ರಾಜ್ಯದಲ್ಲಿ ಟೊಮೊಟೋ ಪ್ಲೂ ಆತಂಕವಿಲ್ಲ : ಸಚಿವ ಡಾ.ಕೆ.ಸುಧಾಕರ್

Spread the love

ಬೆಂಗಳೂರು, ಮೇ 12- ಕೇರಳದಲ್ಲಿ ಕಂಡು ಬಂದಿರು ಟೊಮೊಟೋ ಫ್ಲೂ ಬಗ್ಗೆ ರಾಜ್ಯದ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್‍ಗೂ ಟೊಮೊಟೋ ಫ್ಲೂಗೂ ಯಾವುದೇ ಸಂಬಂಧವಿಲ್ಲ. ಕೇರಳದ ಕೆಲ ಭಾಗಗಳಲ್ಲಿ ಈ ರೋಗ ಕಾಣಿಸಿಕೊಂಡಿರುವುದರಿಂದ ಕೇರಳಕ್ಕೆ ಹೊಂದಿಕೊಂಡಿರುವ ರಾಜ್ಯದ ಗಡಿ ಭಾಗದ ಐದಾರು ಜಿಲ್ಲೆಗಳಲ್ಲಿ ವಿಶೇಷ ನಿಗಾವಹಿಸಲು ಆರೋಗ್ಯ ಇಲಾಖೆಗೆ ಸೂಚನೆ ನೀಡಲಾಗಿದೆ ಎಂದರು.

ಇದುವರೆಗೂ ರಾಜ್ಯದಲ್ಲಿ ಒಂದೇ ಒಂದು ಟೊಮೊಟೊ ಫ್ಲೂ ಪ್ರಕರಣ ಪತ್ತೆಯಾಗಿಲ್ಲ. ಆದರೂ ಸೂಕ್ಷ್ಮವಾಗಿ ನಿಗಾವಹಿಸುವಂತೆ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ಐದು ವರ್ಷದ ಮಕ್ಕಳಲ್ಲಿ ಈ ರೋಗ ಕಂಡು ಬರುತ್ತಿದೆ. ಮಕ್ಕಳಲ್ಲಿ ಜ್ವರ ಹಾಗೂ ಚರ್ಮದ ಮೇಲೆ ಗುಳ್ಳೆಗಳು ಕಂಡು ಬಂದರೆ ಅಗತ್ಯ ಪರೀಕ್ಷೆ ನಡೆಸಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಕೇರಳ ಹೊರತುಪಡಿಸಿ ದೇಶದ ಇನ್ಯಾವುದೇ ಭಾಗದಲ್ಲಿ ಈ ರೋಗದ ಲಕ್ಷಣ ಕಂಡು ಬಂದಿಲ್ಲ. ಇದು ಕೋವಿಡ್ ರೀತಿ ಸಾಂಕ್ರಾಮಿಕ ರೋಗ ಅಲ್ಲ. ಹೊಸ ರೋಗವೂ ಅಲ್ಲ. ಈಗಾಗಲೇ ಇರುವ ರೋಗವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಹೀಗಾಗಿ ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡಬಾರದು ಎಂದು ಅವರು ಮನವಿ ಮಾಡಿದರು.

ಕೇರಳ ಪರಿಸ್ಥಿತಿ ಬಗ್ಗೆ ಅಲ್ಲಿನ ಆರೋಗ್ಯ ಸಚಿವರ ಜತೆ ಚರ್ಚಿಸಿದ್ದು, ಕೇರಳದಲ್ಲೂ ಯಾವುದೇ ರೀತಿಯ ಆತಂಕವಿಲ್ಲ ಎಂದ ಅವರು, ನಿತ್ಯ 150ರಿಂದ 160 ಕೋವಿಡ್ ಪಾಸಿಟೀವ್ ಪ್ರಕರಣಗಳು ಕಂಡು ಬರುತ್ತಿವೆ. ಮೊದಲಿನಂತೆ ಅದರ ಗಂಭೀರತೆ ಇಲ್ಲ. ಸಾವು-ನೋವುಗಳು ಇಲ್ಲ ಎಂದರು.

ಖಾಸಗಿ ಆಸ್ಪತ್ರೆಯ ಮುಖ್ಯಸ್ಥರೊಂದಿಗೆ ಸಮಾಲೋಚನೆ ನಡೆಸಿ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ 3ನೇ ಡೋಸ್ ನೀಡುವಂತೆ ಸೂಚನೆ ನೀಡಲಾಗಿದೆ. ಕೋವಿಡ್ ತಡೆಗಟ್ಟಲು ಸದ್ಯಕ್ಕೆ ಲಸಿಕೆಯೊಂದೇ ಪರಿಹಾರವಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಎಲ್ಲರೂ ಅಗತ್ಯವಿರುವ ಲಸಿಕೆಗಳನ್ನು ಪಡೆಯಬೇಕೆಂದು ಕೋರಿದರು.

Facebook Comments