ರಾಜ್ಯದ ಬಹುಪಾಲು ಜಿಲ್ಲಾಗಳು ಹಾಗೂ ದೇಶದ ನಾನಾ ಭಾಗಗಳಿಗೆ ಪ್ರಮುಖ ಸಂಪರ್ಕ ಕೊಂಡಿಯಾಗಿರುವ ತುಮಕೂರು ರಸ್ತೆಯ ಮೇಲ್ಸೇತುವೆ ಬಂದ್‍ನಿಂದಾಗಿ ವಾಹನ ಸವಾರರು ಕಳೆದೆರಡು ತಿಂಗಳಿನಿಂದ ಎದುರಿಸುತ್ತಿರುವ ನರಕ ಯಾತನೆಯನ್ನು ದಾಸರಹಳ್ಳಿ ಶಾಸಕ ಆರ್.ಮಂಜುನಾಥ್ ಸದನದಲ್ಲಿ ಎಳೆಎಳೆಯಾಗಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಟ್ಟಿದ್ದರು.
ಇದರ ಬೆನ್ನಲ್ಲೇ ಗೊರಗುಂಟೆಪಾಳ್ಯದಿಂದ ಪೀಣ್ಯದ ನಾಗಸಂದ್ರದವರೆಗೆ ನಿರ್ಮಾಣವಾಗಿರುವ ಮೇಲ್ಸೇತುವೆಯಲ್ಲಿ ಲಘು ವಾಹನಗಳ ಸಂಚಾರಕ್ಕೆ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಮ್ಮತಿ ನೀಡಿದೆ. ಈ ಸಂದರ್ಭದಲ್ಲಿ ಈ ಸಂಜೆ ಪತ್ರಿಕೆ ದಾಸರಹಳ್ಳಿ ಶಾಸಕ ಆರ್.ಮಂಜುನಾಥ್ ಅವರ ವಿಶೇಷ ಸಂದರ್ಶನ ನಡೆಸಿದೆ.
ತುಮಕೂರು ರಸ್ತೆಯ ಮೇಲ್ಸೇತುವೆ ಬಂದ್ ವಿಚಾರವಾಗಿ ಸದನದಲ್ಲಿ ತಾವು ಪ್ರಸ್ತಾಪಿಸಿದ ಬೆನ್ನಲ್ಲೇ ಲಘು ವಾಹನಗಳ ಸಂಚಾರಕ್ಕೆ ಅನುಮತಿ ಸಿಕ್ಕಿದೆ ಈ ಬಗ್ಗೆ ಏನು ಹೇಳುವಿರಿ? ಪ್ರತಿನಿತ್ಯ ಲಕ್ಷಾಂತರ ವಾಹನಗಳು ಸಂಚರಿಸುವ ತುಮಕೂರು ರಸ್ತೆಯ ಮೇಲ್ಸೇತುವೆ ಮುಚ್ಚಿದ್ದರಿಂದ ವಾಹನ ಸವಾರರು ರೋಸಿ ಹೋಗಿದ್ದರು. ಮೇಲ್ಸೇತುವೆಯಲ್ಲಿ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಹಲವು ಬಾರಿ ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ.
ಹಾಗಾಗಿ ಗಂಭೀರ ವಿಷಯವಾಗಿದ್ದರಿಂದ ಅದಾಗಲೇ ಪ್ರಸ್ತಾಪಿಸಲಾಯಿತು. ಮುಖ್ಯಮಂತ್ರಿಗಳು ಒಂದೆರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದರು. ಅದರಂತೆ ಕಾರು, ದ್ವಿಚಕ್ರ ವಾಹನ ಸೇರಿ ಲಘು ವಾಹನಗಳ ಸಂಚಾರಕ್ಕೆ ಸಮ್ಮತಿ ನೀಡಿರುವುದು ಸ್ವಲ್ಪ ಮಟ್ಟಿಗಾದರೂ ಸಮಾಧಾನ ತಂದಿದೆ.
ಮೇಲ್ಸೇತುವೆ ನಿರ್ಮಾಣ ಕಳಪೆ ಕಾಮಗಾರಿ ಯಿಂದ ಕೂಡಿದೆ ಎಂದು ಸ್ವತಃ ಮುಖ್ಯಮಂತ್ರಿಗಳೇ ಸದನದಲ್ಲಿ ತಿಳಿಸಿದ್ದಾರೆ ಈ ಬಗ್ಗೆ ನಿಮ್ಮ ಅನಿಸಿಕೆ ಏನು?
ನೂರಾರು ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಮೇಲ್ಸೇತುವೆ ಕನಿಷ್ಠ 50 ರಿಂದ 60 ವರ್ಷ ಬಾಳಿಕೆ ಬರಬೇಕಾದ ಮೇಲ್ಸೇತುವೆಯ ಬಂಡವಾಳ ಹತ್ತನ್ನೆರಡು ವರ್ಷಗಳಲ್ಲೇ ಬಯಲಾಗಿದೆ. ನಿರ್ಮಾಣದ ಹೊಣೆ ಹೊತ್ತಿರುವ ನವಯುಗ ಕನ್ಸ್‍ಟ್ರಕ್ಷನ್ ಕಂಪೆನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ನಿರ್ಮಾಣದ ವೇಳೆ ಫ್ಲೈ ಓವರ್ ಗುಣಮಟ್ಟ ಪರೀಕ್ಷಿಸಿದ್ದ ಅಧಿಕಾರಿಗಳನ್ನು ಕೂಡಲೇ ಜೈಲಿಗಟ್ಟಬೇಕು.
ಸುಮಾರು ನಾಲ್ಕೂವರೆ ಕಿಲೋ ಮೀಟರ್ ಉದ್ದದ ಮೇಲ್ಸೇತುವೆಯ 2 ಸ್ತಂಭಗಳ ನಡುವಿನ ಕಬ್ಬಿಣದ ತಂತಿಗಳಲ್ಲಿ ಮಾತ್ರ ದೋಷ ಕಂಡುಬಂದಿರುವುದಾಗಿ ಅಕಾರಿಗಳು ತಿಳಿಸಿದ್ದಾದ್ದಾರೆ ಈ ವಿಚಾರವಾಗಿ ಏನು ಹೇಳುವಿರಿ?
ಇದು ಸತ್ಯಕ್ಕೆ ದೂರವಾದ ಮಾತು. ನನಗಿರುವ ಮಾಹಿತಿ ಪ್ರಕಾರ, ಕೇವಲ 2 ಸ್ತಂಭಗಳಲ್ಲಿ ಮಾತ್ರ ತಾಂತ್ರಿಕ ದೋಷವಿಲ್ಲ. ಹತ್ತನ್ನೆರಡು ಪಿಲ್ಲರ್‍ಗಳಲ್ಲಿ ಸಮಸ್ಯೆಯನ್ನು ತಜ್ಞರು ಗುರುತಿಸಿದ್ದಾರೆ. ಹಾಗಾಗಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ವಾಸ್ತವಾಂಶವನ್ನು ತೆರೆದಿಡಬೇಕು. ಜನರ ಜೀವದ ಜತೆ ಚೆಲ್ಲಾಟವಾಡಬಾರದು. ಇಡೀ ಮೇಲ್ಸೇತುವೆಯನ್ನು ಸಮಗ್ರವಾಗಿ ಪರಿಶೀಲಿಸಬೇಕು ಆಗ ಮಾತ್ರ ಮುಂದಾಗುವ ಜೀವಹಾನಿ ತಪ್ಪಿಸಬಹುದು.
ಫ್ಲೈ ಓವರ್ ಬಂದ್ ವೇಳೆಯಲ್ಲಿಯೂ ಗುತ್ತಿಗೆ ಕಂಪೆನಿ ಟೋಲ್ ಸುಲಿಗೆ ಮಾಡುತ್ತಿರುವುದು ಎಷ್ಟು ಸರಿ?
ಸೇವೆಯನ್ನೇ ಒದಗಿಸದೆ ಟೋಲ್ ಶುಲ್ಕ ಸಂಗ್ರಹಿಸುವುದು ಹಗಲು ದರೋಡೆಯೇ ಸರಿ. ಇದು ಅಕ್ಷಮ್ಯ. ಪೂರ್ಣ ಪ್ರಮಾಣದಲ್ಲಿ ಮೇಲ್ಸೇತುವೆ ಸಾರ್ವಜನಿಕ ಬಳಕೆಗೆ ಮುಕ್ತವಾಗುವವರೆಗೆ ಟೋಲ್ ತೆಗೆದುಕೊಳ್ಳದಂತೆ ಗುತ್ತಿಗೆ ಕಂಪೆನಿಗೆ ಸರ್ಕಾರ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ದೇಶನ ನೀಡಬೇಕು.
ಮೇಲ್ಸೇತುವೆ ಭಾರಿ ವಾಹನಗಳಿಗೆ ಸುರಕ್ಷಿತವಲ್ಲ. ಖಾಯಂ ಆಗಿ ಬಂದ್ ಆಗಬಹುದು ಎಂದು ಸಿಎಂ ತಿಳಿಸಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯ?
ತಜ್ಞರ ಅಭಿಪ್ರಾಯ ಆಧರಿಸಿ ಸಿಎಂ ಈ ರೀತಿ ಹೇಳಿರಬಹುದು. ಯಾರ ಕಾಲದಲ್ಲೇ ಮೇಲ್ಸೇತುವೆ ನಿರ್ಮಾಣವಾಗಿರಲಿ. ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಲಿ. ಸರ್ಕಾರದ ಮುಖ್ಯಸ್ಥರು ಜವಾಬ್ದಾರಿಯಿಂದ ಹಿಂದೆ ಸರಿಯಬಾರದು. ಜತೆಗೆ ತುಮಕೂರು ರಸ್ತೆಯಲ್ಲಿ ಭಾರೀ ವಾಹನಗಳಿಗೆ ಶಾಶ್ವತವಾಗಿ ಮೇಲ್ಸೇತುವೆ ಮುಚ್ಚಿದರೆ ಏಷ್ಯಾದ ಎರಡನೆ ಅತಿದೊಡ್ಡದಾದ ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಭಾರೀ ಹೊಡೆತ ಬೀಳಬಹುದು.
ಸಕಾಲದಲ್ಲಿ ಕಚ್ಚಾ ಸಾಮಗ್ರಿ ಪೂರೈಕೆ ಆಗದೆ ಸಾವಿರಾರು ಕೈಗಾರಿಕೆಗಳು ತೊಂದರೆಗೀಡಾಗಬಹುದು, ಕಾರ್ಮಿಕರು ಅತಂತ್ರರಾಗಬಹುದು. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ತುಮಕೂರು ರಸ್ತೆಗೆ ಪರ್ಯಾಯ ಮಾರ್ಗಗಳನ್ನು ನಿರ್ಮಿಸಬೇಕು ಎಂದು ಶಾಸಕ ಮಂಜುನಾಥ್ ತಮ್ಮ ಅನಿಸಿಕೆಯನ್ನು ಹಂಚಿಕೊಂಡರು.
?ಶ್ರೀನಿವಾಸ್ ಅಣ್ಣಯ್ಯಪ್ಪಗೌಡ
