ಬೆಂಗಳೂರು : ಸುಲಭವಾಗಿ ಹಣ ಸಂಪಾದನೆ ಮಾಡಿ ಮೋಜಿನ ಜೀವನ ನಡೆಸುವ ಸಲುವಾಗಿ ರಾತ್ರಿ ವೇಳೆ ನಗರದ ಟ್ರಾಫಿಕ್ ಸಿಗ್ನಲ್‍ಗಳಲ್ಲಿ ಅಳವಡಿಸಿದ್ದ ಬ್ಯಾಟರಿಗಳನ್ನು ಕಳವು ಮಾಡುತ್ತಿದ್ದ ದಂಪತಿಯನ್ನು ಅಶೋಕನಗರ ಠಾಣೆ ಪೊಲೀಸರು ಬಂಧಿಸಿ 68 ಪ್ರಕರಣಗಳನ್ನು ಪತ್ತೆಹಚ್ಚಿ 20 ಲಕ್ಷ ರೂ. ಬೆಲೆಯ 230 ಬ್ಯಾಟರಿಗಳನ್ನು ವಶಪಡಿಸಿಕೊಂಡಿದ್ದಾರೆ.
ನಗರದ ವಿವಿಧ ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿನ ಟ್ರಾಫಿಕ್ ಸಿಗ್ನಲ್‍ನಲ್ಲಿ ಅಳವಡಿಸಿದ್ದ ಸಿಗ್ನಲ್‍ಲೈಟ್ ಮತ್ತು ಸಿಸಿಟಿವಿ ಕ್ಯಾಮೆರಾ ಬ್ಯಾಟರಿಗಳು ಕಳವಾಗುತ್ತಿದ್ದ ಬಗ್ಗೆ ಕೇಂದ್ರ ವಿಭಾಗದ ಅಧಿಕಾರಿಗಳು ಮತ್ತು ಸಿಬ್ಬಂದಿ ಒಳಗೊಂಡ ವಿಶೇಷ ತಂಡ ರಚನೆ ಮಾಡಲಾಗಿತ್ತು.
ಈ ವಿಶೇಷ ತಂಡದ ಅಧಿಕಾರಿಗಳು ಕೃತ್ಯ ನಡೆದ ಸ್ಥಳಗಳಿಗೆ ಖುದ್ದು ಭೇಟಿ ನೀಡಿ ಸ್ಥಳದಲ್ಲಿ ಲಭ್ಯವಾದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಬೆಳಗಿನ ಜಾವ 3ಗಂಟೆಯಿಂದ 5 ಗಂಟೆ ಅವ ನಡುವೆ ಟಿವಿಎಸ್ ವಾಹನದಲ್ಲಿ ಒಬ್ಬ ಪುರುಷ ಮತ್ತು ಮಹಿಳೆ ಈ ಕೃತ್ಯ ಎಸಗುತ್ತಿರುವುದು ದೃಢಪಟ್ಟಿತ್ತು.
ಈ ದೃಶ್ಯಾವಳಿಯ ಆಧಾರದ ಮೇಲೆ ಆರೋಪಿಗಳ ಚಹರೆ ಮತ್ತು ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರ ವಾಹನದ ನೋಂದಣಿ ಸಂಖ್ಯೆ ಸ್ಪಷ್ಟವಾಗಿ ಗೋಚರಿಸಿರಲಿಲ್ಲ. ಆದರೂ ವಾಹನದ ಕುರುಹುಗಳನ್ನು ಪರಿಶೀಲಿಸಿದಾಗ ಟಿವಿಎಸ್‍ನ ಹಿಂದಿನ ಬ್ರೇಕ್‍ಲೈಟನ್ನು ಡಿಸ್‍ಕನೆಕ್ಟ್ ಮಾಡಿರುವುದು ಮತ್ತು ಕೃತ್ಯ ವೆಸಗಿದ ನಂತರ ಗೊರಗುಂಟೆಪಾಳ್ಯದ ಕಡೆಗೆ ತೆರಳಿರುವುದು ಸಿಸಿಟಿವಿ ಫುಟೇಜ್‍ಗಳ ನಿರಂತರ ಪರಿಶೀಲನೆಯಿಂದ ಕಂಡುಬಂತು.
ಈ ಆಧಾರದ ಮೇಲೆ ಬೆಳಗಿನ ಜಾವ 3 ಗಂಟೆ ಸುಮಾರಿನಲ್ಲಿ ತನಿಖೆ ಕೈಗೊಂಡು ಒಬ್ಬನನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಮತ್ತೋರ್ವ ಆರೋಪಿತೆಯನ್ನು ವಶಕ್ಕೆ ಪಡೆದಿದ್ದು ಇವರಿಬ್ಬರು ದಂಪತಿ ಎಂಬುದು ದೃಢಪಟ್ಟಿದೆ. ಇನ್‍ಸ್ಪೆಕ್ಟರ್ ಬೋಳೆತ್ತಿನ್ ಅವರ ನೇತೃತ್ವದ ಸಿಬ್ಬಂದಿ ತಂಡ ಆರೋಪಿ ದಂಪತಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
