ವ್ಯಕ್ತಿ ಕೊಲೆ ಮಾಡಿದ್ದ ಐವರ ಸೆರೆ

ತುಮಕೂರು,ನ.18- ಅಡಿಕೆ ಗರಿಯನ್ನು ಗದ್ದೆ ಬದುವಿನಲ್ಲಿ ಹಾಕಿದ ವಿಚಾರವಾಗಿ ನಡೆದ ಜಗಳದ ವೇಳೆ ವ್ಯಕ್ತಿಯನ್ನು ಕೊಲೆ ಮಾಡಿದ್ದ ಐದು ಮಂದಿಯನ್ನು ಗುಬ್ಬಿ ಠಾಣೆ ಪೊಲೀಸರು ಬಂಧಿಸಿದ್ದಾರೆ.  ಗುಬ್ಬಿ ತಾಲ್ಲೂಕು ಅಡಗೂರು ಕಸಬಾ ಹೋಬಳಿಯ ಚಿರಾಯ್ತಿ ನಿವಾಸಿಗಳಾದ ಶಂಕರಪ್ಪ(65), ಈರಣ್ಣ (72), ಕುಮಾರಸ್ವಾಮಿ(33), ರುದ್ರೇಶ್(23) ಮತ್ತು ಭರತೇಶ್(32) ಬಂಧಿತ ಆರೋಪಿಗಳು.

ನವೆಂಬರ್ 6ರಂದು ಮಧ್ಯಾಹ್ನ 2.30ರ ಸುಮಾರಿನಲ್ಲಿ ಸ್ಥಳೀಯ ನಿವಾಸಿ ಅಂಬಿಕಾ ಅವರು ತಮ್ಮ ತಂದೆಗೆ ಸೇರಿದ ಗದ್ದೆಯ ಬದುವಿನಲ್ಲಿ ಅಡಿಕೆ ಗರಿಯನ್ನು ಹಾಕಿದಾಗ ಈ ವಿಚಾರವಾಗಿ ಅಡಗೂರು ಗ್ರಾಮದ ನಂಜುಂಡಯ್ಯ ಎಂಬುವರ ಮಕ್ಕಳು ಹಾಗೂ ಸಂಬಂಧಿಕರು ಜಗಳವಾಡಿ ಸಿದ್ದಲಿಂಗಪ್ಪ, ವಿಜಯಕುಮಾರ್, ಸುಧಾಕರ್ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ನ.7ರಂದು ಬೆಳಗ್ಗೆ 7.30ರ ಸಂದರ್ಭದಲ್ಲಿ ಸಿದ್ದಲಿಂಗಪ್ಪ ಅವರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.

ಈ ಸಂಬಂಧ ಗುಬ್ಬಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿ ಐದು ಮಂದಿಯನ್ನು ಬಂಧಿಸಿದ್ದಾರೆ. ಗುಬ್ಬಿ ವೃತ್ತ ನಿರೀಕ್ಷಕ ರಾಮಕೃಷ್ಣಯ್ಯ, ಪಿಎಸ್‍ಐ ಜ್ಞಾನಮೂರ್ತಿ ಮತ್ತು ಸಿಬ್ಬಂದಿಗಳನ್ನೊಳಗೊಂಡ ತಂಡ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.