ಟಿಪ್ಪು ಜಯಂತಿಯ ರದ್ದುಗೊಳಿಸಿದ ರಾಜ್ಯ ಸರ್ಕಾರದ ವಿರುದ್ಧ ಹೋರಾಟಕ್ಕಿಳಿದ ಕಾಂಗ್ರೆಸ್

ಬೆಂಗಳೂರು, ಆ.1-ಟಿಪ್ಪುಜಯಂತಿಯನ್ನು ರದ್ದುಗೊಳಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಕಾಂಗ್ರೆಸ್ ಹೋರಾಟಕ್ಕಿಳಿಯಲು ಮುಂದಾಗಿದೆ.
ಕಳೆದ ಐದಾರು ವರ್ಷಗಳಿಂದಲೂ ನಿರಂತರವಾಗಿ ನಡೆದು ಬರುತ್ತಿದ್ದ ಟಿಪ್ಪುಜಯಂತಿಯನ್ನು ರದ್ದುಗೊಳಿಸುವ ಮೂಲಕ ರಾಜ್ಯ ಬಿಜೆಪಿ ಸರ್ಕಾರ ಬ್ರಾತೃತ್ವ, ಭಾವೈಕ್ಯತೆಗೆ ಧಕ್ಕೆಯುಂಟು ಮಾಡಿದೆ.

ಜತೆಗೆ ದ್ವೇಶದ ರಾಜಕಾರಣ ಮಾಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಕಳೆದ ಒಂದು ವಾರದಿಂದ ರಾಜಕೀಯ ಬೆಳವಣಿಗೆಗಳಲ್ಲಿ ಮುಳುಗಿದ್ದ ಕಾಂಗ್ರೆಸ್ ಇಂದು ಕೆಪಿಸಿಸಿಯಲ್ಲಿ ಮಹತ್ವದ ಸಭೆ ನಡೆಸಿತು.

ರಾಜೀನಾಮೆ ನೀಡಿ ಪಕ್ಷಾಂತರ ಮಾಡಿರುವ 17 ಮಂದಿ ಅನರ್ಹ ಶಾಸಕರ ಕ್ಷೇತ್ರಗಳಿಗೆ ನಡೆಯುವ ಉಪ ಚುನಾವಣೆಯಲ್ಲಿ ಪ್ರಬಲ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲಲು ಕಾರ್ಯಯೋಜನೆ ರೂಪಿಸುತ್ತಿರುವ ಕಾಂಗ್ರೆಸ್ ಅದೇ ಸಮಯದಲ್ಲಿ ಟಿಪ್ಪು ಜಯಂತಿ ರದ್ದುಗೊಳಿಸಿರುವ ನಿರ್ಧಾರವನ್ನು ಪ್ರತಿಭಟಿಸುವ ಮೂಲಕ ಬಿಜೆಪಿ ಸರ್ಕಾರಕ್ಕೆ ಟಾಂಗ್ ನೀಡಲು ಮುಂದಾಗಿದೆ.

ಇಂದು ನಡೆದ ಸಭೆಯಲ್ಲಿ ಬಹುತೇಕ ನಾಯಕರು ಟಿಪ್ಪು ಜಯಂತಿ ರದ್ದುಗೊಳಿಸಿರುವುದನ್ನು ಪ್ರಬಲವಾಗಿ ವಿರೋಧಿಸಿದ್ದಾರೆ. ಜನರ ಮುಂದೆ ಈ ವಿಚಾರವನ್ನು ಪ್ರಸ್ತಾಪಿಸಿ ಬಿಜೆಪಿಯ ದ್ವೇಶದ ರಾಜಕಾರಣವನ್ನು ಬಯಲು ಮಾಡಲು ನಿರ್ಧರಿಸಿದ್ದಾರೆ. ಆದರೆ, ಪ್ರತಿಭಟನೆಯ ಸ್ವರೂಪ, ದಿನಾಂಕದ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ.