ಪ್ರವಾಸಿ ಗೈಡ್‍ಗಳ ಮಾಸಿಕ ವೇತನ 5000 ರೂ.ಗೆ ಹೆಚ್ಚಳ

Social Share

ಬೆಂಗಳೂರು,ಸೆ.28- ರಾಜ್ಯದ ಪ್ರವಾಸೋದ್ಯಮ ತಾಣಗಳನ್ನು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ಪ್ರಚುರಪಡಿಸುವಲ್ಲಿ ಪ್ರಮುಖ ಪಾತ್ರವಹಿಸಿರುವ ಗೈಡ್‍ಗಳಿಗೆ ನೀಡಲಾಗುತ್ತಿರುವ ಮಾಸಿಕ ವೇತನವನ್ನು 2000 ರೂ.ನಿಂದ 5000 ರೂ.ಗಳಿಗೆ ಹೆಚ್ಚಳ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದರು.

ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಬ್ಯಾಂಕ್ವೆಟ್ ಹಾಲ್‍ನಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗೈಡ್‍ಗಳಿಗೆ ಈವರೆಗೂ ತಿಂಗಳಿಗೆ 2000 ರೂ. ವೇತನವನ್ನು ನೀಡಲಾಗುತ್ತಿತ್ತು. ಅದನ್ನು 5 ಸಾವಿರಕ್ಕೆ ಹೆಚ್ಚಳ ಮಾಡು ವುದಾಗಿ ಬಜೆಟ್‍ನಲ್ಲಿ ಘೋಷಣೆ ಮಾಡಲಾಗಿತ್ತು.

ಆದಷ್ಟು ಶೀಘ್ರ ಆದೇಶ ಹೊರಡಿಸುವುದಾಗಿ ತಿಳಿಸಿದರು. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬಂಡವಾಳ ಹೂಡಿಕೆಗೆ ಸಾಕಷ್ಟು ಅವಕಾಶಗಳಿವೆ. ಹೀಗಾಗಿ ನಮ್ಮ ಸರ್ಕಾರ ಹೊಸದಾಗಿ ಕ್ಯಾರವಾನ್ ಸೌಲಭ್ಯ ಕಲ್ಪಿಸಿದೆ ಇದರಿಂದ ಪ್ರವಾಸಿ ತಾಣ ಗುರುತಿಸಿ ಉದ್ಯಮಿಗಳಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಾಗುವುದು ಎಂದರು.

ಪ್ರವಾಸೋದ್ಯಮಕ್ಕಾಗಿ ರಾಜ್ಯಕ್ಕೆ ವಾರ್ಷಿಕ ಮೂವತ್ತು ಲಕ್ಷ ಜನ ಬರುತ್ತಿದ್ದು, ಮುಂದಿನ ಮೂರು ವರ್ಷದಲ್ಲಿ ಒಂದು ಕೋಟಿಯಾಗಬೇಕೆಂದು ಗುರಿ ಹಾಕಿಕೊಳ್ಳಲಾಗಿದೆ. ಪಿಪಿಪಿ ಮಾಡಲ್‍ನಲ್ಲಿ ರಾಜ್ಯದ ವಿವಿಧ ಕಡೆ ಹೋಟೆಲ್ ಸ್ಥಾಪಿಸಲಾಗುತ್ತಿದೆ. ಟೂರಿಸ್ಟ್ ಗೈಡ್ ಸುಳ್ಳು ಹೇಳಬಾರದು, ಸರಿಯಾದ ಮಾರ್ಗದರ್ಶನ ಮಾಡಬೇಕು. ರಾಜ್ಯದ ಹಿರಿಮೆ ಎತ್ತರಿಸಬೇಕು ಎಂದು ಸಲಹೆ ಮಾಡಿದರು.

ಯುನಿಸ್ಕೋ ಹತ್ತು ಹಲವಾರು ದಿನಾಚರಣೆಗಳನ್ನ ಆಚರಣೆ ಮಾಡುತ್ತದೆ. ಅದರಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆಕೂಡ ಒಂದು. ಇದನ್ನ ರಾಜ್ಯದಲ್ಲೂ ಅತ್ಯಂತ ಅದ್ಧೂರಿಯಾಗಿ ಆಚರಿಸುತ್ತಿದ್ದೇವೆ ಎಂದರು.

ಪ್ರವಾಸ ಮಾಡುವುದು ಮನುಷ್ಯನ ಮೂಲಭೂತ ಗುಣ. ಅನಾದಿ ಕಾಲದಿಂದಲೂ ಮನುಷ್ಯ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸುತ್ತಲೇ ಇರುತ್ತಾನೆ. ಮನುಷ್ಯನ ಈ ಪ್ರಯಾಣ ಹಲವಾರು ರೂಪಾಂತರ ಪಡೆದಿದೆ. ಊರುಗಳು ಸ್ಥಾಪನೆ,ಮನೆಗಳು ನಿರ್ಮಾಣವಾದರೂ ಪ್ರಯಾಣ ನಿಲ್ಲಲಿಲ್ಲ ಸುಮಾರು 25 ವರ್ಷಗಳ ಹಿಂದೆ ವಿದೇಶಕ್ಕೆ ಹೋಗಲು ಕಷ್ಟವಾಗಿತ್ತು.

ತಿಂಗಳುಗಟ್ಟಲೇ ಪ್ರಯಾಸ ಪಡಬೇಕಿತ್ತು. ತಂತ್ರಜ್ಞಾನ ಪ್ರವಾಸದಲ್ಲೂ ಬದಲಾವಣೆ ತಂದಿದೆ. ಇವತ್ತು ಭಾರತದಲ್ಲಿ ಪ್ರವಾಸೋದ್ಯಮ ಬಹಳಷ್ಟು ಬೆಳೆದಿದೆ. ಟೂರಿಸಂ ಉದ್ಯಮವಾಗಿ ಬೆಳೆದಿದೆ. ಪೂರ್ವದಿಂದ ಪಶ್ಚಿಮಕ್ಕೆ, ಪಶ್ಚಿಮದಿಂದ ಪೂರ್ವಕ್ಕೆ ಪ್ರವಾಸಿಗರು ಹೋಗುತ್ತಿದ್ದಾರೆ. ಜನರೂ ಕೂಡ ಉತ್ತಮ ಸೌಲಭ್ಯ ನಿರೀಕ್ಷಿಸುತ್ತಾರೆ.

ಆಹಾರ, ಗೈಡ್, ವಾಸ್ತವ್ಯ ಸೇರಿದಂತೆ ಅನೇಕ ನಿರೀಕ್ಷೆಗಳು ಇರುತ್ತವೆ. ನಮ್ಮ ರಾಜ್ಯದ ಇತಿಹಾಸ ನೋಡುವುದಾದರೆ ನಾವು ಸೃಷ್ಟಿಸಿದ ಟೂರಿಸಂ ಅಲ್ಲ. ರಾಜ ಮಹಾರಾಜರ ಕಾಲದಲ್ಲೇ ಹತ್ತು ಹಲವಾರು ಕೋಟೆಗಳು ನಿರ್ಮಾಣವಾಗಿವೆ. ಹಿರಿಯರು ನಿರ್ಮಿಸಿರುವುದನ್ನು ನಾವು ಶೋಕೇಸ್ ಮಾಡಿದ್ದೇವೆ ಎಂದು ಹೇಳಿದರು.

Articles You Might Like

Share This Article