Tuesday, April 23, 2024
Homeರಾಜ್ಯಶಾಲೆ ಪಠ್ಯದಲ್ಲಿ ಸಂಚಾರಿ ಜಾಗೃತಿ ಅಳವಡಿಸಲು ಸಿದ್ಧತೆ

ಶಾಲೆ ಪಠ್ಯದಲ್ಲಿ ಸಂಚಾರಿ ಜಾಗೃತಿ ಅಳವಡಿಸಲು ಸಿದ್ಧತೆ

ಬೆಂಗಳೂರು,ಫೆ.10- ಮುಂದಿನ ಶೈಕ್ಷಣಿಕ ವರ್ಷದಿಂದ 1 ರಿಂದ 10ನೇ ತರಗತಿವರೆಗಿನ ಪಠ್ಯದಲ್ಲಿ ಸಂಚಾರ ನಿಯಮಗಳ ಕುರಿತ ಜಾಗೃತಿ ವಿಷಯ ಅಳವಡಿಸಲು ಸಿದ್ಧತೆ ನಡೆಸಲಾಗಿದೆ ಎಂದು ಸಂಚಾರಿ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಎಂ.ಎನ್. ಅನುಚೇತ್ ತಿಳಿಸಿದ್ದಾರೆ. ಸಂಚಾರ ಸಂಪರ್ಕ ದಿವಸ್ ಅಂಗವಾಗಿ ಪೀಣ್ಯ ಇಂಡಸ್ಟ್ರೀಯಲ್ ಅಸೋಸಿಯೇಷನ್‍ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಲಾಮಕ್ಕಳಲ್ಲಿ ಜಾಗೃತಿ ಮೂಡಿಸಲು ಪೊಲೀಸ್ ಇಲಾಖೆ 1ರಿಂದ 10ನೇ ತರಗತಿಗಳ ಮಕ್ಕಳಿಗೆ ಸಂಚಾರಿ ನಿಯಮಗಳ ಬಗ್ಗೆ ವಿಶೇಷ ಪಠ್ಯಕ್ರಮ ರಚಿಸಿದ್ದು, ಅದನ್ನು ಅಳವಡಿಸಿಕೊಳ್ಳುವುದಾಗಿ ಡಿಎಸ್‍ಇಆರ್‍ಟಿ ಹೇಳಿದೆ ಎಂದರು.

ಕಳೆದ 30 ವರ್ಷಗಳಿಂದ ಸ್ಟೂಡೆಂಟ್ ಅಸೋಸಿಯೇಷನ್ ರೋಡ್ ಸೇಫ್ಟಿ ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿ ವಾರ ಶಾಲೆಗಳಿಗೆ ಭೇಟಿ ನೀಡಿ 4ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಒಂದು ಗಂಟೆ ಕಾಲ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಹೇಳಿದರು. ಟ್ರಾಫಿಕ್ ಪಾರ್ಕ್ ನಲ್ಲಿ ದಿನಕ್ಕೆ ಒಂದು ಶಾಲೆಯ 60 ಮಕ್ಕಳನ್ನು ಕರೆತಂದು ಮೂರು ಗಂಟೆಗೂ ಹೆಚ್ಚು ಕಾಲ ಸಂಚಾರಿ ನಿಯಮಗಳ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕರು ಸಂಚಾರ ದಟ್ಟಣೆ, ವೀಲ್ಹಿಂಗ್ ಹಾವಳಿ, ಪಾದಚಾರಿ ಮಾರ್ಗ ಒತ್ತುವರಿ, ಸರಕುಸಾಗಣೆ ವಾಹನಗಳ ಬೇಕಾಬಿಟ್ಟಿ ಪಾರ್ಕಿಂಗ್ ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಆಯುಕ್ತರ ಬಳಿ ಹಂಚಿಕೊಂಡರು. ಪ್ರಶ್ನೆಗೆ ಉತ್ತರಿಸಿದ ಜಂಟಿ ಆಯುಕ್ತರು, ನಗರ ವ್ಯಾಪ್ತಿಯ ಸುಮಾರು 1484 ಕಿ.ಮೀ ಔಟರ್ ರಿಂಗ್ ರೋಡ್ ವ್ಯಾಪ್ತಿಯಲ್ಲಿ ಪಾದಚಾರಿ ಒತ್ತುವರಿ ತೆರವು ಕಾರ್ಯವನ್ನು ಬಿಬಿಎಂಪಿ ನಡೆಸುತ್ತಿದ್ದು, ಇದಕ್ಕೆ ನಾವು ಸಹಕರಿಸುತ್ತಿದ್ದೇವೆ. ಹಂತ ಹಂತವಾಗಿ ನಗರದ ಎಲ್ಲ ಪಾದಚಾರಿ ಮಾರ್ಗವನ್ನು ಸರಿಪಡಿಸಲಾಗುವುದು ಎಂದು ಭರವಸೆ ನೀಡಿದರು.

