ಸಿಬ್ಬಂದಿಗೆ ವೇತನ ಕೊಡಲು ಆಗದ ಪರಿಸ್ಥಿತಿಯಲ್ಲಿ ಸಾರಿಗೆ ನಿಗಮಗಳು..!

ಬೆಂಗಳೂರು,ಜು.9- ರಾಜ್ಯದಲ್ಲಿ ಕೊರೊನಾ ಲಾಕ್‍ಡೌನ್‍ನಿಂದ ನಾಲ್ಕು ಸಾರಿಗೆ ಸಂಸ್ಥೆಗಳು ನಷ್ಟದ ಸುಳಿಗೆ ಸಿಲುಕಿವೆ. ತನ್ನದೇ ಸಿಬ್ಬಂದಿಗೆ ವೇತನವನ್ನೂ ಕೊಡಲು ಆಗದ ಪರಿಸ್ಥಿತಿಗೆ ತಲುಪಿವೆ.  ಇದೀಗ, ನಾಲ್ಕು ನಿಗಮಗಳ ಸಾರಿಗೆ ನೌಕರರಿಗೆ ಜೂನ್ ತಿಂಗಳ ವೇತನಕ್ಕಾಗಿ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. 16,250 ಲಕ್ಷ ರೂ. ಅನುದಾನ ಬಿಡುಗಡೆ ಮಾಡಿ ಕೆಲ ಷರತ್ತುಗಳೊಂದಿಗೆ ಆದೇಶ ಹೊರಡಿಸಿದೆ.

ಸಾರಿಗೆ ನಿಗಮಗಳ ಕಷ್ಟಕ್ಕೆ ಧಾವಿಸಿರುವ ಸರ್ಕಾರ, ಏಪ್ರಿಲ್, ಮೇ ತಿಂಗಳು ಹಾಗೂ ಜೂನ್ ಅರ್ಧ ತಿಂಗಳ ವೇತನಕ್ಕಾಗಿ ಹಣ ಬಿಡುಗಡೆ ಮಾಡಿದೆ. ಕೆಎಸ್‍ಆರ್‍ಟಿಸಿಗೆ 10,176 ಲಕ್ಷ, ಬಿಎಂಟಿಸಿಗೆ 9,862 ಲಕ್ಷ, ವಾಯವ್ಯ ಸಾರಿಗೆ ಸಂಸ್ಥೆಗೆ 6,642 ಲಕ್ಷ, ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಗೆ 5,820 ಲಕ್ಷ ಬಿಡುಗಡೆ ಮಾಡಿದೆ. ಒಟ್ಟಾರೆ ನಾಲ್ಕೂ ನಿಗಮಕ್ಕೆ 32,500 ಲಕ್ಷ ( 325 ಕೋಟಿ) ಏಪ್ರಿಲ್, ಮೇ, ಜೂನ್ ಅರ್ಧ ತಿಂಗಳ ವೇತನ ಬಿಡುಗಡೆ ಮಾಡಿದೆ. ಹಾಗೆಯೇ, ಜೂನ್ ತಿಂಗಳ ಅರ್ಧದಷ್ಟು ಸಂಬಳಕ್ಕಾಗಿ 1,62,50,00 ಲಕ್ಷ ಬಿಡುಗಡೆ ಮಾಡಿದೆ.

ಜೂನ್ ತಿಂಗಳ ವೇತನಕ್ಕಾಗಿ 325 ಕೋಟಿ ಹಣಕ್ಕೆ ಬೇಡಿಕೆಯನ್ನು ನಿಗಮಗಳು ಇಟ್ಟಿದ್ದವು. ಕೋವಿಡ್ ಹಿನ್ನೆಲೆ ಆರ್ಥಿಕ ಸಂಕಷ್ಟ ನೆಪವೊಡ್ಡಿ 162 ಕೋಟಿ 50 ಲಕ್ಷ ಮಾತ್ರ ಬಿಡುಗಡೆ ಮಾಡಿದೆ. ಈ ಹಣದಲ್ಲಿ ಸಿಬ್ಬಂದಿಯ ವೇತನವನ್ನು ಮಾತ್ರ ನೀಡಬೇಕು, ಇತರೆ ಆರ್ಥಿಕ ಸೌಲಭ್ಯ ಹಾಗೂ ಭತ್ಯೆಗಳನ್ನ ನೀಡಕೂಡದು ಎಂದು ಆದೇಶಿಸಿದೆ. ಇನ್ನು, ಸಂಸ್ಥೆಗಳು ಸಿಬ್ಬಂದಿಯವರಿಗೆ ವೇತನವನ್ನು ಹೊರತುಪಡಿಸಿ, ಒದಗಿಸುವ ಇತರೆ ಭತ್ಯೆ ಮತ್ತು ಆರ್ಥಿಕ ಸೌಲಭ್ಯಕ್ಕೂ ಕತ್ತರಿ ಹಾಕಿದೆ.

