ಟಿಪ್ಪು ಕೇವಲ ಮತಾಂಧನಷ್ಟೇ ಅಲ್ಲ, ಕನ್ನಡ ದ್ವೇಷಿ ಕೂಡ : ಬಿಜೆಪಿ

Spread the love

ಬೆಂಗಳೂರು,ಮೇ 23- ಮುಂಬರುವ 2023ರ ವಿಧಾನಸಭೆ ಚುನಾವಣೆ ನಂತರ ಕಾಂಗ್ರೆಸ್ ಖಾಲಿ ಖಾಲಿಯಾಗಲಿದೆ ಎಂದು ಬಿಜೆಪಿ ವ್ಯಂಗ್ಯವಾಡಿದೆ.
ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಹಿಡಿತಕ್ಕಾಗಿ ಕೈ ನಾಯಕರು ಕೈ ಪಾಳಯದಲ್ಲಿ ಕೈ ಕೈ ಮಿಲಾಯಿಸುತ್ತಾರೆ. ಆದರೆ, 2023 ಚುನಾವಣೆಯ ನಂತರ ಕಾಂಗ್ರೆಸ್ ಖಾಲಿ ಖಾಲಿ ಎಂದು ಎಚ್ಚರಿಸಿದೆ.

ಒಡೆದ ಮನೆ ಕಾಂಗ್ರೆಸ್ ಪಕ್ಷದಲ್ಲಿ ಮೊದಲೆಲ್ಲಾ ಡಿ.ಕೆ.ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವಿನ ಮನಸ್ತಾಪದ ಪಿಸುಮಾತು ರಾಜ್ಯಕ್ಕೆ ಕೇಳಿಸುತ್ತಿತ್ತು. ಈಗ ಅದರ ಸದ್ದು, ದೆಹಲಿವರೆಗೂ ಕೇಳಿಸುತ್ತಿದೆ. ಕೈ ಕಮಾಂಡ್ ತೇಪೆ ಹಚ್ಚುವ ವ್ಯರ್ಥ ಪ್ರಯತ್ನ ಮಾಡುತ್ತಿದೆ. ಇವರ ಒಳಜಗಳದಿಂದಲೇ ರಾಜ್ಯ ಕಾಂಗ್ರೆಸ್ ಮುಕ್ತವಾಗಲಿದೆ ಎಂದು ಕುಹುಕ ವಾಡಿದೆ.

ಡಿಕೆಶಿ ಮತ್ತು ಸಿದ್ದರಾಮಯ್ಯ ನಡುವಿನ ಮನಸ್ತಾಪಕ್ಕೆ ಎಷ್ಟೊಂದು ಕಾರಣಗಳಿವೆ, ಕಾಂಗ್ರೆಸ್ ಪದಾಕಾರಿಗಳ ಪಟ್ಟಿ, ವಿಧಾನಸಭೆಯ ವಿಪಕ್ಷ ಉಪ ನಾಯಕರ ಸ್ಥಾನ, ಸಿಎಂ ಅಭ್ಯರ್ಥಿ ಘೋಷಣೆ, ಎಂಎಲ್‍ಸಿ ಅಭ್ಯರ್ಥಿ ಹೀಗೆ ಎಲ್ಲದರಲ್ಲೂ ಮುಸುಕಿನ ಗುದ್ದಾಟ. ಮೇಕೆದಾಟು ಪಾದಯಾತ್ರೆಯಲ್ಲಿ, ಬೆಂಗಳೂರಿನ ರಸ್ತೆಗಳಲ್ಲಿ ರಾಜಸ್ಥಾನದ ಚಿಂತನಾ ಶಿಬಿರದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಒಟ್ಟಿಗೆ ನಿಂತು ಎಷ್ಟೇ ಫೋಟೋಶೂಟ್ ಮಾಡಿಸಿಕೊಂಡರೂ, ಒಳ ಬೇಗುದಿ ಶಮನವಾಗುವುದೇ ಎಂದು ಪ್ರಶ್ನಿಸಿದೆ.

ಟಿಪ್ಪು ಸುಲ್ತಾನ್ ಮತಾಂಧನಲ್ಲ ಎನ್ನುವ ಜಾಣಕುರುಡುತನ ಮತ್ತು ಜಾಣಕಿವುಡುತನ ಕಾಂಗ್ರೆಸ್ ನಾಯಕರನ್ನು ಆವರಿಸಿಕೊಂಡಿದೆ.
ಕೊಡಗಿನ ನರಮೇಧ, ಮೇಲುಕೋಟೆಯ ಮಂಡ್ಯ ಅಯ್ಯಂಗಾರರ ಹತ್ಯೆ, ನೆತ್ತರಕೆರೆಯ ಹತ್ಯಾಕಾಂಡ, ಮೈಸೂರು ಒಡೆಯರ ಮೇಲಿನ ದಾಳಿ, ದುರ್ಗದ ಪಾಳೆಯಗಾರರ ಮೇಲಿನ ದಾಳಿ – ಇವೆಲ್ಲ ಯಾವುದರ ಸಂಕೇತ? ಎಂದು ಪ್ರಶ್ನೆ ಹಾಕಿದೆ.

ಟಿಪ್ಪು ಕೇವಲ ಮತಾಂಧನಷ್ಟೇ ಅಲ್ಲ, ಬದಲಾಗಿ ಕನ್ನಡ ದ್ವೇಷಿ ಕೂಡ. ಕನ್ನಡ ಅಸ್ಮಿತೆಯ ಬಗ್ಗೆ ಮಾತನಾಡುವ ಮುನ್ನ ಸಿದ್ದರಾಮಯ್ಯನವರೇ ತಮ್ಮ ಇಬ್ಬಂದಿತನಕ್ಕೆ ಔಷಧಿ ಕಂಡುಕೊಳ್ಳಲಿ. ಕಂದಾಯ ದಾಖಲೆಗಳಿಂದಲೂ ಕನ್ನಡ ಅಳಿಸಿ ಪರ್ಷಿಯನ್ ಜಾರಿಗೊಳಿಸಿದ ಜಿಹಾದಿ ಮನಸ್ಥಿತಿಯ ಟಿಪ್ಪುವಿನ ಬಗ್ಗೆ ಕಾಂಗ್ರೆಸ್ಸಿಗರಿಗೆ ಯಾಕಿಷ್ಟು ಪ್ರೀತಿ ಎಂದು ವ್ಯಂಗ್ಯವಾಡಿದೆ.

Facebook Comments