ನಾಳೆ ಬೊಮ್ಮಾಯಿ ಬಜೆಟ್, ಏನೇನು ನಿರೀಕ್ಷಿಸಬಹುದು..?

Social Share

ಬೆಂಗಳೂರು, ಮಾ.3- ರೈತರು, ಕಾರ್ಮಿಕರಿಗೆ ಬಂಪರ್ ಕೊಡುಗೆ, ಸರ್ಕಾರಿ ನೌಕರರ ವೇತನ ಪರಿಷ್ಕರಣೆಗೆ 7ನೆ ಆಯೋಗ ರಚನೆ, ಮಠ-ಮಾನ್ಯಗಳು, ಹಿಂದೂ ದೇವಾಲಯಗಳಿಗೆ ಹೆಚ್ಚಿನ ಅನುದಾನ, ವಿದ್ಯಾರ್ಥಿ ವೇತನ ಹೆಚ್ಚಳ, ಹಾಲಿನ ಪ್ರೋತ್ಸಾಹಧನ ಹಾಗೂ ಅಂಗನವಾಡಿ ಕಾರ್ಯಕರ್ತೆಯರ ಗೌರವಧನ ಏರಿಕೆ, ಬಿಎಂಟಿಸಿ ಬಸ್‍ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ… ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ ಬಹುನಿರೀಕ್ಷಿತ ಪ್ರಸಕ್ತ 2022-23ನೇ ಸಾಲಿನ ಬಜೆಟ್‍ನಲ್ಲಿ ಘೋಷಣೆ ಮಾಡಲಿರುವ ಪ್ರಮುಖ ಅಂಶಗಳಿವು.
ನಾಳೆ ಮಧ್ಯಾಹ್ನ 12.30ಕ್ಕೆ ವಿಧಾನಸೌಧದಲ್ಲಿ ಚೊಚ್ಚಲ ಬಜೆಟ್ ಮಂಡನೆ ಮಾಡಲಿದ್ದಾರೆ. ವಿತ್ತೀಯ ಶಿಸ್ತು ಕಾಪಾಡಿಕೊಂಡು ಸಾಲದ ಹೊರೆ ಬೀಳದೆ ಮುಂದಿನ ಚುನಾವಣೆಗೆ ಜನಪ್ರಿಯ ಬಜೆಟ್ ಘೋಷಿಸಲು ಮುಂದಾಗಿದ್ದಾರೆ. ಇದು ಚುನಾವಣಾ ವರ್ಷವಾಗಿರುವುದರಿಂದ ಭರಪೂರ ಜನಪ್ರಿಯ ಯೋಜನೆಗಳ ಘೋಷಣೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ.
ಎರಡು ಪೂರಕ ಅಂದಾಜು ಮಂಡಿಸಿರುವ ಬೊಮ್ಮಾಯಿಗೆ ಮೊದಲ ಪೂರ್ಣ ಬಜೆಟ್ ಮಂಡಿ  ಅವಕಾಶ ಒದಗಿ ಬಂದಿದೆ. ಆದರೆ, ಹಣಕಾಸು ಇಲಾಖೆ ಮೂಲ ಗಳ ಪ್ರಕಾರ, ರಾಜ್ಯ ಸರ್ಕಾರದ ಖಜಾನೆ ಸಂಪನ್ನವಾಗಿಲ್ಲ. ಕಳೆದ ವರ್ಷ 30 ಸಾವಿರ ಕೋಟಿ ರೂ. ಸಾಲವನ್ನು ಕೇಂದ್ರ ಸರ್ಕಾರದಿಂದ ಪಡೆಯಲಾಗಿದೆ.
ಕೋವಿಡ್ ಹಿನ್ನೆಲೆಯಲ್ಲಿ ರಾಜಸ್ವ ಸಂಗ್ರಹ ನಿರೀಕ್ಷಿತ ಪ್ರಮಾಣದಲ್ಲಿ ಇಲ್ಲ. ಕಳೆದ ವರ್ಷವೇ ರಾಜಸ್ವ ಕೊರತೆ ನೀಗಿಸುವುದಕ್ಕೆ ಮಾಡಿದ ಪ್ರಯತ್ನ ಯಶಸ್ವಿಯಾಗಿಲ್ಲ. ಹೀಗಾಗಿ ಬೊಮ್ಮಾಯಿ ಹಗ್ಗದ ಮೇಲೆ ನಡಿಗೆ ಮಾಡಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ಸಂಪನ್ಮೂಲ ಕ್ರೋಢೀಕರಣ, ಹೊಸ ಯೋಜನೆಗಳ ಘೋಷಣೆ ಸಿಎಂ ಮುಂದಿರುವ ಸವಾಲುಗಳು. ಕೋವಿಡ್ ಪರಿಸ್ಥಿತಿ, ಲಾಕ್‍ಡೌನ್ ಕಾರಣದಿಂದಾಗಿ ರಾಜ್ಯದ ಆರ್ಥಿಕತೆ ಈಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ.ಇಂತಹ ಸಂದರ್ಭದಲ್ಲಿ ಬಜೆಟ್ ಮಂಡಿಸಬೇಕಿದೆ.
