ಅಧಿಕಾರಿಗಳೊಂದಿಗೆ ಚರ್ಚಿಸಿ ತೊಗರಿ ಬೆಳೆಗಾರರ ಸಮಸ್ಯೆ ಪರಿಹಾರ :ಸಿಎಂ

Social Share

ಕಲಬುರಗಿ, ಜ.24- ತೊಗರಿ ಬೆಳಗಾರರ ಸಂಕಷ್ಟಕ್ಕೆ ಸ್ಪಂದಿಸಿ ಪರಿಹಾರ ನೀಡುವ ಕುರಿತು ಇಂದು ಸಂಜೆ 4 ಗಂಟೆಗೆ ಸಭೆ ಕರೆಯಲಾಗಿದೆ. ಕೃಷಿ ಇಲಾಖೆ ಸೇರಿದಂತೆ ಸಂಬಂಧಪಟ್ಟ ಅಧಿಕಾರಗಳ ಜೊತೆ ಚರ್ಚಿಸಿ ಪರಿಹಾರ ಘೋಷಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಕಲಬುರಗಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಭಾಗದಲ್ಲಿ ತೊಗರಿ ಬೆಳೆಗಾರರು ಸಂಕಷ್ಟಕ್ಕೆ ಈಡಾಗಿದ್ದಾರೆ. ಸುಮಾರು 2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ನಷ್ಟ ಉಂಟಾಗಿದೆ. ವಿಶೇಷವಾಗಿ ಕಲಬುರ್ಗಿ, ಬೀದರ್ ಜಿಲ್ಲೆಗಳಲ್ಲಿ ತೊಗರಿ ನಾಶವಾಗಿದ್ದು, ಅದಕ್ಕೆ ಪರಿಹಾರ ನೀಡಲು ರೈತರು ಕೂಡ ಒತ್ತಾಯ ಮಾಡಿದ್ದಾರೆ ಎಂದರು.

ವಿಠಲ ಹೇರೂರ ಅವರ ಮೂರ್ತಿಯ ಅನಾವರಣ ಹಾಗೂ ಗಾಣಗಾ ಪುರದ ದತ್ತಾತ್ರೇಯ ದೇವಸ್ಥಾನಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದೆ ಎಂದು ಹೇಳಿದರು. ಗಾಣಗಾಪುರದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಚಿಂತನೆ ನಡೆಸಿದೆ. ಈಗಾಗಲೇ 5 ಕೋಟಿ ರೂ.ಗಳನ್ನು ಒದಗಿಸಲಾಗಿದೆ. ಜಿಲ್ಲಾಡಳಿತ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ್ದು, ಸುಮಾರು 60 ಕೋಟಿ ಗಿಂತ ಹೆಚ್ಚು ಅನುದಾನದ ಅಗತ್ಯವಿದೆ ಎಂದರು.

ಕಾಶಿ ವಿಶ್ವನಾಥ, ಉಜ್ಜಯನಿಯ ಕಾಳಹಸ್ತಿಯಲ್ಲಿ ನಿರ್ಮಿಸಿರುವಂತೆ ಕಾರಿಡಾರ್ ನಿರ್ಮಿಸಬೇಕು ಎಂದು 67 ಕೋಟಿ ರೂ.ಗಳ ಡಿಪಿಆರ್ ಸಿದ್ದ ಮಾಡಿದ್ದಾರೆ. ಮುಂದಿನ ಬಜೆಟ್ನಲ್ಲಿ ಸರ್ಕಾರ ಕಾರಿಡಾರ್ ನಿರ್ಮಾಣಕ್ಕೆ ಎಲ್ಲ ಕ್ರಮ ಕೈಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಕಲಬುರಗಿಗೆ ಆಗಮಿಸಿದ ಕೂಡಲೇ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ರಕ್ಷಣಾ ಇಲಾಖೆಯ ಮುಖ್ಯಸ್ಥರು, ಮುಖ್ಯ ಕಾರ್ಯದರ್ಶಿಗಳೊಂದಿಗೆ ವೀಡಿಯೊ ಸಂವಾದ ನಡೆಸಿದ್ದಾರೆ. ಫೆ.13ರಿಂದ ಪ್ರಾರಂಭವಾಗುವ ಏರೋ ಇಂಡಿಯಾ ಶೋವನ್ನು ಪ್ರಧಾನಿ ನರೇಂದ್ರಮೋದಿ ಉದ್ಘಾಟಿಸಲಿದ್ದಾರೆ.

