ಗೊಂದಲದ ಗೂಡಾದ ಟ್ರಾಯ್ ನಿಯಮ, ಟಿವಿ ನೋಡೋರಿಗೆ ಫುಲ್ ಟೆನ್ಷನ್..!

90ರ ದಶಕ ದೃಶ್ಯ ಮಾಧ್ಯಮದ ಕ್ರಾಂತಿ ಎಂದೆ ಬಿಂಬಿತವಾದ(ಡಿಡಿ ನೆಟ್‍ವರ್ಕ್) ದೂರದರ್ಶನದಲ್ಲಿ ಉಚಿತವಾಗಿ ಮನರಂಜನಾ ಕಾರ್ಯಕ್ರಮ ಹಾಗೂ ಸುದ್ದಿಯನ್ನು ನೋಡಲು ಅದೇನೋ ಸಂತಸ-ಸಡಗರ ಇರುತ್ತಿತ್ತು. ದಿನಕ್ಕೆ ಎರಡು-ಮೂರು ಬಾರಿ ವಾರ್ತೆಗಳು ಅದೂ ಸಹ ಹಿಂದಿ, ಇಂಗ್ಲಿಷ್ ಹಾಗೂ ಪ್ರಾದೇಶಿಕ (ಕರ್ನಾಟಕದಲ್ಲಿ ಕನ್ನಡ) ಭಾಷೆಯಲ್ಲಿ ವಾರಕ್ಕೊಮ್ಮೆ ಕನ್ನಡ, ಹಿಂದಿ ಸಿನಿಮಾ, ಕನ್ನಡ ಹಾಗೂ ಹಿಂದಿ ಚಿತ್ರಹಾರ್ ಹಾಗೂ ಚಿತ್ರಗೀತೆ ನೋಡುವುದೇ ಒಂದು ಆನಂದವಾಗಿತ್ತು.

ಹಿಂದೆ ಮನರಂಜನೆಗೆ ಇದ್ದ ಕೇಂದ್ರ ಸರ್ಕಾರದ ಒಂದೆರಡು ಸರ್ಕಾರಿ ದೂರದರ್ಶನದ ಚಾನಲ್ ಬಿಟ್ಟರೆ ಬೇರೆ ಇರಲಿಲ್ಲ. ಆದರೆ, ಇಂದು ಚಿತ್ರಗೀತೆಗೊಂದು, ಸಿನಿಮಾ , ಸುದ್ದಿ , ಮಕ್ಕಳ ಮನರಂಜನೆಗೂ ದರಪಟ್ಟಿಯೊಂದಿಗೆ ಪ್ರತ್ಯೇಕ ಚಾನಲ್‍ಗಳು ಬಂದು ಬಿಟ್ಟಿದೆ.

ಸರಿ, ಇದೀಗ ಪ್ರಶ್ನೆ ಎಷ್ಟು ಚಾನಲ್ ಹಾಗೂ ಅದರ ಉಪಯೋಗದ ಬಗ್ಗೆ ಮಾತನಾಡುವುದಕ್ಕಿಂತಲೂ ಇದನ್ನು ಇಂದು ನಮ್ಮ ಮನೆಯಲ್ಲಿ ಚಿಕ್ಕ ಪರದೆ ಮೇಲೆ ನೋಡಲು ಪ್ರತಿ ಚಾನಲ್‍ಗೆ ಇಂತಿಷ್ಟು ದರ ನಿಗದಿಯ ಗೊಂದಲ ಗ್ರಾಹಕ (ಪ್ರತಿಮನೆಯ ಟಿವಿ ವೀಕ್ಷಕ) ನಿಗೆ ಹಾಗೂ ಇದನ್ನು ಮನೆಮನೆಗೆ ವಿತರಿಸುವ ವಿತರಕರಿಗೆ ತಲೆನೋವಾಗಿ ಪರಿಣಮಿಸಿದೆ ಎಂದರೆ ತಪ್ಪಾಗಲಾರದು.

