಆರೋಗ್ಯ ವಿಚಾರಿಸಲು ಉಪಮುಖ್ಯಮಂತ್ರಿ ಪರಮೇಶ್ವರ್ ಅವರು ಸಿಂಗಾಪುರಕ್ಕೆ ತೆರಳಿದ್ದಾರೆ. ಅವರು 3.30ಕ್ಕೆ ವಾಪಸ್ಸಾಗಿ ಸಂಜೆ 6 ಗಂಟೆಗೆ ಭಾಗವಹಿಸುವುದಾಗಿ ಹೇಳಿದ್ದರು. ಆದರೆ ಬೆಳಗ್ಗೆಯೇ ಕಾರ್ಯಕ್ರಮ ಆಯೋಜಿಸಿದ್ದರಿಂದ ಗೊಂದಲ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಬಾರದು ಎಂದು ಹೇಳಿರುವುದು ನಿಜ. ಹಿಂದೆ ವಾಲ್ಮೀಕಿ ಜಯಂತಿ ಸಂದರ್ಭದಲ್ಲಿ ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಸಲಾಗಿತ್ತು. ಅನಾರೋಗ್ಯದಿಂದ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಲಾಗಲಿಲ್ಲ. ಅದನ್ನು ದೊಡ್ಡ ವಿಷಯ ಮಾಡಿ ಪ್ರತಿ ಪಕ್ಷಗಳು ಅಪಪ್ರಚಾರ ಮಾಡಿದ್ದರು. ಇಂದು ಟಿಪ್ಪು ಜಯಂತಿಯಲ್ಲಿ ಭಾಗವಹಿಸಲು ಆಗುತ್ತಿಲ್ಲ. ಆಹ್ವಾನ ಪತ್ರಿಕೆಯಲ್ಲಿ ಹೆಸರು ಹಾಕಿಸಿದರೆ ಮತ್ತೊಂದು ಸುತ್ತಿನ ಅಪಪ್ರಚಾರಕ್ಕೆ ದಾರಿ ಮಾಡಿಕೊಟ್ಟಂತಾಗುತ್ತದೆ ಎಂದು ಅವರು ಹೆಸರು ಹಾಕಿಸುವುದು ಬೇಡ ಎಂದು ಹೇಳಿದ್ದಾರೆ ಎಂದು ಜಮೀರ್ ವರದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಆದರೆ ಸಂಜೆ ವೇಳೆ ಕಾರ್ಯಕ್ರಮ ಆಯೋಜಿಸುವುದಾದರೆ ಭಾಗವಹಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದರು. ಆದರೆ ಇಲ್ಲಿ ಯಾರಿಗೂ ತಿಳಿಸದೆ ಏಕಾಏಕಿ ಸಮಯ ಬದಲಾವಣೆ ಮಾಡಲಾಗಿದೆ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.   ಉಳಿದಂತೆ ಶಾಸಕರಾದ ಎನ್.ಎ.ಹ್ಯಾರೀಸ್, ರೋಷನ್ ಬೇಗ್ ಕೆಲವು ಶಾಸಕರು ಭಾಗವಹಿಸಿದ್ದರು.