ಇರಾನ್‍ನಲ್ಲಿ ಹಳಿತಪ್ಪಿದ ರೈಲು, 17 ಜನ ಸಾವು, 50 ಕ್ಕೂ ಹೆಚ್ಚು ಮಂದಿಗೆ ಗಾಯ

Spread the love

ಟೆಹ್ರಾನ್, ಜೂ.8- ಪೂರ್ವ ಇರಾನ್‍ನಲ್ಲಿ ಬುಧವಾರ ಮುಂಜಾನೆ ಪ್ರಯಾಣಿಕರ ರೈಲು ಭಾಗಶಃ ಹಳಿತಪ್ಪಿ ಕನಿಷ್ಠ 17 ಜನರು ಸಾವನ್ನಪ್ಪಿದ್ದು, 50 ಜನರು ಗಾಯಗೊಂಡ ಘಟನೆ ನಡೆದಿದೆ.  ಸುಮಾರು 350 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ರೈಲಿನಲ್ಲಿ ಸಂಭವಿಸಿದ ದುರಂತದ ಪೂರ್ಣ ಪ್ರಮಾಣದ ಮಾಹಿತಿಗಳು ಪ್ರಕಟವಾಗಿಲ್ಲ. ಮರುಭೂಮಿ ನಗರವಾದ ತಬಾಸ್ ಬಳಿ ಮುಂಜಾನೆ ಕತ್ತಲೆಯಲ್ಲಿ ರೈಲಿನಲ್ಲಿದ್ದ ಏಳು ಬೋಗಿಗಳಲ್ಲಿ ನಾಲ್ಕು ಹಳಿತಪ್ಪಿದವು ಎಂದು ಇರಾನ್ ರಾಜ್ಯ ದೂರದರ್ಶನ ವರದಿ ಮಾಡಿದೆ.

ರಾಜಧಾನಿ ಟೆಹ್ರಾನ್‍ನ ಆಗ್ನೇಯಕ್ಕೆ ತಬಾಸ್ ಸುಮಾರು 550 ಕಿಲೋಮೀಟರ್ ದೂರದಲ್ಲಿದೆ. ಅಲ್ಲಿಗೆ ಸಂಪರ್ಕ ಸುಲಭವಲ್ಲವಾದ್ದರಿಂದ ಆರಂಭದಲ್ಲಿ ಪರಿಹಾರ ಕಾರ್ಯಕ್ಕೆ ಹಿನ್ನೆಡೆಯಾಗಿದೆ. ತಕ್ಷಣವೇ ಆಂಬ್ಯುಲೆನ್ಸ್ ಮತ್ತು ಹೆಲಿಕಾಪ್ಟರ್‍ಗಳೊಂದಿಗೆ ರಕ್ಷಣಾ ತಂಡಗಳು ಧಾವಿಸಿವೆ. ಘಟನೆಯಲ್ಲಿ ಹನ್ನೆರಡು ಜನ ಗಂಭೀರ ಗಾಯಗೊಂಡಿದ್ದಾರೆ, ಕೆಲವರನ್ನು ಸ್ಥಳೀಯ ಆಸ್ಪತ್ರೆಗಳಿಗೆ ವರ್ಗಾಯಿಸಲಾಗಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.

ಅಪಘಾತದಲ್ಲಿ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ತಬಾಸ್ ಗವರ್ನರ್ ಅಲಿ ಅಕ್ಬರ್ ರಹೀಮಿ ಹೇಳಿದ್ದಾರೆ. ಜೆಸಿಬಿ ಮಾದರಿಯ ವಾಹನಕ್ಕೆ ರೈಲು ಡಿಕ್ಕಿ ಹೊಡೆದು ಹಳಿ ತಪ್ಪಿದೆ ಎಂದು ಹೇಳಲಾಗಿದೆ. ಹಳಿ ತಪ್ಪುವ ವೇಳೆ ಬೋಗಿಗಳಲ್ಲಿದ್ದ ಪ್ರಯಾಣಿಕರು ಮೇಲೆ ಕೆಳಗೆ ಹಾರಿ ಬೀಳುತ್ತಿರುವುದು ಪ್ರಸಾರವಾಗಿರುವ ದೃಶ್ಯಗಳಲ್ಲಿ ಕಂಡು ಬಂದಿದೆ.

ಇರಾನ್‍ನ ಅತ್ಯಂತ ಕೆಟ್ಟ ರೈಲು ದುರಂತವು 2004 ರಲ್ಲಿ ಸಂಭವಿಸಿತು, ಗ್ಯಾಸೋಲಿನ್, ರಸಗೊಬ್ಬರ, ಗಂಧಕ ಮತ್ತು ಹತ್ತಿ ತುಂಬಿದ ರನ್‍ಅವೇ ರೈಲು ಐತಿಹಾಸಿಕ ನಗರವಾದ ನೇಶಾಬುರ್ ಬಳಿ ಅಪಘಾತಕ್ಕೀಡಾಯಿತು, ಸುಮಾರು 320 ಜನರು ಸಾವನ್ನಪ್ಪಿದರು, 460 ಜನರು ಗಾಯಗೊಂಡರು ಮತ್ತು ಐದು ಹಳ್ಳಿಗಳನ್ನು ಹಾನಿಗೊಂಡಿದ್ದವು. 2016 ರಲ್ಲಿ ಸಂಭವಿಸಿದ ಮತ್ತೊಂದು ರೈಲು ಅಪಘಾತದಲ್ಲಿ ಡಜನ್ಗಟ್ಟಲೆ ಜನರು ಸಾವನ್ನಪ್ಪಿದರು ಮತ್ತು ಹಲವಾರು ಜನರು ಗಾಯಗೊಂಡರು. ಬಳಿಕ ಈ ದುರುಂತ ರಾಷ್ಟ್ರೀಯ ಶೋಕಾಚರಣೆಗೆ ಕಾರಣವಾಗಿದೆ.

Facebook Comments