ಕೇಂದ್ರ ಸರ್ಕಾರಿ ಸ್ವಾಮ್ಯದ (ಟ್ರಾಯ್) ಗ್ರಾಹಕರ ಹಿತ ಕಾಯುವ ನೆಪದಲ್ಲಿ ಪ್ರತಿ ಚಾನಲ್‍ಗೆ ಇಂತಿಷ್ಟು ರೇಟ್  ಮಾಡಿದೆ. ಹಿಂದೆ ಕೇಬಲ್ ಆಪರೇಟರ್‍ಗಳು ಮಾಸಿಕ ಕೇವಲ 150 250 ರೂ.ಗಳನ್ನು ಪಡೆದು ಎಲ್ಲ ಚಾನಲ್ ವೀಕ್ಷಣೆಗೆ ಅವಕಾಶ ಮಾಡಿಕೊಟ್ಟಿದ್ದರು. ಆದರೆ, ಇಂದು ಗ್ರಾಹಕರು ಯಾವ ಚಾನಲ್ ಆಯ್ಕೆ ಮಾಡಿಕೊಳ್ಳಬೇಕು ಎಂಬ ಗೊಂದಲ ಮುಂದುವರೆದಿದೆ.

ದರ ನಿಗದಿಯಿಂದ ಗ್ರಾಹಕನಿಗೆ ಯಾವುದೇ ಲಾಭವಾಗಿಲ್ಲ. ಕಾರಣ ನಾವು ಯಾವ ಚಾನಲ್ ನೋಡುತ್ತೇವೆ..? ಎಷ್ಟು ಸಮಯ ನೊಡುತ್ತೇವೆ..? ಅಷ್ಟು ದರ ನಿಗದಿಮಾಡಲಾಗಿದೆ ಎಂದು ಹೇಳಲಾಗಿದೆ. ಆದರೆ, ನಾವು ಎಷ್ಟೇ ಚಾನಲ್ ಆಯ್ಕೆ ಮಾಡಿದರೂ ಸಹ ದಿನದ 24 ಗಂಟೆಯಲ್ಲಿ ಕೇವಲ 10 ರಿಂದ 12 ಗಂಟೆಯಷ್ಟೆ ಚಾನಲ್‍ಗಳ ವೀಕ್ಷಣೆ ಮಾಡಲು ಸಾಧ್ಯ. ಕೆಲಸಕ್ಕೆ ಹೋಗುವವರಂತೂ ಒಂದೆರಡು ಗಂಟೆಯೂ ಟಿವಿ ವೀಕ್ಷಿಸಲಾರರು. ಪರಿಸ್ಥಿತಿ ಹೀಗಿರುವಾಗ ನೋಡಿದ್ದಕ್ಕಷ್ಟೆ ದರ ನೀಡಿ ಎಂಬ ಸ್ಲೋಗನ್ ಏಕೆ.

ಇನ್ನು ನಾವು ಟಿವಿ ವೀಕ್ಷಿಸಲು ಪ್ರತಿ ತಿಂಗಳು ಮುಂಗಡವಾಗಿ ಪಾವತಿ ಮಾಡಬೇಕು. ಇಲ್ಲವಾದರೆ ನಿಮ್ಮ ಮನೆಯಲ್ಲಿ ಟಿವಿ ಮನರಂಜನೆ ಕಟ್. ಕೇವಲ ಮೊಬೈಲ್ ಸಂಪರ್ಕಕ್ಕೆ ಇದ್ದ ಈ ವ್ಯವಸ್ಥೆ ಕೇಬಲ್ ವ್ಯವಸ್ಥೆಗೂ ಬಂದುಬಿಟ್ಟಿತು. ಇದರಿಂದ ಅನು ಕೂಲಕ್ಕಿಂತಲೂ ಅನಾನುಕೂಲವೇ ಹೆಚ್ಚಾಗಿದೆ.

