ಮತ್ತೆ ಮುಷ್ಕರಕ್ಕೆ ಮುಂದಾಗಿದ್ದ ಸಾರಿಗೆ ನೌಕರರಿಗೆ ಶಾಕ್ ಕೊಟ್ಟ ಸರ್ಕಾರ..!

Spread the love

ಬೆಂಗಳೂರು,ಜೂ.26- ರಾಜ್ಯದ ಸಾರಿಗೆ ಸಂಸ್ಥೆಗಳ ನೌಕರರು ಜುಲೈ 5ರ ಬಳಿಕ ಮತ್ತೆ ಮುಷ್ಕರ ನಡೆಸಲು ಮುಂದಾಗಿದ್ದಾರೆಂಬ ಸುಳಿವು ದೊರೆತ ಹಿನ್ನೆಲೆಯಲ್ಲಿ ಸಾರಿಗೆ ಸಿಬ್ಬಂದಿಗೆ ಬ್ರೇಕ್ ಹಾಕಲು ಅಗತ್ಯ ಸೇವೆಗಳ ಮುಷ್ಕರವನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ಜುಲೈ 1ರಿಂದ ಡಿಸೆಂಬರ್ 31ರವರೆಗೆ ಸಾರಿಗೆ ಸಿಬ್ಬಂದಿ ಮುಷ್ಕರವನ್ನು ನಿಷೇಧ ಮಾಡಲಾಗಿದೆ. ಆರ್ಥಿಕತೆಯ ಮೇಲೆ ಕೋವಿಡ್ ಸಾಕಷ್ಟು ಪ್ರಭಾವ ಬೀರಿದೆ.

ಈ ಸಂದರ್ಭದಲ್ಲಿ ಮುಷ್ಕರ ಮಾಡುವುದು ಸೂಕ್ತವಲ್ಲ. ಹೀಗಾಗಿ ಕರ್ನಾಟಕ ಅಗತ್ಯ ಸೇವೆಗಳ ನಿರ್ವಹಣೆ ಕಾಯ್ದೆ 3 ಉಪವಿಭಾಗ 1ರ ಅನ್ವಯ ಅಗತ್ಯ ಸೇವೆಗಳ ಮುಷ್ಕರಕ್ಕೆ ನಿಷೇಧ ಹೇರಲಾಗಿದೆ ಎಂದು ತಿಳಿದುಬಂದಿದೆ. ಲಾಕ್‍ಡೌನ್ ಮುಗಿದ ಮೇಲೆ ಜುಲೈ 5ರ ಬಳಿಕ ಕುಟುಂಬ ಸಮೇತರಾಗಿ ಪ್ರತಿಭಟನೆ ನಡೆಸಲು ಸಾರಿಗೆ ನೌಕರರು ನಿರ್ಧರಿಸಿದ್ದರು. ಆದರೆ ಅದಕ್ಕೂ ಮೊದಲೇ ಸರ್ಕಾರ, ಅಗತ್ಯ ಸೇವೆಗಳ ಮುಷ್ಕರವನ್ನ ನಿಷೇಧಿಸಿ ಮುಷ್ಕರ ನಡೆಸದಂತೆ ಆದೇಶ ಹೊರಡಿಸಿ ತಡೆಯೊಡ್ಡಿದೆ.

ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಸಾರಿಗೆ ನೌಕರರು ರಾಜ್ಯದಲ್ಲಿ ಮತ್ತೊಮ್ಮೆ ಮುಷ್ಕರಕ್ಕಿಳಿಯುವ ಸಾಧ್ಯತೆ ಇರುವುದರಿಂದ ಜುಲೈ 1ರಂದು ನಡೆಯುವ ಸಭೆಯಲ್ಲಿ ದಿನಾಂಕ ನಿಗದಿ ಮಾಡಲಾಗುತ್ತದೆ ಎಂದು ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ತಿಳಿಸಿದ್ದರು. ಕಳೆದ ಮುಷ್ಕರಕ್ಕಿಂತ ಈ ಬಾರಿಯ ಪ್ರತಿಭಟನೆ ತೀವ್ರವಾಗಲಿದೆ. ಸಾರಿಗೆ ನೌಕರರ ಕುಟುಂಬಸ್ಥರು ಈ ಬಾರಿ ಪ್ರತಿಭಟನೆಗೆ ಇಳಿಯಲಿದ್ದಾರೆ. ಸಾರಿಗೆ ನೌಕರರ ಹೆಂಡತಿ ಮಕ್ಕಳೊಂದಿಗೆ ಬೀದಿಗಿಳಿದು ಪ್ರತಿಭಟನೆ ಮಾಡಲಾಗುತ್ತದೆ ಎಂದು ಹೇಳಿದ್ದರು.

2020ರ ಡಿಸೆಂಬರ್‍ನಲ್ಲಿ 15 ದಿನ ಪ್ರತಿಭಟನೆ ನಡೆದಿತ್ತು. ಈ ವೇಳೆ ರಾಜ್ಯ ಸರ್ಕಾರ ಲಿಖಿತ ರೂಪದಲ್ಲಿ ಭರವಸೆ ನೀಡಿತ್ತು. ಆದರೆ ಲಿಖಿತ ರೂಪದಲ್ಲಿ ಕೊಟ್ಟಿದ್ದ ಭರವಸೆಗಳನ್ನು ಈಡೇರಿಸಿಲ್ಲ ಎಂದು ದೂರಿದ್ದರು.

ಕೊಟ್ಟ ಮಾತಿನಂತೆ, ಆರನೇ ವೇತನ ಆಯೋಗ ಜÁರಿ ಮಾಡಲೇಬೇಕು. ಮುಷ್ಕರದಲ್ಲಿ ಭಾಗಿಯಾಗಿದ್ದವರನ್ನು ವರ್ಗಾವಣೆ, ಅಮಾನತು, ಸಸ್ಪೆಂಡ್ ಮಾಡಲಾಗಿದೆ. ಕೂಡಲೆ ಅವರನ್ನು ಕೆಲಸಕ್ಕೆ ತೆಗೆದುಕೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಆಗ್ರಹಿಸದ ಕೋಡಿಹಳ್ಳಿ ಚಂದ್ರಶೇಖರ್, ಬಾಕಿ ಸಂಬಳ ನೀಡಬೇಕು. ಬೇಡಿಕೆ ಈಡೇರಿಸದಿದ್ದರೆ ಮತ್ತೆ ಪ್ರತಿಭಟನೆಗೆ ನಿರ್ಧರಿಸುತ್ತೇವೆ ಎಂದು ಅವರು ಎಚ್ಚರಿಕೆ ನೀಡಿದ್ದರು.

Facebook Comments