”ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆಯಲು ಟಿಪ್ಪು ಜಯಂತಿ ಆಚರಣೆ ಕಾರಣ”

Social Share

ಮೈಸೂರು, ಆ.20- ಮಳೆಹಾನಿ ಪ್ರದೇಶಗಳಲ್ಲಿ ಜನ ಮಳೆಯ ರೌದ್ರಾವತಾರಕ್ಕೆ ಮನೆ-ಮಠ ಕಳೆದುಕೊಂಡು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿ ಭೇಟಿ ನೀಡದ ಮಾಜಿ ಸಿಎಂ ಸಿದ್ದ ರಾಮಯ್ಯನವರು ಈಗ ಭೇಟಿ ನೀಡಿ ಜನರ ಸಂಕಷ್ಟ ಆಲಿಸಲಿಲ್ಲ. ಅಲ್ಲದೆ, ಟಿಪ್ಪು ಜಯಂತಿ ಆಚರಣೆಗೆ ತಂದ ವಿಷಯದಲ್ಲೂ ಜನ ಆಕ್ರೋಶ ಗೊಂಡಿದ್ದರಿಂದ ಮೊಟ್ಟೆ ಎಸೆದ ಪ್ರಕರಣ ನಡೆದಿರಬಹುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಳೆಹಾನಿ ಸಂದರ್ಭದಲ್ಲಿ ತಮ್ಮ 75ನೆ ವರ್ಷದ ಹುಟ್ಟುಹಬ್ಬ ಆಚರಣೆ ಸಂಭ್ರಮದಲ್ಲಿ ಸುಖದಲ್ಲಿ ತೇಲುತ್ತಿದ್ದರು. ಆದರೆ, ಇತ್ತ ಜನ ಮಳೆಯ ಅವಾಂತರದಿಂದ ಕಷ್ಟಪಡುತ್ತಿದ್ದರು. ಕನಿಷ್ಟಪಕ್ಷ ಸಾಂತ್ವನ ಹೇಳಲಿಲ್ಲ. ನಮ್ಮ ಕಂದಾಯ ಸಚಿವರು ಸ್ಥಳಕ್ಕೆ ಭೇಟಿ ನೀಡಿ ಪರಿಹಾರ ನೀಡಿದ ನಂತರ ಈಗ ಸಿದ್ದರಾಮಯ್ಯ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. ಅಲ್ಲದೆ, ಟಿಪ್ಪು ಜಯಂತಿ ಆಚರಣೆಯನ್ನು ಜಾರಿಗೆ ತಂದಿದ್ದ ಅವರ ಮೇಲೆ ತಿರುಗಿಬಿದ್ದು ಈ ಘಟನೆ ನಡೆದಿರಬಹುದು ಎಂದು ಹೇಳಿದರು.

ಮೊಟ್ಟೆ ಎಸೆತ ಪ್ರಕರಣ ಸರಿ ಎಂದು ಹೇಳುತ್ತಿಲ್ಲ. ಮುಖ್ಯಮಂತ್ರಿಯಾದಿಯಾಗಿ ಎಲ್ಲರೂ ಇದನ್ನು ತಪ್ಪು ಎಂದೇ ಹೇಳಿದ್ದೇವೆ. ಜನರ ಆಕ್ರೋಶದಿಂದಾಗಿ ಈ ರೀತಿ ಆಗಿರಬಹುದು ಎಂದರು. ಮುಖ್ಯಮಂತ್ರಿಯಾಗಿದ್ದವರು ಸಿದ್ದರಾಮಯ್ಯ. ಅವರ ಆಡಳಿತಾವಯಲ್ಲಿ ಅವರು ಮಾತನಾಡಿದ್ದು ವಿವಾದವಾಗಲಿಲ್ಲ.

ಆದರೆ, ವಿಪಕ್ಷ ನಾಯಕರಾದ ಮೇಲೆ ಅವರು ಮಾತನಾಡುತ್ತಿರುವುದೆಲ್ಲ ವಿವಾದ ಹುಟ್ಟುಹಾಕುತ್ತಿದೆ. ವಿವಾದಾತ್ಮಕ ಮಾತುಗಳನ್ನೇ ಆಡಬಾರದು ಎಂದು ಹೇಳಿದರು. ಪೊಲೀಸರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಇದರಲ್ಲಿ ಅವರ ವೈಫಲ್ಯವಿಲ್ಲ. ಅಗತ್ಯ ಕ್ರಮವನ್ನೂ ಕೈಗೊಂಡಿದ್ದಾರೆ. ಆದರೂ ಈ ಘಟನೆ ನಡೆದಿದೆ. ಇದು ವಿಷಾದಕರ ಎಂದರು.

Articles You Might Like

Share This Article