ಜನರ ಮೇಲೆ ತೆರಿಗೆ ಭಾರವನ್ನು ಹಾಕದೆ, ಬಸ್ ಸೇರಿದಂತೆ ಯಾವುದೇ ಸಾರಿಗೆಗಳ ದರ ಏರಿಕೆ ಮಾಡದೆ, ವಿದ್ಯುತ್ ಸೇರಿದಂತೆ ಇತರ ದರಗಳನ್ನು ಏರಿಕೆ ಮಾಡದೆ ಸಂಪನ್ಮೂಲ ಕ್ರೋಢೀಕರಣಕ್ಕೆ ಬಜೆಟ್‍ನಲ್ಲಿ ಆದ್ಯತೆ ನೀಡುವ ಸಾಧ್ಯತೆ ಇದೆ. ಕರ್ನಾಟಕ ಬಜೆಟ್‍ನ ಗಾತ್ರ 2.50 ಲಕ್ಷ ಕೋಟಿ ದಾಟಲಿದೆ ಎಂದು ಅಂದಾಜಿಸಲಾಗಿದೆ. ಬಜೆಟ್‍ನಲ್ಲಿ ಯಾವ ಹೊಸ ಯೋಜನೆ ಘೋಷಣೆಯಾಗಲಿದೆ ಎಂಬ ಕುರಿತು ಮುಖ್ಯಮಂತ್ರಿಗಳು ಸುಳಿವು ಬಿಟ್ಟುಕೊಟ್ಟಿಲ್ಲ. ಚುನಾವಣೆ ಹತ್ತಿರವಿರುವುದರಿಂದ ಬಜೆಟ್ ಮೇಲೆ ಅಪಾರವಾದ ನಿರೀಕ್ಷೆ ಇದೆ.
ಬಜೆಟ್‍ನಲ್ಲಿ ಆರೋಗ್ಯ ಇಲಾಖೆಗೆ ಹೆಚ್ಚು ಒತ್ತು ನೀಡಲಿದ್ದಾರೆ. ಜತೆಗೆ ಹಣಕಾಸು ನೆರವಿಲ್ಲದೆ ಕುಂಟುತ್ತಿರುವ ನರೇಗಾ, ವಸತಿ ಯೋಜನೆ, ಗಂಗಾ ಕಲ್ಯಾಣದಂತಹ ಯೋಜನೆಗಳಿಗೆ ಹೆಚ್ಚುವರಿ ಹಣ ಬಿಡುಗಡೆ ಮಾಡುವುದು. ಜನಪ್ರಿಯ ಘೋಷಣೆಗಳ ಮೂಲಕ ಜನರ ಗಮನ ಸೆಳೆಯುವುದು ಬೊಮ್ಮಾಯಿ ಅವರ ಉದ್ದೇಶವಾಗಿದೆ.
ಜತೆಗೆ ಮುಖ್ಯಮಂತ್ರಿಯಾದ ಬಳಿಕ ಘೋಷಿಸಿದ ವಿದ್ಯಾರ್ಥಿವೇತನ ಯೋಜನೆ, ಮನೆ-ಮನೆಗೂ ಸರ್ಕಾರಿ ಸೇವೆಗಳನ್ನು ತಲುಪಿಸುವಂತಹ ಜನಪ್ರಿಯ ಕಾರ್ಯಕ್ರಮಗಳನ್ನು ಹೆಚ್ಚುವರಿಯಾಗಿ ಘೋಷಿಸುವ ಸಾಧ್ಯತೆ ಇದೆ. ಬೊಮ್ಮಾಯಿ ತಮ್ಮ ಬಜೆಟ್‍ನಲ್ಲಿ 5 ಕ್ಷೇತ್ರಗಳಿಗೆ ಆದ್ಯತೆ ನೀಡುವ ನಿರೀಕ್ಷೆ ಇದೆ. ಕೃಷಿ, ರೈತರ ಕಲ್ಯಾಣ ಮತ್ತು ನಡೆಯುತ್ತಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿಗಳು ಹೆಚ್ಚಿನ ಗಮನಹರಿಸುವ ನಿರೀಕ್ಷೆ ಇದೆ.
