ವೇತನ ಪರಿಷ್ಕರಣೆಗೆ ಸಾರಿಗೆ ನಿಗಮಗಳ ನೌಕರರ ಒತ್ತಾಯ

ಬೆಂಗಳೂರು, ಡಿ.13- ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಸೇರಿದಂತೆ ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ವೇತನ ಹಾಗೂ ಇತರ ಸೌಲಭ್ಯಗಳ ಪರಿಷ್ಕರಣೆಯ ಅವಧಿ ಡಿ.31ಕ್ಕೆ ಮುಕ್ತಾಯವಾಗಲಿದ್ದು, ಮತ್ತೆ ಹೊಸದಾಗಿ ಪರಿಷ್ಕರಣೆ ಮಾಡಲು ಕಾರ್ಮಿಕ ಸಂಘದ ಪ್ರತಿನಿಧಿಗಳ ಜತೆ ಸೌಹಾರ್ದಯುತ ಮಾತುಕತೆ ನಡೆಸಬೇಕು ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ನೌಕರರ ಫೆಡರೇಶನ್ ಒತ್ತಾಯಿಸಿದೆ.

ನಾಲ್ಕು ನಿಗಮಗಳ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಲಾಗಿದ್ದು, 2020ರ ಜನವರಿ ಒಂದರಿಂದ ಹೊಸದಾಗಿ ವೇತನ ಪರಿಷ್ಕರಣೆಯನ್ನು ಜಾರಿಗೆ ತರಬೇಕು. ಹಾಗಾಗಿ ಕಾರ್ಮಿಕ ಸಂಘದ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಬೇಕು ಎಂದು ಆಗ್ರಹಿಸಲಾಗಿದೆ.

ಹೊಸದಾಗಿ ಜಾರಿಗೆ ತಂದಿರುವ ಪಿಂಚಣಿ ಯೋಜನೆಯನ್ನು ಬದಲಾವಣೆ ಮಾಡಿ ಹಳೆ ವ್ಯವಸ್ಥೆಯನ್ನು ಮುಂದುವರೆಸಬೇಕು. ಮೂಲ ವೇತನದ ಮೇಲೆ ಶೇ.50ರಷ್ಟು ತುಟಿಭತ್ಯೆ ಹೆಚ್ಚಿಸಬೇಕು. ಮನೆ ಬಾಡಿಗೆ, ಬಾಟಾ ಭತ್ಯೆಗಳನ್ನು ಪರಿಷ್ಕರಿಸಬೇಕು. ಜತೆಗೆ ಸಮವಸ್ತ್ರ, ಬಸ್‍ನ ಸ್ವಚ್ಚತೆ ಸೇರಿದಂತೆ ಹಲವಾರು ರೀತಿಯ ಭತ್ಯೆಗಳೂ ಹೆಚ್ಚಳವಾಗಬೇಕು.

ಎಂಟು ಗಂಟೆಗಳ ಕೆಲಸದ ಅವಧಿ ನಿಯಮ ಕಡ್ಡಾಯವಾಗಿ ಜಾರಿಯಾಗಬೇಕು. ನೌಕರರ ಸ್ನೇಹಿ ವರ್ಗಾವಣೆ ನೀತಿ ಅನುಷ್ಠಾನಗೊಳಿಸಬೇಕು ಎಂಬುವೂ ಸೇರಿದಂತೆ ಸುಮಾರು 33ಕ್ಕೂ ಹೆಚ್ಚು ಬೇಡಿಕೆಗಳನ್ನು ಸಿಐಟಿಯು ಬೆಂಬಲಿತ ನೌಕರರ ಫೆಡರೇಶನ್ ಸಾರಿಗೆ ನಿಗಮಗಳ ಮುಂದಿಟ್ಟಿದೆ.