ಟೋಯಿಂಗ್, ಐಎಸ್‍ಐ ಮಾರ್ಕ್ ಹೆಲ್ಮೆಟ್ ಕಡ್ಡಾಯ ಕುರಿತು ಇಂದು ಮಹತ್ವದ ಸಭೆ

Social Share

ಬೆಂಗಳೂರು,ಫೆ.2-ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಗುರಿಯಾಗಿರುವ ಟೋಯಿಂಗ್ ವ್ಯವಸ್ಥೆ ಹಾಗೂ ಐಎಸ್‍ಐ ಮಾರ್ಕ್ ಇರುವ ಹೆಲ್ಮೆಟ್ ಕಡ್ಡಾಯಗೊಳಿಸಿರುವ ಕ್ರಮದಲ್ಲಿ ಬದಲಾವಣೆ ತರುವ ಕುರಿತಾಗಿ ಗೃಹ ಸಚಿವ ಅರಗ ಜ್ಞಾನೇಂದ್ರ ಇಂದು ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಲಿದ್ದಾರೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್, ಬೆಂಗಳೂರುನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ಸಂಚಾರ ವಿಭಾಗದ ಜಂಟಿ ಆಯುಕ್ತರು ಸೇರಿದಂತೆ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ಇದರಲ್ಲಿ ಭಾಗವಹಿಸಲಿದ್ದಾರೆ.ಎರಡು ದಿನಗಳ ಹಿಂದೆಯಷ್ಟೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹಿರಿಯ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿ ತಾತ್ಕಾಲಿಕವಾಗಿ ಟೋಯಿಂಗ್ ವ್ಯವಸ್ಥೆಯನ್ನೇ ರದ್ದುಪಡಿಸಿದ್ದರು.
ಇದೀಗ ಗೃಹ ಸಚಿವ ಅರಗ ಜ್ಞಾನೇಂದ್ರ ಕೂಡ ಅಕಾರಿಗಳ ಜೊತೆ ಮತ್ತೊಂದು ಸುತ್ತಿನ ಸಭೆ ನಡೆಸಿ ಹಾಲಿ ಇರುವ ಟೋಯಿಂಗ್ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆ ಮಾಡಲು ವರದಿ ನೀಡಲು ಸೂಚಿಸುವ ಸಂಭವವಿದೆ.
ಟೋಯಿಂಗ್ ನಿರ್ವಹಣೆ ಮಾಡುತ್ತಿರುವ ಏಜೆನ್ಸಿಯನ್ನು ಬದಲಾಯಿಸುವುದು, ದಂಡ ಪ್ರಮಾಣ ಇಳಿಕೆ, ಸಾರ್ವಜನಿಕರ ಜೊತೆ ವರ್ತನೆ, ಕಾನೂನು ಉಲ್ಲಂಘನೆ ಮಾಡಿದ ವೇಳೆ ವಾಹನಗಳನ್ನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಅನುಚಿತವಾಗಿ ವರ್ತಿಸದಂತೆ ಪೊಲೀಸರಿಗೆ ಗೃಹ ಸಚಿವರು ಸೂಚನೆ ನೀಡುವ ಸಂಭವವಿದೆ.
ಒಂದು ಕಡೆ ಟೋಯಿಂಗ್ ವ್ಯವಸ್ಥೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಮತ್ತೊಂದು ಕಡೆ ಐಎಸ್‍ಐ ಗುರುತಿನ ಹೆಲ್ಮೆಟ್‍ಗಳನ್ನು ದ್ವಿಚಕ್ರ ವಾಹನ ಸವಾರರು ಧರಿಸಬೇಕೆಂದು ಸಂಚಾರಿ ವಿಭಾಗದ ಒಒಲೀಸರು ಸುತ್ತೋಲೆ ಹೊರಡಿಸಿದ್ದರು.
ಇದು ಕೂಡ ಸಾಕಷ್ಟು ವಿರೋಧಕ್ಕೆ ಕಾರಣವಾಗಿದೆ. ಐಎಸ್‍ಯ ಮಾರ್ಕ್ ಇರುವ ಹೆಲ್ಮೆಟ್‍ಗಳು ಮಾರುಕಟ್ಟೆಯಲ್ಲಿ 500ರಿಂದ 800ರವರೆಗೆ ಹಣ ನೀಡಿ ಖರೀದಿಸಬೇಕು.ಹಣವಂತರು ಹೆಲ್ಮೆಟ್ ಖರೀದಿಸುತ್ತಾರೆ. ಆದರೆ ಮಧ್ಯಮ ವರ್ಗ, ಬಡವರು, ಸಾಮಾನ್ಯ ವರ್ಗದವರು ದುಪ್ಪಟ್ಟು ಹಣ ನೀಡಿ ಖರೀದಿಸಲು ಹೇಗೆ ಸಾಧ್ಯ ಎಂಬ ಅಭಿಪ್ರಾಯವು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲೂ ವಿರೋಧ ವ್ಯಕ್ತವಾಗುತ್ತಿದ್ದು, ಪೊಲೀಸರು ಹೊರಡಿಸಿರುವ ಸುತ್ತೋಲೆಯನ್ನು ಹಿಂಪಡೆಯುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ. ಈ ಎಲ್ಲ ಸಾಧಕ-ಬಾಧಕಗಳ ಬಗ್ಗೆ ಇಂದು ಗೃಹ ಸಚಿವ ಅರಗ ಜ್ಞಾನೇಂದ್ರ ಚರ್ಚಿಸಲಿದ್ದಾರೆ. ನಂತರ ಸಿಎಂ ಜೊತೆ ಮತ್ತೊಂದು ಸುತ್ತಿನ ಮಾತುಕತೆ ನಡೆ ಟೊಯಿಂಗ್ ವ್ಯವಸ್ಥೆಯಲ್ಲಿ ಹೊಸ ಬದಲಾವಣೆ ಸಂಭವವಿದೆ ಎಂದು ಹೇಳಲಾಗಿದೆ.

Articles You Might Like

Share This Article