ವೈಯಾಲಿಕಾವಲ್‍ ಟಿಟಿಡಿ ದೇವಾಲಯದಲ್ಲಿ3 ದಿನಗಳ ಮಹಾಸಂಪ್ರೋಕ್ಷಣ

ಬೆಂಗಳೂರು,ಮೇ 7- ನಗರದ ವೈಯಾಲಿಕಾವಲ್‍ನಲ್ಲಿರುವ ತಿರುಪತಿ ತಿರುಮಲಂ ದೇವಸ್ಥಾನ ಪ್ರತಿಷ್ಠಾಪನೆಗೊಂಡು 12 ವರ್ಷವಾದ ಹಿನ್ನೆಲೆಯಲ್ಲಿ ಮಹಾ ಸಂಪ್ರೋಕ್ಷಣಾ ಕಾರ್ಯಕ್ರಮವನ್ನು ಇದೇ 9ರಿಂದ 11ರವರೆಗೆ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ.

ಪತ್ರಿಕಾಗೋಷ್ಠಿಯಲ್ಲಿಂದು ಈ ಕುರಿತು ಮಾತನಾಡಿದ ಟಿಟಿಡಿ ಅಧ್ಯಕ್ಷ ಸಂಪತ್ ರವಿ ನಾರಾಯಣನ್ ಅವರು, ಮೇ 9ರಿಂದ 11ರವರೆಗೆ ಮೂರು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 9 ಯಾಗ, 9 ಹೋಮಗಳನ್ನು ನೆರವೇರಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.

ಟಿಟಿಡಿ ದೇವಾಲಯದ ಸ್ಥಾಪನೆಯಾಗಿ 12 ವರ್ಷವಾದ ಹಿನ್ನೆಲೆಯಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಧಾರ್ಮಿಕ ಕಾರ್ಯಕ್ರಮಗಳಿಗೆ ಖುದ್ದು ತಿರುಪತಿ ಅರ್ಚಕರೇ ಆಗಮಿಸಲಿದ್ದಾರೆ. ಅವರ ನೇತೃತ್ವದಲ್ಲಿ ಪ್ರತಿ ದಿನ ನಾಲ್ಕು ಹೋಮ, ನಾಲ್ಕು ಯಾಗಗಳು ನಡೆಯಲಿವೆ. ಇದಕ್ಕಾಗಿ ಹೋಮಕುಂಡ ಪ್ರತಿಷ್ಠಾಪನಾ ಕಾರ್ಯಕ್ರಮ ನೆರವೇರಿಸ ಲಾಗುವುದು ಎಂದು ತಿಳಿಸಿದರು.

ಮಹಾ ಸಂಪ್ರೋಕ್ಷಣಾ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಟಿಟಿಡಿ ದೇವಾಲಯಕ್ಕೆ ಮೂರು ದಿನಗಳ ಕಾಲ ಸಾರ್ವಜನಿಕ ಪ್ರವೇಶವನ್ನು ನಿಷೇಧಿಸಲಾಗಿದೆ. ಹೋಮ, ಯಾಗದ ನಂತರ ದೇವಾಲಯದ ಆವರಣದಲ್ಲಿ ಸುಮಾರು ಎರಡು ಕೋಟಿ ವೆಚ್ಚದಲ್ಲಿ ಪದ್ಮಾವತಿ ಸನ್ನಿ, ಕಲ್ಯಾಣ ಕಟ್ಟೆ, ಪುಷ್ಕರಣಿ, ಉತ್ಸವ ಮಂಟಪಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಇದಕ್ಕೆ ಟಿಟಿಡಿ ಅನುಮತಿ ನೀಡಿದೆ ಎಂದು ಹೇಳಿದರು.

ದೇವರಿಗೆ ಪ್ರತಿದಿನ ಅಲಂಕೃತ ಗೊಳ್ಳುವ ಹೂವುಗಳಿಂದ ಸುಗಂಧ ದ್ರವ್ಯ, ಅಗರಬತ್ತಿ ಮುಂತಾದವು ಗಳನ್ನು ತಯಾರಿಸಲಾಗುತ್ತಿದೆ. ಈಗಾಗಲೇ ಟಿಟಿಡಿ ಆವರಣದಲ್ಲಿ ಅವುಗಳು ದೊರೆಯುತ್ತಿವೆ ಎಂದರು. ಟಿಟಿಡಿ ಕಾರ್ಯದರ್ಶಿ ಭಕ್ತವತ್ಸಲ ರೆಡ್ಡಿ ಮಾತನಾಡಿ, ಆಂಧ್ರದ ತಿರುಪತಿ ದೇವಾಲಯ ಪ್ರವೇಶ ಸಂದರ್ಭದಲ್ಲಿ ಪುನೀತ್ ಫೋಟೋವನ್ನು ಕಾರಿನಿಂದ ತೆಗೆದಿರುವುದು ಉದ್ದೇಶಪೂರ್ವಕವಲ್ಲ. ಅದು ಅಲ್ಲಿನ ವಾಡಿಕೆಯಾಗಿದೆ.

ದೇವಾಲಯಕ್ಕೆ ತೆರಳುವ ವಾಹನಗಳ ಮೇಲೆ ಯಾವುದೇ ಭಾವಚಿತ್ರಗಳು ಇರಬಾರದು ಎಂಬ ನಿಯಮಗಳಿವೆ. ಆಂಧ್ರ ಮುಖ್ಯಮಂತ್ರಿ ಜಗಮೋಹನ್ ರೆಡ್ಡಿ ಆಗಲಿ, ಪ್ರತಿಪಕ್ಷದ ನಾಯಕರಾಗಲಿ, ಯಾವುದೇ ಗಣ್ಯವ್ಯಕ್ತಿಯಾಗಲಿ ಯಾರದೇ ಭಾವಚಿತ್ರಗಳು ವಾಹನಗಳ ಮೇಲೆ ಇರುವಂತಿಲ್ಲ. ಯಾವುದೇ ಸ್ಟಿಕರ್‍ಗಳಿಗೆ ಅವಕಾಶವಿಲ್ಲ.

ಈ ಹಿನ್ನೆಲೆಯಲ್ಲಿ ಕಾರಿನ ಮೇಲಿದ್ದ ಪುನೀತ್‍ರಾಜ್‍ಕುಮಾರ್ ಅವರ ಸ್ಟಿಕ್ಕರ್‍ನ್ನು ತೆಗೆಯಲಾಗಿದೆ ಹೊರತು ಯಾವುದೇ ದುರದ್ದೇಶ ಇಲ್ಲ. ಆಂಧ್ರ ಮತ್ತು ಕನ್ನಡಿಗರ ಭಾಷಾ ಸಾಮರಸ್ಯದ ಸಂಘರ್ಷವಲ್ಲ. ತೆಲುಗು, ಕನ್ನಡಿಗರ ನಡುವಿನ ಸಾಮರಸ್ಯಕ್ಕೆ ಯಾವುದೇ ಧಕ್ಕೆ ಇಲ್ಲ. ಅಲ್ಲಿನ ನಿಯಮಾವಳಿಗಳ ಅನ್ವಯ ಸಿಬ್ಬಂದಿಗಳು ನಡೆದುಕೊಂಡಿದ್ದಾರೆ ಎಂದು ಭಕ್ತ ವತ್ಸಲ ರೆಡ್ಡಿ ಅವರು ಸ್ಪಷ್ಟನೆ ನೀಡಿದರು.