ಸಾರ್ವಜನಿಕರಿಗೆ ತೊಂದರೆಯಾಗದಂತೆ ಟೋಯಿಂಗ್ ವ್ಯವಸ್ಥೆ ಜಾರಿ : ಸಿಎಂ

Social Share

ಬೆಂಗಳೂರು,ಜ.31- ಸಾರ್ವಜನಿಕರು ಹಾಗೂ ಸವಾರರಿಗೆ ತೊಂದರೆಯಾಗದಂತೆ ಟೋಯಿಂಗ್ ವ್ಯವಸ್ಥೆಯನ್ನು ಜಾರಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ಸಂಜೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್, ಸಂಚಾರಿ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರು ಸೇರಿದಂತೆ ಮತ್ತಿತರ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಲಾಗುವುದು. ಯಾರಿಗೂ ಕೂಡ ತೊಂದರೆಯಾಗದಂತೆ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ತಿಳಿಸಿದರು.
ಟೋಯಿಂಗ್ ವ್ಯವಸ್ಥೆಯಲ್ಲಿ ಯಾವೆಲ್ಲ ಬದಲಾವಣೆ ಮಾಡಬೇಕು, ನಿಯಮಗಳನ್ನು ಉಲ್ಲಂಘಿಸಿದಾಗ ಸಾರ್ವಜನಿಕರು ಹಾಗೂ ವಾಹನ ಸವಾರರ ಜೊತೆ ಹೇಗೆ ವರ್ತಿಸಬೇಕು, ದಂಡದ ಪ್ರಮಾಣ ಇತ್ಯಾದಿ ವಿಷಯಗಳ ಬಗ್ಗೆ ಚರ್ಚಿಸಿ ಯಾರಿಗೂ ಹೊರೆಯಾಗದಂತೆ ಸರ್ಕಾರ ತೀರ್ಮಾನಿಸಲಿದೆ.
ಈಗಿರುವ ವ್ಯವಸ್ಥೆಯನ್ನು ಬೇರೆ ಏಜೆನ್ಸಿಯವರಿಗೆ ನೀಡಬೇಕೆ ಅಥವಾ ಮುಂದುವರೆಸಬೇಕಾ ಎಂಬುದರ ಬಗ್ಗೆಯೂ ಚರ್ಚೆಯಾಗಲಿದೆ. ಸರ್ಕಾರ ಏನೇ ಕ್ರಮ ತೆಗೆದುಕೊಂಡರೂ ಅದು ಸಾರ್ವಜನಿಕರ ಹಿತದೃಷ್ಟಿಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿದರು.
ಎರಡು ದಿನಗಳ ಹಿಂದೆ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ ಆರೋಪದಲ್ಲಿ ದ್ವಿಚಕ್ರ ವಾಹನ ಸಂಚಾರಿ ವಿಭಾಗದ ಪೊಲೀಸರು ಟೋಯಿಂಗ್ ಮಾಡಿದ್ದರು. ತಮ್ಮ ವಾಹನವನ್ನು ಬಿಡುವಂತೆ ಸವಾರ ಅಂಗಲಾಚಿಕೊಂಡಿದ್ದ. ಅಲ್ಲದೆ ಬೈಕ್ ತೆಗೆದುಕೊಂಡು ಹೋಗುತ್ತಿದ್ದ ವಾಹನವನ್ನು ಓಡು ಓಡುತ್ತಲೇ ಬಿಟ್ಟುಬಿಡಿ ಎಂದು ಮನವಿ ಮಾಡಿದ್ದ.
ಇದು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ಲಾಗಿ ಸಂಚಾರಿ ಪೊಲೀಸರ ಈ ವರ್ತನೆಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಹೀಗಾಗಿಯೇ ಸರ್ಕಾರ ಟೋಯಿಂಗ್ ವ್ಯವಸ್ಥೆಯಲ್ಲಿ ಒಂದಿಷ್ಟು ಬದಲಾವಣೆ ಮಾಡಲು ಸರ್ಕಾರ ಮುಂದಾಗಿದೆ.

Articles You Might Like

Share This Article