ಬೆಂಗಳೂರು ಬಳಿಕ ತುಮಕೂರಿನಲ್ಲೂ ಟೋಯಿಂಗ್ ಗಲಾಟೆ

Social Share

ತುಮಕೂರು,ಫೆ.3- ಬೆಂಗಳೂರಲ್ಲಿ ನಡೆದ ಟೋಯಿಂಗ್ ಪ್ರಕರಣ ಇಡೀ ರಾಜ್ಯಾದ್ಯಂತ ಸುದ್ದಿ ಮಾಡಿದ್ದು, ಇದರ ಬೆನ್ನಲ್ಲೇ ಈಗ ಇಂತಹುದೇ ಘಟನೆ ತುಮಕೂರಲ್ಲಿ ಜರುಗಿದೆ. ನಗರದಲ್ಲಿ ಪಾರ್ಕಿಂಗ್ ಪ್ರದೇಶದಲ್ಲಿ ನಿಲ್ಲಿಸಿದ್ದ ವಾಹನಗಳನ್ನು ಪೊಲೀಸರು ಟೋಯಿಂಗ್ ಮಾಡುವ ಮೂಲಕ ವಶಕ್ಕೆ ತೆಗೆದುಕೊಳ್ಳುತ್ತಿದ್ದ ವೇಳೆ ಪೊಲೀಸರು ಹಾಗೂ ಸಾರ್ವಜನಿಕರ ನಡುವೆ ಮಾತಿನ ಚಕಮಕಿ ನಡೆದಿದೆ.
ತುಮಕೂರು ನಗರದ ಚರ್ಚ್ ವೃತ್ತದ ಬಳಿ ನಡೆದ ಘಟನೆಯಲ್ಲಿ ಸಾರ್ವಜನಿಕರು ಟ್ರಾಫಿಕ್ ಪೊಲೀಸರ ವರ್ತನೆಯನ್ನು ಮೊಬೈಲïಗಳಲ್ಲಿ ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ಚರ್ಚ್ ವೃತ್ತದಲ್ಲಿ ಉಪ ನೋಂದಣಾಧಿಕಾರಿ ಕಚೇರಿ ಕೂಡ ಇದ್ದು, ಸಾರ್ವಜನಿಕರ ಓಡಾಟ ಹೆಚ್ಚಿದೆ. ನೋ ಪಾರ್ಕಿಂಗ್ ಪ್ರದೇಶದಲ್ಲಿ ಯಾವುದೇ ವಾಹನಗಳು ಇಲ್ಲದಿದ್ದರೂ ಸಹ ಪಾರ್ಕಿಂಗ್ ಪ್ರದೇಶದಲ್ಲಿ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆಯುತ್ತಿದ್ದರು ಎನ್ನಲಾಗಿದೆ.
ಇದಕ್ಕೆ ಸಾರ್ವಜನಿಕರು ತೀವ್ರ ಆಕ್ರೋಶ ಹೊರ ಹಾಕಿದ್ದಾರೆ. ಪರಿಣಾಮ ಸ್ಥಳದಿಂದ ಪೊಲೀಸರು ತೆರಳಿದ್ದಾರೆ. ಅಲ್ಲದೇ, ಶಾಸಕರನ್ನು ಸ್ಥಳಕ್ಕೆ ಕರೆಸಿ ಅವರಿಂದಲೇ ತೀರ್ಮಾನ ಮಾಡಿ ಎಂದು ಸ್ಥಳೀಯರು ಪಟ್ಟು ಹಿಡಿದರು. ನಂತರ ಸ್ಥಳಕ್ಕೆ ಬಂದ ಕೆಲ ಹಿರಿಯ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿಯನ್ನು ಶಾಂತಗೊಳಿಸಿದರು.

Articles You Might Like

Share This Article