ಬೆಂಗಳೂರು,ಫೆ.13-ಚರ್ಮಗಂಟು ರೋಗದಿಂದ ಮೃತಪಟ್ಟ ಜಾನುವಾರುಗಳ ಪರಿಹಾರ ಮೊತ್ತ ಹೆಚ್ಚಳದ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನಿಸಲಾಗುವುದು ಎಂದು ಪಶು ಸಂಗೋಪನ ಸಚಿವ ಪ್ರಭು ಚವ್ಹಾಣ್ ವಿಧಾನಸಭೆಗೆ ತಿಳಿಸಿದರು.
ಪ್ರಶ್ನೋತ್ತರ ವೇಳೆಯಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಕಾಶಂಪುರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಚರ್ಮಗಂಟು ರೋಗದಿಂದ ಮೃತಪಟ್ಟ ಹಸುಗೆ 20 ಸಾವಿರ, ಕರುಗೆ 5 ಸಾವಿರದಂತೆ 37 ಕೋಟಿ ಪರಿಹಾರ ನೀಡಲಾಗಿದೆ. ದೇಶದಲ್ಲಿ ಯಾವುದೇ ರಾಜ್ಯದಲ್ಲಿ ಪರಿಹಾರ ನೀಡಲಾಗುತ್ತಿಲ್ಲ. ನಮ್ಮ ರಾಜ್ಯದಲ್ಲಿ ನೀಡಲಾಗುತ್ತಿದೆ ಎಂದರು.
ಆಗ ಬಂಡೆಪ್ಪ ಕಾಶಂಪುರ್ ಅವರು, ಮೃತಪಟ್ಟ ಹಸುವಿಗೆ 20 ಸಾವಿರ ಸಾಲದು ಮತ್ತಷ್ಟು ನೀಡಬೇಕು ಎಂದರು. ಇದಕ್ಕೆ ಜೆಡಿಎಸ್ ಶಾಸಕ ವೆಂಕಟರಾವ್ ನಾಡಗೌಡ ದನಿಗೂಡಿಸಿದರು. ಈ ಹಂತದಲ್ಲಿ ಮಧ್ಯಪ್ರವೇಶಿಸಿದ ಸಚಿವ ಮಾದುಸ್ವಾಮಿ, ಕೊಟ್ಟಿರುವುದು ಪರಿಹಾರ, ಹಸುವಿನ ಪೂರ್ಣ ಬೆಲೆ ಅಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. ಆಗ ಮಾದುಸ್ವಾಮಿ ಹಾಗೂ ಬಂಡೆಪ್ಪ ಕಾಶಂಪುರ್ ಅವರ ನಡುವೆ ವಾಗ್ವಾದ ನಡೆಯಿತು. ಸಭಾಧ್ಯಕ್ಷರು ಮಧ್ಯಪವೇಶಿಸಿ ವಾಗ್ವಾದಕ್ಕೆ ತೆರೆ ಎಳೆದರು.
ಇದಕ್ಕೂ ಮುನ್ನ ಉತ್ತರಿಸಿದ ಸಚಿವ ಪ್ರಭು ಚವ್ಹಾಣ್, ಬೀದರ್ ದಕ್ಷಿಣ ಕ್ಷೇತ್ರದಲ್ಲಿ 4 ಜಾನುವಾರು ಮೃತಪಟ್ಟಿದೆ ಎಂದು ಹೇಳಿದರು.
ಮಲೆನಾಡಿನ ಗಿಡ್ಡ ತಳಿಗೂ ವಿಮೆ: ಕೇಂದ್ರ ಪುರಸ್ಕøತ ರಾಷ್ಟ್ರೀಯ ಜಾನುವಾರು ಮಿಷನ್ ಯೋಜನೆಯಡಿ 2022-23ನೇ ಸಾಲಿನಿಂದ ಹಾಲು ಕೊಡುವ ರಾಸುಗಳ ವಿಮೆಯೊಂದಿಗೆ ಎತ್ತು, ಹೋರಿ, ಕೋಣ, ಕುರಿ, ಮೊಲ, ಹಂದಿ ದೇಸಿ ತಳಿ ರಾಸುಗಳನ್ನು ವಿಮೆಗೆ ಒಳಪಡಿಸುವ ಸಂಬಂಧ ವಿಮಾ ಸಂಸ್ಥೆಯನ್ನು ಗುರುತಿಸಲು ಟೆಂಡರ್ ಪ್ರಕ್ರಿಯೆ ಕೈಗೊಳ್ಳಲಾಗಿದೆ.
ಇದಕ್ಕಾಗಿ 14 ಕೋಟಿ ಅನುದಾನ ನಿಗದಿಪಡಿಸಲಾಗಿದ್ದು, ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡನಂತರ ಮಲೆನಾಡಿನ ಗಿಡ್ಡ ತಳಿಯ ರಾಸುಗಳನ್ನು ವಿಮೆಗೆ ಒಳಪಡಿಸಲಾಗುವುದು ಎಂದು ಯು.ಟಿ.ಖಾದರ್ ಪರವಾಗಿ ಸಚಿವ ಪ್ರಭು ಚವ್ಹಾಣ್ ಅವರು ಅಜಯ್ ಧರ್ಮಸಿಂಗ್ ಕೇಳಿದ ಪ್ರಶ್ನೆಗೆ ಉತ್ತರಿಸಿದರು.
#increase, #compensation, #deadCattle,