ತ್ರಿವೇಣಿ ಸಂಗಮದಲ್ಲಿ ನಾಳೆಯಿಂದ ಮಹಾಕುಂಭಮೇಳ

Social Share

ಮಂಡ್ಯ, ಅ.12- ಕೆಆರ್ ಪೇಟೆ ತಾಲೂಕಿನ ತ್ರಿವೇಣಿ ಸಂಗಮದಲ್ಲಿ ನಾಳೆಯಿಂದ ರಿಂದ 16ರ ವರೆಗೆ ನಡೆಯಲಿರುವ ಮಹಾಕುಂಭಮೇಳವನ್ನು ಅರ್ಥಪೂರ್ಣವಾಗಿ ಆಚರಿಸಲು ಸಕಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಕ್ರೀಡಾ ಸಚಿವ ಡಾ.ಕೆ.ಸಿ. ನಾರಾಯಣಗೌಡ ತಿಳಿಸಿದರು.

ಕೆಆರ್ ಪೇಟೆಯ ಭೂ ವರಾಹನಾಥಸ್ವಾಮಿ ದೇವಸ್ಥಾನದ ಹತ್ತಿರ ಜಿಲ್ಲಾಡಳಿತ, ಜಿಲ್ಲಾಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಿಂದ ಆಯೋಜಿಸಲಾಗಿದ್ದ ಜಲ ಸಾಹಸ ಕ್ರೀಡಾ ಚಟುವಟಿಕೆಗೆ ಚಾಲನೆ ನೀಡಿ ಮಾತನಾಡಿದರು.

ದಕ್ಷಿಣ ಕರ್ನಾಟಕದಲ್ಲಿ ಮಹಾ ಕುಂಭಮೇಳ ಮಾಡಬೇಕು ಎಂಬ ತೀರ್ಮಾನವನ್ನು ಡಾ. ಶ್ರೀ ನಿರ್ಮಲಾನಂದ ಸ್ವಾಮೀಜಿ, ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಮ್ಮುಖದಲ್ಲಿ ಸಭೆ ನಡೆಸಿ ತೀರ್ಮಾನಿಸಲಾಯಿತು. ಮಹಾ ಕುಂಭಮೇಳವನ್ನು ಯಶಸ್ವಿಯಾಗಿ ಆಚರಿಸಲು ಎಲ್ಲರ ಸಹಕಾರ ದೊರೆಯುತ್ತಿದೆ ಎಂದು ಹೇಳಿದರು.

ವಾರಣಾಸಿಗೆ ಹೋದ ಸಂದರ್ಭದಲ್ಲಿ ದಕ್ಷಿಣ ಕರ್ನಾಟಕದಲ್ಲಿ ಕುಂಭಮೇಳ ಆಚರಿಸುವ ಬಗ್ಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ತಿಳಿಸಿದಾಗ ಅವರು ಭಾಗವಹಿಸುವುದಾಗಿ ತಿಳಿಸಿದ್ದಾರೆ ಎಂದರು.
ಕುಂಭಮೇಳ ಆಯೋಜನೆ ಸಂಬಂಧ ಪ್ರಚಾರ ವಾಹನಕ್ಕೆ ಚಾಲನೆ ನೀಡಲಾಗಿದ್ದು, ದಾನಿಗಳು ಈಗಾಗಲೇ 600 ಕ್ವಿಂಟಾಲ್ ಅಕ್ಕಿ, 25,000 ತೆಂಗಿನಕಾಯಿ ಸೇರಿದಂತೆ ಎಣ್ಣೆ, ತುಪ್ಪ, ತರಕಾರಿ ಇನ್ನಿತರೆ ಆಹಾರ ಪದಾರ್ಥಗಳನ್ನು ಸಹ ನೀಡಿದ್ದಾರೆ ಎಂದರು.

ಅ.14 ರಂದು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ವಿರೇಂದ್ರ ಹೆಗ್ಗಡೆ ಅವರು ಚಾಲನೆ ನೀಡಲಿದ್ದಾರೆ. ಅ.15ರಂದು ಸಾಧು-ಸಂತರ ಸಂಗಮ ನಡೆಯಲಿದೆ. ಅ.16ರಂದು ಕುಂಭ ಸ್ನಾನ, ವೇದಿಕೆ ಕಾರ್ಯಕ್ರಮ ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ ಎಂದರು.

ಶ್ರೀ ಕ್ಷೇತ್ರ ಚಂದ್ರವನಾಶ್ರಮದ ಡಾ. ಶ್ರೀ ತ್ರಿನೇತ್ರ ಮಹಾಂತ ಶಿವಯೋಗಿ ಸ್ವಾಮೀಜಿ ಮಾತನಾಡಿ, ಬಹಳಷ್ಟು ಸ್ಥಳಗಳಲ್ಲಿ ಗುಪ್ತಗಾಮಿನಿ ನದಿಯಿಂದ ತ್ರಿವೇಣಿ ಸಂಗಮ ಇದೆ. ಆದರೆ, ಅಂಬಿಗರಹಳ್ಳಿಯಲ್ಲಿ ಮೂರು ನದಿಗಳು ಸೇರುವುದನ್ನು ನೋಡಬಹುದು. ಸಂಗಮೇಶ್ವರರು ಈ ಸ್ಥಳದಲ್ಲಿ ತಪಸ್ಸು ಮಾಡಿದ್ದಾರೆ. ಸಿದ್ಧಲಿಂಗೇಶ್ವರ ಯತಿಗಳು ಹಾಗೂ ಮಹದೇಶ್ವರರು ಬಂದಿ ಹೋಗಿರುವ ಪವಿತ್ರ ಸ್ಥಳವಿದು ಎಂದರು.

2013ರಲ್ಲಿ ಸಣ್ಣ ಪ್ರಮಾಣದಲ್ಲಿ ಕುಂಭಮೇಳ ನಡೆಸಲಾಗಿತ್ತು. ಈ ಬಾರಿ ವಿಜೃಂಭಣೆಯಿಂದ ಆಚರಿಸಿ, ದೇಶಕ್ಕೆ ತ್ರಿವೇಣಿ ಸಂಗಮ ಪರಿಚಯಿಸಲಾಗುತ್ತಿದೆ ಎಂದರು. ಕುಂಭ ಇಡುವುದಕ್ಕೆ ಕುಂಬೇಶ್ವರ ಅಂತ ಕರೆಯಲಾಗುತ್ತದೆ. ವಿವಿಧ ಕಡೆಯಿಂದ ಸಾಧುಸಂತರರು ಬಹಳಷ್ಟು ಜನ ಬರುತ್ತಿದ್ದಾರೆ. ಈ ಭಾಗದಲ್ಲಿ ಎಲ್ಲಾ ಸಾಧುಸಂತರಿಗೆ ಆಹ್ವಾನ ನೀಡಲಾಗಿದೆ ಎಂದರು.

ಜಿಲ್ಲಾಧಿಕಾರಿ ಎಸ್.ಅಶ್ವತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಉಪವಿಭಾಗಾಧಿಕಾರಿ ಶಿವಾನಂದಮೂರ್ತಿ, ತಹಸೀಲ್ದಾರ್ ರೂಪಾ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Articles You Might Like

Share This Article