ಬೆಂಗಳೂರು, ಡಿ.17- ಹೊಸ ವರ್ಷದಂದೇ ವೈಕುಂಠ ಏಕಾದಶಿ ಬಂದಿರುವುದರಿಂದ ಈ ಬಾರಿ ವಯ್ಯಾಲಿ ಕಾವಲ್ನಲ್ಲಿರುವ ಟಿಟಿಡಿ ವೆಂಕಟೇಶ್ವರ ದೇವಸ್ಥಾನದಲ್ಲಿ ಎರಡು ದಿನಗಳ ಕಾಲ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ವಯ್ಯಾಲಿ ಕಾವಲ್ನ ಟಿಟಿಡಿ ಅಧ್ಯಕ್ಷ ಡಾ.ಸಂಪತ್ ರವಿ ನಾರಾಯಣನ್, ಜನವರಿ 1ರಂದು ಬೆಳಗ್ಗೆ 6 ಗಂಟೆಯಿಂದಲೇ ಭಕ್ತರಿಗೆ ಸ್ವಾಮಿಯ ದರ್ಶನಕ್ಕೆ ಅವಕಾಶ ನೀಡಲಾಗುವುದು. ಇದಕ್ಕಾಗಿ ಮೂರು ವಿಶೇಷ ಕೌಂಟರ್ಗಳನ್ನು ಕೂಡ ತೆರೆಯಲಾಗಿದೆ ಎಂದು ತಿಳಿಸಿದರು.
ಈ ಬಾರಿ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುವ ಸಾಧ್ಯತೆ ಇರುವುದರಿಂದ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿದೆ. ಹಿರಿಯ ನಾಗರಿಕರು, ವಿಶೇಷ ಚೇತನರು, ಬಾಣಂತಿಯರಿಗೆ ಬೇಗ ದರ್ಶನ ಪಡೆಯಲು ವಿಶೇಷ ಕೌಂಟರ್ ತೆರೆಯಲಾಗಿದೆ ಎಂದರು.
ವೈಕುಂಠ ಏಕಾದಶಿ ಪ್ರಯುಕ್ತ ಈ ಬಾರಿ ಎರಡು ದಿನಗಳ ಕಾಲ ಗೀತಾ ಪಾರಾಯಣ, ಶಾಸ್ತ್ರೀಯ ಸಂಗೀತ, ಭಜನೆ, ಭರತನಾಟ್ಯ ಸೇರಿದಂತೆ ಹಲವು ಸಾಂಸ್ಕøತಿಕ ಕಾರ್ಯಕ್ರಮಗಳನ್ನು ಕೂಡ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.
ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ವಿರುದ್ಧ ಬಿಎಸ್ವೈ ಕಿಡಿ
ನೈವೇದ್ಯ ಸೇವೆ ಸಂದರ್ಭದಲ್ಲಿ ಬೆಳಗ್ಗೆ 9 ರಿಂದ 9.30, ಮಧ್ಯಾಹ್ನ 4 ರಿಂದ 4.30ರ ವರೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಇದಕ್ಕೆ ಜನತೆ ಸಹಕರಿಸಬೇಕು ಎಂದು ಇದೇ ಸಂದರ್ಭದಲ್ಲಿ ಮನವಿ ಮಾಡಿದರು.
ಕಳೆದ ಬಾರಿ ಕೊರೊನಾ ಭೀತಿ ನಡುವೆಯೂ ಸುಮಾರು 75 ಸಾವಿರ ಭಕ್ತರು ಬಂದಿದ್ದರು. ಈ ಬಾರಿ ಒಂದು ಲಕ್ಷಕ್ಕೂ ಹೆಚ್ಚು ಭಕ್ತರು ಬರಬಹುದೆಂಬ ನಿರೀಕ್ಷೆ ಇದೆ. ಗಣ್ಯ ವ್ಯಕ್ತಿಗಳಿಗೆ ವಿಶೇಷ ಕೌಂಟರ್ ಕೂಡ ತೆರೆಯಲಾಗಿದೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಟಿಟಿಡಿ ಪದಾಕಾರಿಗಳು ಹಾಜರಿದ್ದರು. ಮಂಡೂರು ಬಳಿ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಮಂಡೂರು ಬಳಿ ಸುಮಾರು 10 ಎಕರೆ ಪ್ರದೇಶದಲ್ಲಿ ತಿರುಪತಿ ಮಾದರಿಯಲ್ಲೇ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ನಿರ್ಮಿಸಲು ಈಗಾಗಲೇ ನಿರ್ಧರಿಸಲಾಗಿದೆ.
ಶೀಘ್ರದಲ್ಲೇ ಕಾಮಗಾರಿ ಆರಂಭಗೊಂಡು ಅದನ್ನು ಲೋಕಾರ್ಪಣೆಗೊಳಿಸಲು ಸಂಕಲ್ಪ ತೊಡಲಾಗಿದೆ ಎಂದು ಟಿಟಿಡಿ ಸದಸ್ಯ ಹಾಗೂ ವಿಧಾನ ಪರಿಷತ್ ಸದಸ್ಯ ಟಿ.ಎ.ಶರವಣ ತಿಳಿಸಿದರು. ಇಲ್ಲಿ ಶಾಸ್ತ್ರೋಕ್ತವಾಗಿ ಭವ್ಯ ಮಂದಿರ ನಿರ್ಮಾಣವಾಗಲಿದ್ದು, ಆ ಭಾಗದ ಜನರಿಗೆ ಸ್ವಾಮಿಯ ದರ್ಶನಕ್ಕೆ ಅನುಕೂಲ ಮಾಡಿಕೊಡಲು ಟಿಟಿಡಿ ನಿರ್ಧರಿಸಿದೆ ಎಂದು ಅವರು ತಿಳಿಸಿದರು.
ಜನವರಿ 1 ಮತ್ತು 2ರಂದು ವಯ್ಯಾಲಿ ಕಾವಲ್ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಒಂದು ಲಕ್ಷ ಲಾಡುಗಳನ್ನು ವಿತರಿಸಲು ನಿರ್ಧರಿಸಲಾಗಿದೆ ಎಂದು ಅವರು ತಿಳಿಸಿದರು.
#TirumalaTirupatiDevasthanam, #Vyalikaval,