ತುಮಕೂರು.ಆ.22- ಸನಾತನ ಹಿಂದೂ ಧರ್ಮವೇ ಲೇಸು. ಇಸ್ಲಾಂ ಧರ್ಮಕ್ಕೆ ಮತಾಂತಗೊಳ್ಳಬಾರದು ಎಂದು ನಿರ್ಧರಿಸಿದೆ. ಎಲ್ಲವೂ ಅಥರ್ವಾಗಿದೆ ಮನಸ್ಸಿನಲ್ಲಿ ಮೂಡಿದ್ದ ಅಂಧಕಾರ ದೂರವಾಗಿದೆ… ಇದು ಮೊನ್ನೆ ಹಿಂದೂ ಧರ್ಮಕ್ಕೆ ಮರಳಿ ದೀಕ್ಷೆ ಪಡೆದ ತುಮಕೂರು ತಾಲ್ಲೂಕು ಹಿರೇಹಳ್ಳಿ ಓಂಕಾರೇಶ್ವರ ದೇವಸ್ಥಾನದ ಅರ್ಚಕರಾಗಿದ್ದ ಎಚ್.ಆರ್ ಚಂದ್ರಶೇಖರಯ್ಯ ಮಾತುಗಳು.
ಎಚ್.ಆರ್.ಚಂದ್ರಶೇಖರಯ್ಯ ಅವರು ಮುಬಾರಕ್ ಪಾಷಾ ಎಂದು ಹೆಸರು ಬದಲಿಸಿಕೊಂಡು ಈ ಪ್ರಕಟಣೆ ನೀಡಿದ್ದರು. ಆದರೆ ತನ್ನ ನಶ್ವರ ದೇಹಕ್ಕಾಗಿ ಸನಾತನ ಹಿಂದೂ ಧರ್ಮ ತ್ಯಜಿಸಿದರೆ ಮುಕ್ತಿ ಇಲ್ಲ ಎಂಬ ಸತ್ಯ ಅರಿತು ಹಿತೈಶಿಗಳ ಸಲಹೆ ಪಾಲಿಸಿ ಸರಿ ದಾರಿಗೆ ಮರಳಿದ್ದಾರೆ.
ಕೌಟುಂಬಿಕ ಆಸ್ತಿ ಕಲಹದಿಂದ ನಾನು ಬೇಸತ್ತಿದ್ದೆ. ನನ್ನ ಸಂಬಂಧಿಕರು ಅಂತರ ಕಾಯ್ದುಕೊಂಡರು. ಇಳಿ ವಯಸ್ಸಿನಲ್ಲಿರುವ ನಾನು ಸಾವನ್ನಪ್ಪಿದ ನಂತರ ಗೌರವಯುತವಾಗಿ ಶವಸಂಸ್ಕಾರ ಮಾಡುವುದಿಲ್ಲ ಎಂಬ ಭಾವನೆಯಿಂದ ಮುಸ್ಲಿಂ ಧರ್ಮಕ್ಕೆ ಕಾನೂನು ಪ್ರಕಾರ ಮತಾಂತರಗೊಳ್ಳಲು ಯತ್ನಿಸಿದೆ ಎಂದು ತಿಳಿಸಿದ್ದಾರೆ.
ಮೊದಲು ನಾನು ಮುಸ್ಲಿಂ ಧರ್ಮದ ಬಗ್ಗೆ ಏನನ್ನು ತಿಳಿದಿರಲಿಲ್ಲ. ನಮ್ಮ ಮನೆ ಕೂಡ ಮುಸಲ್ಮಾನರು ವಾಸಿಸುವ ಪ್ರದೇಶದಲ್ಲೇ ಇತ್ತು. ಅಲ್ಲಿ ಹಲವರು ಸ್ನೇಹಿತರು ಇದ್ದರು. ಏನೋ ನನ್ನ ಏನಾಯಿತೋ ಗೊತ್ತಿಲ್ಲ. ಹಿಂದೂ ಧರ್ಮವನ್ನೇ ತ್ಯಜಿಸುವ ತಪ್ಪು ನಿರ್ಧಾರ ಕೈಗೊಂಡೆ ಎಂದು ಹೇಳುತ್ತಾರೆ.
ನಾನು ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದೇನೆ. ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಾಗ ಮುಂಜಿ ಮಾಡುತ್ತಾರೆ ಎಂದು ಕೇಳುತ್ತಿದ್ದಂತೆ ನನಗೆ ಭಯವಾಯಿತು. ಏನ್ನೇನೋ ಆಗುತ್ತೋ ಎಂಬ ಕಾರಣದಿಂದ ಕೊನೆಗೂ ಸತ್ಯದ ಬೆಳಕು ನನ್ನಲ್ಲಿ ಮತ್ತೆ ಮೂಡಿ ಹಿಂದೂ ಧರ್ಮಕ್ಕೆ ವಾಪಸ್ಸಾಗಿದ್ದೇನೆ ಎಂದು ಚಂದ್ರಶೇಖರಯ್ಯ ಬಾವುಕರಾಗಿ ಘಟನೆಗಳನ್ನು ವಿವರಿಸಿದರು.