ಅಮಿತ್ ಶಾ ಆಗಮನದ ಬೆನ್ನಲ್ಲೇ ಬಿಜೆಪಿಯಲ್ಲಿ ಸಂಚಲನ

ಇತ್ತೀಚೆಗೆ ಪಶ್ಚಿಮ ಸಂಚಾರ ವಿಭಾಗದ ವ್ಯಾಪ್ತಿಯಲ್ಲಿ ವಿಲ್ಹೀಂಗ್ ಮಾಡುತ್ತಿದ್ದ 16 ಜನರ ಗ್ಯಾಂಗ್‍ನ್ನು ಪತ್ತೆಹಚ್ಚಿದ್ದು, ಅವರೆಲ್ಲರೂ ಅಪ್ರಾಪ್ತರಾಗಿದ್ದಾರೆ. ಅವರ ಪೋಷಕರ ಬಳಿ 5 ಲಕ್ಷವರೆಗಿನ ಬಾಂಡ್ ಓವರ್ ಮಾಡಿಸಿಕೊಳ್ಳಲಾಗಿದ್ದು, ಮುಂದಿನ ದಿನಗಳಲ್ಲಿ ಇದೇ ರೀತಿ ನಿಯಮ ಉಲ್ಲಂಘನೆಯಲ್ಲಿ ತೊಡಗಿಕೊಂಡರೆ ಅದನ್ನು ಜಪ್ತಿ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.ಬೈಕ್‍ಗಳಿಗೆ ಆಲ್ಟ್ರೇಷನ್ ಮಾಡುತ್ತಿದ್ದ ಗ್ಯಾರೇಜ್ ಮೇಲೆ ಕ್ರಿಮಿನಲ್ ಕೇಸ್ ಹಾಕಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಅವರು ಮಾತನಾಡಿ, ವೀಲ್ಹಿಂಗ್ ಮಾಡುವವರ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ಕೈಗೊಳ್ಳಲಾಗುತ್ತಿದೆ. ಹೆಚ್ಚಿನವರು ಅಪ್ರಾಪ್ತರಾಗಿರುವುದರಿಂದ ಅವರ ಪೋಷಕರಿಗೆ ದಂಡ ವಿಸಲಾಗುತ್ತಿದ್ದು, 10 ಸಾವಿರದಿಂದ 5 ಲಕ್ಷದವರಗೆ ದಂಡ ಹಾಕಿದ್ದೇವೆ ಎಂದರು. ಸಂಚಾರಿ ಸಮಸ್ಯೆಗಳು ಬದಲಾದಂತೆ ನಾವು ಸಹ ತಂತ್ರಜ್ಞಾನ ಬದಲಾಯಿಸಿಕೊಂಡು ಸಂಚಾರ ನಿರ್ವಹಣೆ ಮಾಡುತ್ತಿದ್ದೇವೆ ಎಂದು ಆಯುಕ್ತರು ತಿಳಿಸಿದರು.

ಪೀಣ್ಯ ಇಂಡಸ್ಟ್ರೀಯಲ್ ಅಸೋಸಿಯೇಷನ್ ಅಧ್ಯಕ್ಷ ಎಚ್.ಎಂ.ಆರೀಫ್ ಮಾತನಾಡಿ, ಪೀಣ್ಯ ಇಂಡಸ್ಟ್ರಿಯಲ್ ವ್ಯಾಪ್ತಿಯಲ್ಲಿ ಮುಖ್ಯ ಸಮಸ್ಯೆ ಏನೆಂದರೆ ಜನದಟ್ಟಣೆ. ಇಲ್ಲಿ ಕೈಗಾರಿಕೆಗಳು ಪ್ರಾರಂಭವಾಗುವ ಬೆಳಿಗ್ಗೆ 8 ರಿಂದ 9, ಸಂಜೆ 5 ರಿಂದ 7.30ರವರೆಗೆ ಹೆಚ್ಚು ಇರುತ್ತದೆ. ಇದನ್ನು ನಿಯಂತ್ರಿಸಲು ಹೆಚ್ಚು ದಟ್ಟಣೆ ಉಂಟಾಗುವ ಬ್ಲಾಕ್ ಸ್ಪಾಟ್‍ಗಳಲ್ಲಿ ಹೆಚ್ಚುವರಿ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು. ಪೀಣ್ಯ ಕೈಗಾರಿಕಾ ವಲಯಕ್ಕೆ ಸರಕುಗಳನ್ನು ಹೊತ್ತು ಬರುವ ಲಾರಿಗಳನ್ನು ನೆಲಮಂಗಲ ಬಳಿಯೇ ತಡೆಯಲಾಗುತ್ತಿದೆ. ಪೀಣ್ಯ ಕೈಗಾರಿಕೆಗಳ ಬಿಲ್ ಹೊಂದಿರುವ ಲಾರಿಗಳ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಆಯುಕ್ತರ ಬಳಿ ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಉತ್ತರ ಸಂಚಾರ ವಿಭಾಗದ ಡಿಸಿಪಿ ಸಿರಿಗೌರಿ ಮತ್ತು ಪೊಲೀಸ್ ಅಧಿಕಾರಿಗಳು ಹಾಜರಿದ್ದರು.

RELATED ARTICLES

Latest News