ಈ ರೀತಿಯ ವ್ಯವಸ್ಥೆ ಗ್ರಾಹಕರಲ್ಲಿ ಕಿರಿಕಿರಿ ಉಂಟುಮಾಡಿದೆ. ಡಿಜಿಟಲೀಕರಣ ಎಂಬ ನೆಪದಲ್ಲಿ ಗ್ರಾಹಕರ ಜೆಬಿಗೆ ಹಾಗೂ ನೆಮ್ಮದಿಗೆ ಕತ್ತರಿ ಬಿದ್ದಿದೆ. ಇನ್ನು ಕೇಬಲ್ ಹೊರತುಪಡಿಸಿದರೆ ಡಿಟಿಎಚ್ ಸೇವೆ ನೀಡುತ್ತಿರುವ ಹಲವು ಖಾಸಗಿ ಕಂಪೆನಿಗಳು ತಿಂಗಳಿಗೆ ಇಂತಿಷ್ಟು ದರದಲ್ಲಿ ಗ್ರಾಹಕರ ನೆಚ್ಚಿನ ಚಾನಲ್ ನೀಡುತ್ತಿದ್ದವು.

ಅಲ್ಲದೆ, ರಾಜ್ಯಗಳ ಭಾಷೆಗಳ ಅನುಗುಣವಾಗಿ ರೀಜನಲ್ ಪ್ಯಾಕ್ ವ್ಯವಸ್ಥೆ ಸಹ ಇತ್ತು. ಆದರೆ, ಇಂದು ಚಾನಲ್‍ಗೆ ಇಂತಿಷ್ಟು ದರಪಟ್ಟಿ ನಂತರ ಹಿಂದೆ ಗ್ರಾಹಕರು ನೀಡುತ್ತಿದ್ದ ರೀಜನಲ್ ಪ್ಯಾಕ್‍ನ ಮಾಸಿಕ ದರ ಪಟ್ಟಿ ಹೆಚ್ಚಿಗೆಯಾಗಿದೆ. ಅಲ್ಲದೆ, ನಾವು ಆಯ್ಕೆ ಮಾಡಬೇಕಾದ ಚಾನಲ್‍ಗಳು ನೆಟ್ ಪ್ಯಾಕ್‍ನಲ್ಲಿ ಇರುವುದಿಲ್ಲ. ಈ ರೀತಿ ಚಾನಲ್ ಆಯ್ಕೆ ಗೊಂದಲ ಸೇರಿದಂತೆ ಮಾಸಿಕ ದರದಲ್ಲೂ ಹೆಚ್ಚಿನ ಹಣ ವ್ಯಯಿಸಬೇಕಾದ ಅನಿವಾರ್ಯತೆ ಟಿವಿ ವೀಕ್ಷಕರದ್ದಾಗಿದೆ.

ಇನ್ನು ಡಿಟಿಎಚ್ ಕಂಪೆನಿಗಳ ದರ ಪಟ್ಟಿಯ ಸಮರದಿಂದ ದಿನಕ್ಕೊಂದು ಆಫರ್‍ಗಳು ಗ್ರಾಹಕರನ್ನು ಗೊಂದಲ್ಲಕ್ಕೀಡುಮಾಡಿದೆ. ಆದರೆ, ಟ್ರಾಯ್ Telecom Regulatory Authority of India (TRAI) ಹೇಳುವಂತೆ 100 ಚಾನಲ್‍ಗಳ ಪ್ಯಾಕ್‍ಗೆ NCF (Network capacity Fee-130) 130+18% ಜಿಎಸ್‍ಟಿ ಸೇರಿ 153 ರೂ. ನೀಡಬೇಕಾಗುತ್ತದೆ ಹಾಗೂ ಇದರೊಂದಿಗೆ ನಿಮಗೆ ಫ್ರಿ ಚಾನಲ್ ಹೊರತುಪಡಿಸಿ ಬೇರೆ ಚಾನಲ್ ಬೇಕಾದಲ್ಲಿ ಚಾನಲ್‍ಗಳಿಗೆ ಪ್ರತ್ಯೇಕ ದರ ನೀಡಿ ಪಡೆಯಬೇಕು.

