ಬೆಂಗಳೂರು, ನ.2- ದೀಪಾವಳಿ ಹಬ್ಬದ ನಂತರ ಕಾರ್ತಿಕ ಮಾಸದಲ್ಲಿ ಆಚರಿಸುವ ತುಳಸಿ ಹಬ್ಬವನ್ನು ಇಂದು ನಾಡಿನಾದ್ಯಂತ ಆಚರಿಸಲಾಯಿತು.ಪ್ರತಿಯೊಂದು ಮನೆ ಮುಂದೆ ತುಳಸಿ ಗಿಡ ಇದ್ದೇ ಇರುತ್ತದೆ. ಪ್ರತಿಯೊಬ್ಬರೂ ದಿನನಿತ್ಯ ಪೂಜೆ ಸಲ್ಲಿಸುತ್ತಾರೆ. ಆದರೆ, ಇಂದು ತುಳಸಿಕಟ್ಟೆಗೆ ಅಲಂಕಾರ ಮಾಡಿ ಪೂಜೆ ಸಲ್ಲಿಸುವುದು ವಿಶೇಷ. ತುಳಸಿ ಗಿಡವನ್ನು ಲಕ್ಷ್ಮೀದೇವಿ ಅವತಾರವೆಂದು ಪರಿಗಣಿಸಲಾಗಿದೆ.
ಮನೆಯಲ್ಲಿ ಐಶ್ವರ್ಯ, ಸಂತೋಷ, ಶಾಂತಿ ನೆಲೆಸಲಿ ಎಂದು ತುಳಸಿ ಗಿಡಗಳನ್ನು ಬೆಳೆಸಲಾಗುತ್ತದೆ. ಸಾಮಾನ್ಯವಾಗಿ ತುಳಸಿ ಹಬ್ಬದ ಸಂದರ್ಭದಲ್ಲಿ ಬೆಟ್ಟದ ನೆಲ್ಲಿಕಾಯಿ ಗಿಡದ ಕೊಂಬೆಯನ್ನು ತುಳಸಿ ಗಿಡದ ಪಕ್ಕದಲ್ಲಿಟ್ಟು ಪೂಜೆ ಮಾಡುತ್ತಾರೆ.
ನೆಲ್ಲಿಕಾಯಿ ಕೊಂಬೆಯಲ್ಲಿ ವಿಷ್ಣುವಿನ ಅಂಶವಿದೆ ಎಂಬ ನಂಬಿಕೆಯಿದೆ. ಹೀಗಾಗಿ ತುಳಸಿ ಗಿಡದ ಪಕ್ಕದಲ್ಲಿ ಬೆಟ್ಟದ ನೆಲ್ಲಿಕಾಯಿ ಕೊಂಬೆಯನ್ನಿಟ್ಟು ಪೂಜಿಸಲಾಗುತ್ತದೆ. ಬೆಂಗಳೂರಿನಲ್ಲಿ ಎಲ್ಲಿ ನೋಡಿದರೂ ತುಳಸಿ ಗಿಡ, ಬೆಟ್ಟದ ನೆಲ್ಲಿಕಾಯಿ ಕೊಂಬೆಗಳ ಮಾರಾಟ ಜೋರಾಗಿತ್ತು.
