ಬೆಂಗಳೂರು,ಮಾ.9- ಬಿಎಂಟಿಸಿ, ಕೆಎಸ್ಆರ್ಟಿಸಿ ಸೇರಿದಂತೆ ಸಾರಿಗೆ ಸಂಸ್ಥೆಗಳ ಸಿಬ್ಬಂದಿಗೆ ಸಮವಸ್ತ್ರಕ್ಕೆ ಬದಲಾಗಿ ನಗದು ಪಾವತಿಸಲು ಕ್ರಮ ಕೈಗೊಳ್ಳಲಾಗಿದೆ. 2019-20 ಮತ್ತು 2020-21ನೇ ಸಾಲಿಗೆ ಅನ್ವಯಿಸುವಂತೆ ಸಮವಸ್ತ್ರಕ್ಕೆ ಬದಲಾಗಿ ನಗದು ಪಾವತಿಸಲು ಕ್ರಮ ಕೈಗೊಳ್ಳುವಂತೆ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರು ಆದೇಶಿಸಿದ್ದಾರೆ.
ಅದರಂತೆ ಕಳೆದ ಎರಡು ಆರ್ಥಿಕ ಸಾಲಿಗೆ ಅನ್ವಯಿಸುವಂತೆ ನಗದು ಪಾವತಿಸಲು 4 ಸಾರಿಗೆ ಸಂಸ್ಥೆಗಳ ಉಗ್ರಾಣ ಮತ್ತು ಖರೀದಿ ನಿಯಂತ್ರಕರಿಗೆ ಪತ್ರ ಬರೆದಿದ್ದಾರೆ. ಕಳೆದ 2017-18ನೇ ಸಾಲಿಗೆ ಸಮವಸ್ತ್ರ ವಿತರಿಸಲು ಮತ್ತು 2018-19ನೇ ಸಾಲಿಗೆ ನಗದು ಪಾವತಿಸಲು ಈಗಾಗಲೇ ಆದೇಶ ನೀಡಲಾಗಿತ್ತು. 2021-22ನೇ ಸಾಲಿಗೂ ಸಮವಸ್ತ್ರ ವಿತರಿಸಲು ಸೂಚಿಸಲಾಗಿತ್ತು.
ಖಾಕಿಯ ಎರಡು ಪ್ಯಾಂಟ್, ಎರಡು ಶರ್ಟ್ಗೆ 742ರೂ. , ನೀಲಿ ಪ್ಯಾಂಟ್ ಮತ್ತು ಶರ್ಟ್ಗೆ 750, ಬಿಳಿ ಬಣ್ಣದ ಸಮವಸ್ತ್ರಕ್ಕೆ 731ರೂ. ಖಾಕಿ ಸೀರೆ ಹಾಗೂ ಬ್ಲೌಸ್ಗೆ 1707ರೂ.ವನ್ನು ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ನಿಗದಿ ಪಡಿಸಿದೆ. ನಗದು ಪಾವತಿ ಹಣವನ್ನು ಆಯಾ ಸಿಬ್ಬಂದಿಯ ಬ್ಯಾಂಕ್ ಖಾತೆಗೆ ಜಮಾ ಮಾಡಲು ಸೂಚನೆ ನೀಡಲಾಗಿದೆ.