130 ರೂ. ಮಾಸಿಕ ದರದೊಂದಿಗೆ ಇತರೆ ನೆಚ್ಚಿನ ಚಾನಲ್ ಆಯ್ಕೆ ಮಾಡಿದಲ್ಲಿ ಮಾಸಿಕ ದರ 350ರೂ. ಗಡಿ ದಾಟುತ್ತದೆ. ಆದರೆ, ಹಿಂದೆ ಕೇಬಲ್ ನೆಟ್‍ವರ್ಕ್ ಆಪರೇಟರ್ 250ಕ್ಕೆ ಎಲ್ಲ ಚಾನಲ್‍ಗಳನ್ನು ನೀಡುತ್ತಿದ್ದರು. ಅಲ್ಲದೆ, ಮುಂಗಡ ಮಾಸಿಕ ಬಾಡಿಗೆ ಪಾವತಿ ವ್ಯವಸ್ಥೆಯ ಕಿರಿಕಿರಿ ಇರಲಿಲ್ಲ. ಆದರೆ, ಈಗ ಗ್ರಾಹಕರು ಪ್ರತಿ ತಿಂಗಳು ಮಾಸಿಕ ಬಾಡಿಗೆ ಮುಂಗಡ ಪಾವತಿ ಮಾಡಬೇಕು.ಚಾನಲ್‍ಗಳ ನೋಡುಗರ ಸಂಖ್ಯೆಗೆ ಅನುಗುಣವಾಗಿ ಸರ್ಕಾರ ನಿಗದಿತ ದರದಲ್ಲೂ ವ್ಯತ್ಯಾಸವಾಗಲಿದ್ದು, ಮತ್ತೆ ಚಾನಲ್‍ಗಳ ಆಯ್ಕೆ ಹಾಗೂ ದರಪಟ್ಟಿ ನಿಗದಿ ಗೊಂದಲ ಗ್ರಾಹಕರಲ್ಲಿ ಮುಂದುವರೆಯಲಿದೆ.

ಟ್ರಾಯ್‍ನ ನಿಯಮಗಳು ಸರಿಯಾಗಿ ಗ್ರಾಹಕರಿಗೆ ತಲುಪಿಲ್ಲ ಹಾಗೂ ಕನಿಷ್ಟ 130ರೂ. ದರದಲ್ಲಿ ಉಚಿತ ಚಾನಲ್ ಒದಗಿಸಲು ಕೇಬಲ್ ಆಪರೇಟರ್‍ಗಳು ಸಿದ್ಧವಿಲ್ಲ. ಆಪರೇಟರ್‍ಗಳು ಕನಿಷ್ಟ 250 ರಿಂದ 400 ರೂ.ಗಳನ್ನು ಪಡೆದು ಗೊಂದಲದ ಯಾವುದೋ ಒಂದು ಪ್ಯಾಕ್‍ನ ಸೇವೆ ನೀಡುವ ಮೂಲಕ ಕೈ ತೊಳೆದುಕೊಳ್ಳುತ್ತಿದ್ದಾರೆ. ಇದು ಗ್ರಾಹಕರಿಗೆ ಹೊರೆಯಾಗಿದೆಯೇ ಹೊರತು ಟ್ರಾಯ್‍ನ ಹೊಸ ನಿಯಮದಿಂದ ಯಾವುದೇ ರೀತಿ ಅನುಕೂಲವಾಗಿಲ್ಲ.

ಒಟ್ಟಾರೆ ಗ್ರಾಹಕರ ಹಿತ ಕಾಯುವ ಬರದಲ್ಲಿ ಕೇಂದ್ರ ಸರ್ಕಾರ ಚಾನಲ್‍ಗಳಿಗೆ ಹಾಗೂ ಡಿಟಿಎಚ್ ಕಂಪೆನಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಇದರಿಂದ ಗ್ರಾಹಕರ ಜೇಬಿಗೆ ಹಾಗೂ ನೆಮ್ಮದಿಗೆ ಕತ್ತರಿ ಬಿದ್ದಂತಾಗಿದೆ ಎಂಬುದು ಹಲವರ ವಾದವಾಗಿದೆ.

# ಸಂತೋಷ್ ಸಿ.ಬಿ., ಹಾಸನ