ನವದೆಹಲಿ, ಫೆ.10- ಅಖಂಡ ಆಂಧ್ರ ಪ್ರದೇಶ ವಿಭಜನೆ ರೀತಿಯ ಬಗ್ಗೆ ಟೀಕೆ ಮಾಡಿದ ಪ್ರಧಾನಿ ವಿರುದ್ಧ ಟಿಆರ್‌ಎಸ್ ನ ರಾಜ್ಯಸಭೆ ಸದಸ್ಯರು ಹಕ್ಕುಚ್ಯುತಿ ಮಂಡನೆಗೆ ಪಟ್ಟು ಹಿಡಿದು, ಅವಕಾಶ ಸಿಗದಿದ್ದಾಗ ಸಭಾತ್ಯಾಗ ಮಾಡಿದ ಪ್ರಸಂಗ ನಡೆದಿದೆ. ರಾಷ್ಟ್ರಪತಿ ಅವರು ಸಂಸತ್‍ನ ಜಂಟಿ ಅಧಿವೇಶನ ಉದ್ದೇಶಿಸಿ ಮಾಡಿದ ಭಾಷಣದ ಮೇಲೆ ಧನ್ಯವಾದ ಹೇಳುವ ಚರ್ಚೆಗೆ ಮಂಗಳವಾರ ಉತ್ತರ ನೀಡಿದ ಪ್ರಧಾನಿ ಅವರು ಆಂಧ್ರ ಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ವಿಭಜನೆಯನ್ನು ಪ್ರಸ್ತಾಪಿಸಿದರು.
ರಾಜ್ಯಗಳ ಮರುವಿಂಗಡನೆ ವೇಳೆ ಪ್ರಜಾಸತಾತ್ಮಕ ಚರ್ಚೆಗಳು ನಡೆಯಲಿಲ್ಲ, ಧ್ವನಿಯನ್ನು ಅಡಗಿಸಲಾಯಿತು, ಖಾರದ ಪುಡಿ ಎರೆಚಲಾಯಿತು. ಇದು ಪ್ರಜಾಪ್ರಭುತ್ವದ ಮಾದರಿಯೇ, ನಾಚಿಕೆಗೇಡು ಎಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದ್ದರು.
ಪ್ರಧಾನಿ ಅವರ ಹೇಳಿಕೆ ಆಕ್ಷೇಪಾರ್ಹವಾಗಿದ್ದು, ಹಕ್ಕುಚ್ಯುತಿಯಾಗಿದೆ. ಈ ಕುರಿತು ಚರ್ಚೆ ಮಾಡಲು ತಮಗೆ ಅವಕಾಶ ನೀಡಬೇಕು ಎಂದು ತೆಲಗುದೇಶಂನ ರಾಜ್ಯಸಭಾ ಸದಸ್ಯ ಕೆ.ಕೇಶವರಾವ್ ರಾಜ್ಯಸಭೆ ಕಾರ್ಯದರ್ಶಿ ಅವರಿಗೆ ಸೂಚನಾಪತ್ರ ಕಳುಹಿಸಿದ್ದರು. ಆದರೆ ಸಭಾಪತಿ ಪೀಠದಲ್ಲಿದ್ದ ಹರಿವಂಶ ಅವರು, ಸೂಚನಾ ಪತ್ರ ಸಭಾಪತಿ ವೆಂಕಯ್ಯನಾಯ್ಡು ಅವರ ಪರಿಶೀಲನೆಯಲ್ಲಿದೆ. ಶೂನ್ಯವೇಳೆಯಲ್ಲಿ ಚರ್ಚೆಗೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ತಳ್ಳಿ ಹಾಕಿದರು.
ಇದನ್ನು ವಿರೋಧಿ ಟಿಆರ್‍ಎಸ್ ಸಂಸದರು ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು. ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಟಿಆರ್‍ಎಸ್‍ನ ಸಂಸದರಿಗೆ ಬೆಂಬಲ ವ್ಯಕ್ತ ಪಡಿಸಿದರು. ಆಕ್ಷೇಪಾರ್ಹ ಹೇಳಿಕೆ ನೀಡಿರುವ ಪ್ರಧಾನಿ ವಿರುದ್ಧ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸಿದರು. ಅವಕಾಶ ಸಿಗದಿದ್ದಾಗ ಟಿಆರ್‍ಎಸ್‍ನ ಸಂಸದರು ಸಭಾತ್ಯಾಗ ಮಾಡಿದರು.