ಬಜೆಟ್‍ನಲ್ಲಿ ನೀರಾವರಿ, ಕೃಷಿ,ಲೋಕೋಪಯೋಗಿ, ಸಮಾಜ ಕಲ್ಯಾಣ, ಗ್ರಾಮೀಣಾಭಿವೃದ್ಧಿ ಕ್ಷೇತ್ರಗಳಿಗೆ ಆದ್ಯತೆ ನೀಡುವ ನಿರೀಕ್ಷೆ ಇದೆ. ಅದರಲ್ಲೂ ರಾಜ್ಯದ ನೀರಾವರಿ ಯೋಜನೆಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ಹೋರಾಟ ಮಾಡುತ್ತಿವೆ. ಆದ್ದರಿಂದ ಈ ವಲಯಕ್ಕೆ ಆದ್ಯತೆ ನೀಡುವ ಅನಿವಾರ್ಯತೆ ಎದುರಾಗಿದೆ.
ಬಸವರಾಜ ಬೊಮ್ಮಾಯಿ ಉತ್ತರ ಕರ್ನಾಟಕ ಭಾಗಕ್ಕೆ ಸೇರಿದ ನಾಯಕರು. ಆದ್ದರಿಂದ ಬಜೆಟ್‍ನಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಹಲವು ಕೊಡುಗೆಗಳನ್ನು ನಿರೀಕ್ಷೆ ಮಾಡಲಾಗಿದೆ. ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಗಮನಹರಿಸುವ ಸಾಧ್ಯತೆ ಇದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಹಲವು ಯೋಜನೆಗಳು ನಡೆಯುತ್ತಿವೆ. ಈ ಯೋಜನೆಗಳಿಗೆ ಬಜೆಟ್‍ನಲ್ಲಿ ಅನುದಾನ ಮೀಸಲಿಡಬೇಕಿದೆ. ಇದರ ಜೊತೆಗೆ ರಾಜ್ಯದಲ್ಲಿ ಹೊಸ ಯೋಜನೆಗಳನ್ನು ಘೋಷಣೆ ಮಾಡಬೇಕಿದೆ.
ರೈತರ ಕಲ್ಯಾಣ ಮತ್ತು ಈಗ ನಡೆಯುತ್ತಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಮುಖ್ಯಮಂತ್ರಿಗಳು ಆದ್ಯತೆ ನೀಡುವ ನಿರೀಕ್ಷೆ ಇದೆ. ಈಗಾಗಲೇ ಮುಖ್ಯಮಂತ್ರಿಗಳು ಕೃಷಿ, ನೀರಾವರಿ ಇಲಾಖೆಯ ಹಿರಿಯ ಅಕಾರಿಗಳ ಸಭೆ ನಡೆಸಿ ಅವರ ಅಭಿಪ್ರಾಯ ಸಂಗ್ರಹ ಮಾಡಿದ್ದಾರೆ.  ಕೃಷಿ ಮತ್ತು ಅದಕ್ಕೆ ಹೊಂದಿಕೊಂಡಿರುವ ವಲಯಗಳಿಗೆ ಕಳೆದ ಮೂರು ವರ್ಷಗಳಿಂದ ಬಜೆಟ್‍ನಲ್ಲಿ ನಿರೀಕ್ಷಿತ ಅನುದಾನ ಹಂಚಿಕೆಯಾಗಿಲ್ಲ. 2021-22ನೇ ಸಾಲಿನ ಬಜೆಟ್‍ನಲ್ಲಿ ಕೃಷಿ ವಲಯಕ್ಕೆ 30,028 ಕೋಟಿ ಅನುದಾನ ನೀಡಲಾಗಿತ್ತು.
ಹಿಂದಿನ ವರ್ಷದ ಬಜೆಟ್‍ಗೆ ಹೋಲಿಕೆ ಮಾಡಿದರೆ ಈ ಅನುದಾನ ಸುಮಾರು 2 ಸಾವಿರ ಕೋಟಿ ಕಡಿಮೆ. ಆದರೆ ಈ ವರ್ಷ ಕೃಷಿಗೆ ಹೆಚ್ಚಿನ ಆದ್ಯತೆ ನೀಡಲು ಮುಖ್ಯಮಂತ್ರಿಗಳು ತೀರ್ಮಾನಿಸಿದ್ದಾರೆ. ಅಲ್ಲದೇ ಈಗಾಗಲೇ ನಡೆಯುತ್ತಿರುವ ನೀರಾವರಿ ಯೋಜನೆ ಪೂರ್ಣಗೊಳಿಸುವುದು ಸಹ ಪ್ರಮುಖ ಗುರಿಯಾಗಿದೆ.
ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷದ ಸರ್ಕಾರವಿದೆ. ಆದರೆ ಕೃಷಿ, ನೀರಾವರಿ ವಲಯವನ್ನು ಕಡೆಗಣಿಸಲಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ಕೃಷಿ ವಲಯಕ್ಕೆ ಆದ್ಯತೆ ನೀಡಬೇಕಾದ ಒತ್ತಡದಲ್ಲಿದ್ದಾರೆ. ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಕಾಂಗ್ರೆಸ್ ಈಗಾಗಲೇ ಪಾದಯಾತ್ರೆ ನಡೆಸುತ್ತಿದೆ. ಇದೇ ಮಾದರಿಯಲ್ಲಿ ಬೆಳಗಾವಿ ಮತ್ತು ವಿಜಯಪುರದಲ್ಲಿಯೂ ನೀರಾವರಿ ಯೋಜನೆಗಳನ್ನು ಮುಂದಿಟ್ಟುಕೊಂಡು ಪಾದಯಾತ್ರೆ ನಡೆಸಲು ಪ್ರತಿಪಕ್ಷ ಕಾಂಗ್ರೆಸ್ ಸಿದ್ಧತೆ ನಡೆಸಿದೆ.
ಭದ್ರಾ ಮೇಲ್ದಂಡೆ, ಕೃಷ್ಣಾ ಮೇಲ್ದಂಡೆ ಯೋಜನೆ-3 ಮತ್ತು ಕಳಸಾ-ಬಂಡೂರಿ ನಾಲಾ ಯೋಜನೆಗಳಿಗೆ ಅನುದಾನ ಒದಗಿಸುವ ಮಹತ್ವದ ಹೊಣೆ ಸರ್ಕಾರದ ಮುಂದಿದೆ. ಈ ಮೂರು ಪ್ರಮುಖ ನೀರಾವರಿ ಯೋಜನೆಗಳ ಗಾತ್ರ ಒಂದು ಲಕ್ಷ ಕೋಟಿಗೂ ಅಕವಾಗಿದೆ. ಕೃಷ್ಣಾ ಮೇಲ್ದಂಡೆ ಯೋಜನೆ-3 ಪೂರ್ಣಗೊಳಿಸಲು ಯೋಜನೆಗಾಗಿ ಭೂಮಿ ಕಳೆದುಕೊಳ್ಳುವ 20 ಗ್ರಾಮಗಳ ಜನರಿಗೆ ಪರಿಹಾರವನ್ನು ನೀಡಬೇಕಿದೆ. ಪರಿಹಾರ ನೀಡಿದರೆ ಯೋಜನೆ ಬೇಗ ಕಾರ್ಯಗತಗೊಳಿಸಲು ಸಹಕಾರಿಯಾಗುತ್ತದೆ.
ಯೋಜನೆಗೆ ತೊಡಗಿಸುವ ಅನುದಾನವನ್ನು ಕಡಿಮೆ ಮಾಡಲು ರಾಜ್ಯ ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆ-3, ಭದ್ರಾ ಮೇಲ್ದಂಡೆ ಯೋಜನೆಗಳಿಗೆ ರಾಷ್ಟ್ರೀಯ ಮಾನ್ಯತೆ ಪಡೆಯಲು ಪ್ರಯತ್ನ ನಡೆಸುತ್ತಿದೆ. ಆದರೆ ಇನ್ನೂ ಆ ಪ್ರಕ್ರಿಯೆಗಳು ಪೂರ್ಣಗೊಂಡಿಲ್ಲ. ಒಂದು ವೇಳೆ ಯೋಜನೆಗಳಿಗೆ ರಾಷ್ಟ್ರೀಯ ಮಾನ್ಯತೆ ಸಿಕ್ಕಿದರೆ ಶೇ.60ರಷ್ಟು ಅನುದಾನವನ್ನು ಕೇಂದ್ರ ಸರ್ಕಾರ ನೀಡಲಿದೆ. ಕೇಂದ್ರ ಜಲಶಕ್ತಿ ಆಯೋಗ ರಾಜ್ಯ ಕಳಿಸಿದ್ದ ಪ್ರಸ್ತಾವನೆಗೆ ಒಪ್ಪಿಗೆ ನೀಡಿದೆ. 21,474 ಕೋಟಿ ರೂ.ಗಳ ಭದ್ರಾ ಮೇಲ್ದಂಡೆ ಯೋಜನೆಗೆ ರಾಷ್ಟ್ರೀಯ ಯೋಜನೆ ಸ್ಥಾನಮಾನ ಸಿಗಲು ಕೇಂದ್ರ ಸಚಿವ ಸಂಪುಟದ ಒಪ್ಪಿಗೆ ಬಾಕಿ ಇದೆ.