ಪೂಜ್ಯ ಸ್ವಾಮೀಜಿಯವರ ಸಾನಿಧ್ಯದಲ್ಲಿ ದೀಕ್ಷೆ ಪಡೆದು ಮನಸ್ಸು ನಿರ್ಮಲವಾಗಿದೆ. ಯಾವುದೇ ಕಾರಣಕ್ಕೂ ಇನ್ನು ಮುಂದೆ ಇಂತಹ ತಪ್ಪು ಹೆಜ್ಜೆ ಇಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನನ್ನ ಕುಟುಂಬದ ನೋವುಗಳು ನಮಗೆ ಇರಲಿ. ಆದರೆ ಇದಕ್ಕಾಗಿ ಧರ್ಮವನ್ನು ಬದಲಿಸುವ ನಿರ್ಧಾರದಿಂದ ಅದು ಹೋಗುತ್ತದೆಯೇ. ಹುಟ್ಟಿನಿಂದ ನನ್ನ ಆಚಾರ-ವಿಚಾರಗಳು ಹಿಂದೂ ಧರ್ಮದಲ್ಲೇ ಬೆರೆತು ಹೋಗಿದೆ. ಮನಸ್ಸಿಗೆ ನೋವಾಗಿ ನಡೆದಂತಹ ಈ ಆಚಾತುರ್ಯಕ್ಕೆ ಬೇಸರವಾಗುತ್ತಿದೆ ಎಂದು ಹೇಳಿದ್ದಾರೆ.
ರಾಜಕೀಯ ತಿರುವು: ಇವರ ಪರಿಚಿತರಾದ ರಾಜಕೀಯವಾಗಿ ಜೆಡಿಎಸ್‍ನಲ್ಲಿ ಗುರುತಿಸಿಕೊಂಡಿದ್ದ ತನ್ವೀರ್, ರಾಜಶೇಖರಯ್ಯ ಅವರು ಮತಾಂತರಗೊಳ್ಳಲು ಪ್ರೇರೇಪಿಸಿದ್ದರು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಆದರೆ ಚಂದ್ರಶೇಖರಯ್ಯ ಅವರಿಗೆ ಅನೇಕ ಮುಸ್ಲಿಂ ಸಮುದಾಯದವರು ಪರಿಚಯ ವಿದ್ದಾರೆ. ಉತ್ತಮ ಬಾಂಧವ್ಯ ಮೊದಲಿನಿಂದಲೂ ಇದೆ.
ಮುಸ್ಲೀಮರು ಹೆಚ್ಚಾಗಿ ವಾಸಿಸುವ ಪ್ರದೇಶದಲ್ಲಿ ನನ್ನ ಮನೆ ಇರುವ ಕಾರಣ ಸ್ವಾಭಾವಿಕವಾಗಿ ಒಡನಾಟವೂ ಕೂಡ ಹೆಚ್ಚಾಗಿತ್ತು. ಇದರ ಲಾಭ ಪಡೆದು ಅವರನ್ನು ಮತಾಂತರಗೊಳಿಸಲು ಪ್ರಯತ್ನಗಳು ನಡೆದಿತ್ತು ಎಂದು ಹೇಳಲಾಗುತ್ತಿದೆ.
ಸ್ಪಷ್ಟನೆ: ಆದರೆ ತನ್ವೀರ್ ಅವರು, ಇದನ್ನು ನಿರಾಕರಿಸಿದ್ದಾರೆ. ನನಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ. ಒಮ್ಮೆ ನಮ್ಮ ಮಸೀದಿಯಿಂದ ಅವರನ್ನು ಸನ್ಮಾನ ಮಾಡಿದ್ದರು. ಆ ಪೋಟೋವನ್ನು ಇಟ್ಟುಕೊಂಡು ನನ್ನ ಮೇಲೆ ಆರೋಪ ಮಾಡುತ್ತಿರುವುದು ಸರಿಯಲ್ಲ. ಹೀಗೆಯೇ ನನ್ನ ಪಕ್ಷದವರ ಮೇಲೆಯೂ ಕೆಲವರು ಕೆಂಡ ಕಾರುತ್ತಿದ್ದಾರೆ. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ರಾಜಕೀಯ ಹಗೆತನಕ್ಕಾಗಿ ನನ್ನ ಮೇಲೆ ಈ ಆರೋಪ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಅರ್ಚಕ ಚಂದ್ರಶೇಖಯ್ಯ ಅವರು ಇಸ್ಲಾಂ ಧರ್ಮಕ್ಕೆ ಮತಾಂತರ ಗೊಳ್ಳುವ ಬಗ್ಗೆ ನನಗೆ ತಿಳಿಯುತ್ತಿದ್ದಂತೆ ಬೇಸರವಾಯಿತು. ಏನಾಗಿದೆ ಎಂದು ತಿಳಿದುಕೊಳ್ಳಲು ಅವರನ್ನು ಸಂಪರ್ಕಿಸಿದೆ. ಅವರ ಭಾವನೆಗಳನ್ನು ಅರ್ಥಮಾಡಿಕೊಂಡು ಹಿಂದೂ ಧರ್ಮದ ಪಾವಿತ್ರ್ಯತೆ ಹಾಗೂ ಸಂಸ್ಕಾರದ ಬಗ್ಗೆ ಅವರಿಗೆ ಮನವರಿಕೆ ಮಾಡಿದಾಗ ಅವರು ಕೂಡ ಅದಕ್ಕೆ ತಲೆಬಾಗಿದರು. ನನ್ನಿಂದ ಆಗುತ್ತಿರುವ ಅಪಚಾರವನ್ನು ಅರಿತು ಹಿಂದೂ ಧರ್ಮವೇ ಲೇಸು ಎಂದು ಹೇಳಿ ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ತಿಳಿಸಿದ್ದಾರೆ.
#ರಘು ಎ.ಎನ್.