ಲಾಹೋರ್, ಜ.9-ಪಂಜಾಬ್ ಪ್ರಾಂತ್ಯದ ಪ್ರವಾಸಿ ತಾಣಕ್ಕೆ ಬಂದವರು ಭಾರೀ ಹಿಮಪಾತದಲ್ಲಿ ಸಿಲುಕಿದ ಪರಿಣಾಮ 9 ಮಕ್ಕಳು ಸೇರಿದಂತೆ ಕನಿಷ್ಠ 21 ಜನರು ಸಾವನ್ನಪ್ಪಿದ್ದಾರೆ.ರಾವಲ್ಪಿಂಡಿ ಜಿಲ್ಲೆಯ ಮುರ್ರೆ ಪ್ರದೇಶದಲ್ಲಿ ಕಳೆದ ರಾತ್ರಿ ಹಿಮಪಾತದಿಂದ ವಾಹನಗಳಲ್ಲೇ ಸಿಕ್ಕಿಹಾಕಿಕೊಂಡು ಹಲವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಕೆಲ ವಾಹನಗಳನ್ನು ಸುರಕ್ಷಿತವಾಗಿ ನಗರಕ್ಕೆ ಪ್ರವೇಶಿಸಿದ ನಂತರ ಎಲ್ಲಾ ಮಾರ್ಗಗಳನ್ನು ನಿರ್ಬಂಸಲಾಗಿದೆ. ಆದರೆ ಕೆಲ ಪ್ರವಾಸಿಗರು ರಸ್ತೆಗಳಲ್ಲಿ ಅಸಹಾಯಕರಾಗಿ ಜೀವ ಉಳಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ.
ಸುಮಾರು 1000 ಕಾರುಗಳು ಗಿರಿಧಾಮದಲ್ಲಿ ಸಿಲುಕಿಕೊಂಡಿವೆ.
ರಕ್ಷಣಾ ಕಾರ್ಯವನ್ನು ತ್ವರಿತಗೊಳಿಸಲು ಮತ್ತು ಸಿಕ್ಕಿಬಿದ್ದ ಪ್ರವಾಸಿಗರಿಗೆ ನೆರವು ನೀಡಲು ಪಂಜಾಬ್ ಮುಖ್ಯಮಂತ್ರಿ ಉಸ್ಮಾನ್ ಬುಜ್ದರ್ ಸೂಚನೆಗಳನ್ನು ನೀಡಿದ್ದಾರೆ .ಅಸ್ಪತ್ರೆಗಳು, ಪೊಲೀಸ್ ಠಾಣೆಗಳು ಮತ್ತು ಆಡಳಿತ ಕಚೇರಿಗಳಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದೆ.
ಪ್ರಧಾನಿ ಇಮ್ರಾನ್ ಖಾನ್ ಆಘಾತ ವ್ಯಕ್ತಪಡಿಸಿದ್ದಾರೆ. ರಸ್ತೆಗಳನ್ನು ತೆರವುಗೊಳಿಸಲು ಮತ್ತು ಇನ್ನೂ ಸಿಲುಕಿರುವ ಜನರನ್ನು ರಕ್ಷಿಸಲು ಸೇನೆಯನ್ನು ಸಜ್ಜುಗೊಳಿಸಲಾಗಿದೆ ಎಂದು ಆಂತರಿಕ ಸಚಿವ ಶೇಖ್ ರಶೀದ್ ತಿಳಿಸಿದ್ದಾರೆ.
