ಬೆಂಗಳೂರು,ಆ.17- ಬ್ರಿಟಿಷರ ವಿರುದ್ಧ ಹೋರಾಟ ನಡೆಸಿದ ವೀರ ಸಾರ್ವಕರ್ ಒಬ್ಬ ಅಪ್ಪಟ ದೇಶಪ್ರೇಮಿ, ಟಿಪ್ಪು ಸುಲ್ತಾನ್ ಓರ್ವ ದೇಶದ್ರೋಹಿ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಅಂಡಮಾನ್‍ನ ಜೈಲಿನಲ್ಲಿ ಶಿಕ್ಷೆ ಅನುಭವಿಸಿದ ವೀರ ಸಾರ್ವಕರ್ ಎಲ್ಲಿ? ಬ್ರಿಟಿಷರ ವಿರುದ್ಧ ಹೋರಾಟವನ್ನೇ ಮಾಡದ ಟಿಪ್ಪು ಸುಲ್ತಾನ್ ಒಬ್ಬ ಮತಾಂಧ ಎಂದು ಕಿಡಿಕಾರಿದರು.
ಟಿಪ್ಪು ಸುಲ್ತಾನ್ ಎಂದಿಗೂ ಬ್ರಿಟಿಷರ ವಿರುದ್ಧ ಹೋರಾಟವನ್ನೇ ನಡೆಸಲಿಲ್ಲ.ಆತ ಮರಣ ಹೊಂದಿದ್ದು, 1799ರಲ್ಲಿ. ದೇಶದ ಮೊದಲ ಸ್ವತಂತ್ರ ಸಂಗ್ರಾಮ 1857 ಆರಂಭವಾಗಿದ್ದು, ವಾಸ್ತವ ಹೀಗಿರುವಾಗ ಬ್ರಿಟಿಷರ ವಿರುದ್ದ ಹೋರಾಟ ನಡೆಸಿದ್ದ ಎಂದು ಹೇಳುವುದೇ ಹಾಸ್ಯಾಸ್ಪದ ಎಂದು ವ್ಯಂಗ್ಯವಾಡಿದರು.
ನಮ್ಮ ಸರ್ಕಾರ ಸಮರ್ಥವಾಗಿ ಕೆಲಸ ಮಾಡುತ್ತಿದೆ. ಕೇವಲ ಘೋಷಣೆ ಮಾಡಿಲ್ಲ, ಅನುಷ್ಟಾನಕ್ಕೆ ತಂದಿದ್ದೇವೆ. ಸಿಎಂ ಬೊಮ್ಮಾಯಿ ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದಾರೆ. ಕೆಲವು ಸಚಿವರ ಹೇಳಿಕೆ ಬಗ್ಗೆ ನಾನು ಪ್ರತಿಕ್ರಿಯಿಸಲಾರೆ ಎಂದರು.
ಸಚಿವ ಮಾಧುಸ್ವಾಮಿ ವಿರುದ್ದ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, ಮಾಧುಸ್ವಾಮಿ ಸದನದ ಒಳಗೆ ವಿಪಕ್ಷಗಳನ್ನ ಸಮರ್ಥವಾಗಿ ಹಣಿಯುತ್ತಾರೆ.ಆದರೆ ಹೊರಗಡೆ ಯಾಕೆ ಈ ರೀತಿ ಹೇಳಿಕೆ ಕೊಡುತ್ತಾರೋ ಗೊತ್ತಿಲ್ಲ. ಯಾವಯಾವ ಕಾರಣಕ್ಕೋ ಸಚಿವರಾಗಿದ್ದಾರೆ.
ನಾನೇ ಮೇಧಾವಿ, ನಾನೇ ಬುದ್ದಿವಂತ ಅಂದುಕೊಂಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅತಿಯಾದ ಬುದ್ದಿವಂತಿಕೆ ಒಳ್ಳೆಯದಲ್ಲ. ಸಚಿವರು ಇನ್ನು ಮುಂದಾದರೂ ಚೆನ್ನಾಗಿ ಕೆಲಸ ಮಾಡಿ. ಏನೇನೊ ಹೇಳಿಕೆ ನೀಡಿ ಸರ್ಕಾರಕ್ಕೆ ಮುಜುಗರ ತರಬೇಡಿ. ಈ ಬಗ್ಗೆ ಶಾಸಕಾಂಗ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಹಾದಿ ಬೀದಿಯಲ್ಲಿ ಚರ್ಚೆ ಮಾಡುವುದಿಲ್ಲ ಎಂದು ಕಿಡಿಕಾರಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಮುಖ್ಯಮಂತ್ರಿಯಾಗಬೇಕು ಎಂದು ಸಚಿವ ರಾಮುಲು ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ನಮ್ಮಲ್ಲಿ ಹೊಂದಾಣಿಕೆ ರಾಜಕಾರಣ ನಡೆಯುವುದಿಲ. ಈ ರೀತಿ ಯಾರೂ ಹಾದಿಬೀದಿಯಲ್ಲಿ ಮಾತನಾಡಬಾರದು ಎಂದು ಮನವಿ ಮಾಡಿದರು.