ಆದರೆ, ಬಿಜೆಪಿ ಸರ್ಕಾರದ ಕಳೆದ ವರ್ಷದ ಬಜೆಟ್ ಘೋಷಣೆ ಪೈಕಿ ಹಲವು ವಿಚಾರಗಳಿಗೆ ಇನ್ನೂ ಚಾಲನೆ ಸಿಕ್ಕಿಲ್ಲ. ಕೆಲ ಸಣ್ಣಪುಟ್ಟ ವಿಚಾರಗಳಿಗೂ ಹಣಕಾಸು ಕೊರತೆ ಕಾರಣ ನೀಡಿ ಬಾಕಿ ಇಡಲಾಗಿದೆ. 2018-19ರಲ್ಲಿ ರಾಜ್ಯದ ಒಟ್ಟು ಸಾಲ 2,92,220 ಕೋಟಿ ರೂ. ಇತ್ತು. 2020-21ನೇ ವರ್ಷದಲ್ಲಿ ಅದು 3,68,692 ಕೋಟಿಗೆ ಏರಿಕೆಯಾಗಿತ್ತು. 2021-22ನೇ ಸಾಲಿಗೆ ಇದು 4,57,899 ಕೋಟಿಗೆ ಏರಿಕೆಯಾಗುವ ಸಾಧ್ಯತೆ ಇದೆ.
ಬಿಬಿಎಂಪಿ ಚುನಾವಣೆ ದೃಷ್ಟಿಯಿಟ್ಟುಕೊಂಡು ಬೆಂಗಳೂರಿಗೆ ಭರಪೂರ ಕೊಡುಗೆ ನೀಡುವ ನಿರೀಕ್ಷೆ ಇದೆ. ಮುಖ್ಯಮಂತ್ರಿಗಳು ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಹೌದು. ನಗರದ ಅಭಿವೃದ್ಧಿಗೆ ಹಲವಾರು ಯೋಜನೆಗಳನ್ನು ಘೋಷಣೆ ಮಾಡಬೇಕಾದ ಅನಿವಾರ್ಯತೆ ಇದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ಸನಿಹದಲ್ಲಿದೆ. ಮತ್ತೊಂದು ಕಡೆ ಕರ್ನಾಟಕ ಸರ್ಕಾರ ಬಿಬಿಎಂಪಿ ವಾರ್ಡ್‍ಗಳ ಸಂಖ್ಯೆಯನ್ನು 198 ರಿಂದ 243ಕ್ಕೆ ಏರಿಕೆ ಮಾಡುತ್ತಿದೆ.
ಈ ಕುರಿತ ಪ್ರಕ್ರಿಯೆಗಳು ಈಗಾಗಲೇ ಜಾರಿಯಲ್ಲಿವೆ. ಇದರಿಂದಾಗಿ ಬಿಬಿಎಂಪಿ ದೇಶದಲ್ಲೇ ಅತಿ ಹೆಚ್ಚು ವಾರ್ಡ್ ಹೊಂದಿರುವ ಪಾಲಿಕೆಯಾಗಲಿದೆ.
ಬಿಬಿಎಂಪಿ ವ್ಯಾಪ್ತಿಗೆ ಹೊಸದಾಗಿ ಸೇರುವ ಹಳ್ಳಿಗಳ ಮೂಲ ಸೌಕರ್ಯ ಅಭಿವೃದ್ಧಿಗೆ ಅನುದಾನ ನೀಡುವುದು ಅನಿವಾರ್ಯವಾಗಲಿದೆ.
ಮೇ ಅಥವಾ ಜೂನ್‍ನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆ ನಡೆಯಲಿದೆ. ಚುನಾವಣೆ ನಡೆದ ಬಳಿಕ ಮೇಯರ್ ಅವಧಿ 1 ವರ್ಷದಿಂದ 30 ತಿಂಗಳಿಗೆ ವಿಸ್ತರಣೆಯಾಗಲಿದೆ.

Articles You Might Like

Share This Article