ಇದಕ್ಕಾಗಿ ಪೂರ್ವಭಾವಿ ಸಿದ್ಧತೆಗಳ ವೀಡಿಯೋ ಸಂವಾದ ನಡೆಯಿತು ಎಂದು ಹೇಳಿದರು. ಏರೋ ಇಂಡಿಯಾ ಷೋ ಪ್ರತಿಷ್ಠಿತ ಕಾರ್ಯಕ್ರಮವಾಗಿದ್ದು, 1996ರಿಂದ ಬೆಂಗಳೂರಿನ ಏರ್ ಫೆÇೀರ್ಸ್ ನಿಲ್ದಾಣದಲ್ಲಿ ನಿರಂತರವಾಗಿ ಕರ್ನಾಟಕ ಆತಿಥ್ಯ ವಹಿಸಿದೆ. ಈ ಬಾರಿ ಅತಿ ದೊಡ್ಡ ಏರ್ ಶೋ ವೀಕ್ಷಣೆಗೆ ಅತಿ ಹೆಚ್ವು ಜನ ಭಾಗವಹಿಸುತ್ತಿದ್ದಾರೆ.

ಗಣ್ಯರು ಏರೋಸ್ಪೇಸ್ ಮುಖ್ಯಸ್ಥರು, ಕಂಪನಿಗಳ ಸಿಇಒಗಳು ದೊಡ್ಡ ಪ್ರಮಾಣದಲ್ಲಿ ಭಾಗವಹಿಸಲಿದ್ದಾರೆ. ಭಾರತೀಯ, ಕರ್ನಾಟಕ ಸೇರಿದಂತೆ ದೊಡ್ಡ ಪ್ರಮಾಣದಲ್ಲಿ ಏರೋಸ್ಪೇಸ್ ಕಂಪನಿಗಳ ವಸ್ತುಪ್ರದರ್ಶನವಿದೆ ಎಂದರು.

ಪಿಎಸ್ಐ ನೇಮಕಾತಿಗೆ ಸಂಬಂಧಿಸಿದಂತೆ ಆರೋಪಿ ರುದ್ರೇಗೌಡ ತನಿಖಾಕಾರಿಗಳು ಡಿವೈಎಸ್ಪಿ ಶಂಕರಗೌಡರು 3 ಕೋಟಿ ಬೇಡಿಕೆ ಇಟ್ಟಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ, ಆರೋಪಿ ಹೇಳಿಕೆ ಬಗ್ಗೆ ಮಾಹಿತಿ ಅಲ್ಲಿಯ ತನಿಖಾಕಾರಿ ಬಳಿ ಇರುತ್ತದೆ. ಮೊದಲು ಅವರ ಮೇಲಿನ ಆರೋಪ, ನ್ಯಾಯಾಲಯದ ಆದೇಶ, ನ್ಯಾಯಾಂಗ ಬಂಧನ ಎಲ್ಲಾ ಕಾನೂನಿನ ಪ್ರಕಾರ ತನಿಖೆಯಾಗುತ್ತದೆ.

ಅದೇ ರೀತಿ ಆತ ನೀಡಿರುವ ಸಾಕ್ಷ್ಯಾಧಾರಗಳ ಮೇಲೆ ಅಧಿಕಾರಿಯ ಮೇಲೂ ತನಿಖೆ ನಡೆಯಲಿದೆ ಎಂದರು. ಶೃಂಗೇರಿ ಶಾಸಕರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಯಾರಿಗೆ ನೋವಾಗುತ್ತದೆ ಅವರು ಪ್ರತಿಕ್ರಿಯೆ ನೀಡುತ್ತಾರೆ. ನಾನು ಪ್ರತಿಯೊಂದು ವ್ಯಕ್ತಿಗತ ಹೇಳಿಕೆಗೆ ಉತ್ತರಿಸಲು ಸಾಧ್ಯವಿಲ್ಲ ಎಂದು ಹೇಳಿದರು.

Articles You Might Like

Share This Article