ಈ ಮೂಲಕ ಸಿಬ್ಬಂದಿ ಹೆಚ್ಚುವರಿ ಕೆಲಸ ಮಾಡಿದರೂ ವೇತನವಷ್ಟೇ ಕ್ರೆಡಿಟ್ ಆಗಲಿದೆ. ಈ ಮೂಲಕ ಸಿಹಿ ಸುದ್ದಿ ಕೊಟ್ಟು ಕಹಿ ತಿನ್ನುವ ಅನುಭವ ಆಗಿದೆ. ಪ್ರಸಕ್ತ ಸಾಲಿಗೆ ಶಾಲಾ-ಕಾಲೇಜುಗಳು ಆರಂಭವಾದರೆ ಉಚಿತ ಹಾಗೂ ರಿಯಾಯಿತಿ ಬಸ್ ಪಾಸನ್ನು ವಿತರಣೆ ಮಾಡಿದರೆ, ಆ ವೆಚ್ಚವನ್ನು ಆಯಾ ನಿಗಮಗಳೇ ಭರಿಸಬೇಕು ಅಥವಾ ವಿದ್ಯಾರ್ಥಿಗಳಿಂದ ಭರಿಸಬೇಕು.

ಸರ್ಕಾರದಿಂದ ಯಾವುದೇ ಸಹಾಯಧನವನ್ನು ಒದಗಿಸಲಾಗುವುದಿಲ್ಲ ಅಂತಾ ತಿಳಿಸಲಾಗಿದೆ. ಹಾಗೆಯೇ ಇತರೆ ಬಸ್ ಪಾಸ್ ರಿಯಾಯಿತಿ ಕೂಡ ಈ ಸಾಲಿನಲ್ಲಿ ಲಭ್ಯವಿರುವುದಿಲ್ಲ.

# ವೇತನ ಬಳಕೆಗೆ ಷರತ್ತುಗಳೇನು?:
1.ನಾಲ್ಕೂ ಸಾರಿಗೆ ಸಂಸ್ಥೆಗಳು ಆರ್ಥಿಕ ನಿಬಂಧನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.
2. ಗಳಿಕೆ ರಜೆ ನಗದೀಕರಣ ಮತ್ತು ತುಟ್ಟಿಭತ್ಯೆ ಹೆಚ್ಚಳವನ್ನು ಪಾವತಿಸತಕ್ಕದ್ದಲ್ಲ.
3. ಅನವಶ್ಯಕ ಹುದ್ದೆಗಳನ್ನು ಕಡಿತಗೊಳಿಸಿ ಹುದ್ದೆಗಳ ಗಾತ್ರವನ್ನು ಪುನಾರಚಿಸುವುದು. ಹೆಚ್ಚಿನ ಮತ್ತು ಅನವಶ್ಯಕ ಹುದ್ದೆಗಳನ್ನು ಕೈಬಿಡುವಂತೆ ಸೂಚಿಸಲಾಗಿದೆ.
4. ಸರ್ಕಾರದ ಮತ್ತು ಸಂಸ್ಥೆಯ ಸ್ವಂತ ನಿಧಿಯಡಿ ಯಾವುದೇ ಬಂಡವಾಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳತಕ್ಕದ್ದಲ್ಲ.
5. ಸಂಸ್ಥೆಗೆ ಬರಬೇಕಿರುವ ಬಾಡಿಗೆ ಮತ್ತಿತರ ಸ್ವೀಕೃತಿಗಳನ್ನು ಕಡ್ಡಾಯವಾಗಿ ವಸೂಲಿ ಮಾಡುವುದು.
6. ಪ್ರಸಕ್ತ ಸಾಲಿನಲ್ಲಿ ಮುಂದಿನ ಆದೇಶದವರೆಗೆ ಯಾವುದೇ ಹೊಸ ಬಸ್ ಖರೀದಿ ಪ್ರಕ್ರಿಯೆಯನ್ನು ಮಾಡೋ ಹಾಗಿಲ್ಲ.
ವಾಹನಗಳ ನಿರ್ವಹಣೆ ಮತ್ತು ಬಿಡಿಭಾಗಗಳಡಿ ಕನಿಷ್ಠ ಹಾಗೂ ಅವಶ್ಯಕ ವೆಚ್ಚ ಮಾಡತಕ್ಕದ್ದು.ಉಚಿತ ರಿಯಾಯಿತಿ ಪಾಸ್‍ಗೆ ಸಹಾಯ ಧನ ಒದಗಿಸೋಲ್ಲ.