ಕಿಲ್ಲರ್ ಕೊರೋನಾ ಆತಂಕದಲ್ಲಿ ಸಾರಿಗೆ ಇಲಾಖೆಯ ಸಿಬ್ಬಂದಿ

ಬೆಂಗಳೂರು, ಜು.1- ಸಾರಿಗೆ ಇಲಾಖೆ ಆಯುಕ್ತರ ಕಚೇರಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಆಯುಕ್ತರ ಕಚೇರಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವ್ಯಕ್ತಿಯೊಬ್ಬನಿಗೆ ಕೊರೊನಾ ಪಾಸಿಟಿವ್ ಆಗಿರುವುದರಿಂದ ಇಡೀ ಕಚೇರಿ ಸಿಬ್ಬಂದಿ ಆತಂಕಕ್ಕೊಳಗಾಗಿದ್ದಾರೆ.

ಕೆಲ ದಿನಗಳ ಹಿಂದೆ ಸಿಬ್ಬಂದಿಯೊಬ್ಬರಿಗೆ ಜ್ವರ ಬಂದಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಆತನನ್ನು ರಜೆ ಮೇಲೆ ತೆರಳುವಂತೆ ಮೇಲಧಿಕಾರಿಗಳು ಸೂಚಿಸಿದ್ದರು.

ನಿನ್ನೆ ಸಿಬ್ಬಂದಿಯ ಗಂಟಲು ದ್ರವ ಪರೀಕ್ಷೆಗೊಳಪಡಿಸಿದಾಗ ಕೊರೊನಾ ಪಾಸಿಟಿವ್ ಆಗಿರುವುದು ದೃಢಪಟ್ಟಿದೆ. ಸಿಬ್ಬಂದಿಗೆ ಸೋಂಕು ತಗುಲಿರುವ ವಿಷಯ ತಿಳಿಯುತ್ತಿದ್ದಂತೆ ಆಯುಕ್ತರ ಕಚೇರಿಯ ಸಿಬ್ಬಂದಿಯಲ್ಲಿ ಆತಂಕ ಮನೆ ಮಾಡಿದೆ.

ಇಡೀ ಕಚೇರಿಯನ್ನು ಸ್ಯಾನಿಟೈಜ್ ಮಾಡಲಾಗಿದ್ದು, ಸೀಲ್‍ಡೌನ್ ಮಾಡುವ ಬಗ್ಗೆ ಮೇಲಧಿಕಾರಿಗಳು ಚಿಂತನೆ ನಡೆಸುತ್ತಿದ್ದಾರೆ.

ಇತ್ತೀಚೆಗೆ ಸೋಂಕಿತ ವ್ಯಕ್ತಿಗಳನ್ನು ಆಸ್ಪತ್ರೆಗಳಲ್ಲಿ ದಾಖಲು ಮಾಡಿಕೊಳ್ಳುತ್ತಿಲ್ಲ. ಒಂದು ವೇಳೆ ಆಸ್ಪತ್ರೆಗೆ ದಾಖಲಾದರೂ ಸೂಕ್ತ ಚಿಕಿತ್ಸೆ ಲಭಿಸುವ ಸಾಧ್ಯತೆ ಇಲ್ಲ.

ಹೀಗಾಗಿ ಸೋಂಕು ಕಾಣಿಸಿಕೊಂಡರೆ ಏನು ಮಾಡೋದು ಸಾರ್ ಎಂದು ಆಯುಕ್ತರ ಕಚೇರಿ ಇಲಾಖೆ ಸಿಬ್ಬಂದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.  ಸೋಂಕಿತ ವ್ಯಕ್ತಿಯೊಂದಿಗೆ ಸಂಪರ್ಕವಿರಿಸಿಕೊಂಡಿದ್ದವರನ್ನು ಪತ್ತೆಹಚ್ಚಿ ಕ್ವಾರಂಟೈನ್‍ಗೆ ಒಳಪಡಿಸಲಾಗುತ್ತಿದೆ.