ಬೆಂಗಳೂರು,ಫೆ.4- ರಾಷ್ಟ್ರೀಯ ಹೆದ್ದಾರಿ 4ರ ತುಮಕೂರು ರಸ್ತೆಯಲ್ಲಿ ನಡೆಯುತ್ತಿರುವ ಮೇಲ್ಸೇತುವೆ ದುರಸ್ತಿ ಕಾಮಗಾರಿ ಯಾವಾಗ ಮುಗಿಯುತ್ತದೆ ಎಂಬುದು ಯಕ್ಷಪಶ್ನೆಯಾಗಿ ಉಳಿದಿದೆ. ತಾಂತ್ರಿಕ ದೋಷ ಕಾಣಿಸಿಕೊಂಡಿದ್ದ ಹಿನ್ನೆಲೆಯಲ್ಲಿ ಕಳೆದ ಡಿ.25ರಂದು ಏಕಾಏಕಿ ಮೇಲ್ಸೇತುವೆ ಮೇಲೆ ವಾಹನ ಸಂಚಾರವನ್ನು ಬಂದ್ ಮಾಡಲಾಗಿತ್ತು. ಜ.14ರೊಳಗೆ ದುರಸ್ತಿ ಕಾರ್ಯವನ್ನು ಪೂರ್ಣಗೊಳಿಸುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ತಿಳಿಸಿತ್ತು. ಆದರೆ ಅದು ಇನ್ನು ಮುಗಿಯುವುದು ಯಾವಾಗ ಎಂಬುದನ್ನು ತಿಳಿಸಲು ಅಧಿಕಾರಿಗಳು ವಿಫಲರಾಗಿದ್ದಾರೆ.
ಪಿಲ್ಲರ್ ಸಂಖ್ಯೆ 102, 103 ಸೇರಿದಂತೆ ವಿವಿಧ ಪಿಲ್ಲರ್ಗಳ ಗುಣಮಟ್ಟದ ಬಗ್ಗೆ ಈಗಾಗಲೇ ದೆಹಲಿಯಿಂದ ಬಂದಿದ್ದ ಇಂಜಿನಿಯರ್ಗಳು ತಪಾಸಣೆ ಮಾಡಿ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ. ಪಿಲ್ಲರ್ಗಳಿಗೆ ಒತ್ತಡ ತಡೆಯಲು ಅಳವಡಿಸಲಾಗಿರುವ ಸಾಧನ ಹಾಳಾಗಿರುವುದರಿಂದ ಅದನ್ನು ದುರಸ್ತಿ ಮಾಡುವುದೇ ಒಂದು ಸವಾಲಿನ ಕೆಲಸವಾಗಿದೆ ಎಂದು ಹೇಳಲಾಗುತ್ತಿದೆ.
ಇದು ಗಂಭೀರ ಸಮಸ್ಯೆ ಎಂಬುದರ ಬಗ್ಗೆ ತಿಳಿಸಲೂ ಕೂಡ ಹೆದ್ದಾರಿ ಪ್ರಾಧಿಕಾರದವರು ಯಾವುದೇ ಮಾಹಿತಿಯನ್ನು ಮಾಧ್ಯಮಗಳಿಗಾಗಲಿ, ಸ್ಥಳೀಯರಿಗಾಗಲಿ ತಿಳಿಸುತ್ತಿಲ್ಲ. ತಮ್ಮ ಪಾಡಿಗೆ ತಾವು ಕೆಲವೇ ಕಾರ್ಮಿಕರೊಂದಿಗೆ ದುರಸ್ತಿ ಕಾರ್ಯ ನಡೆಸುತ್ತಿದ್ದಾರೆ.
ಈ ಬಗ್ಗೆ ಈ ಸಂಜೆ ಪತ್ರಿಕೆ ಮಾಹಿತಿಗಾಗಿ ತೆರಳಿದಾಗ ಯಾವುದೇ ಪ್ರತಿಕ್ರಿಯೆಗಳನ್ನು ನೀಡಲಿಲ್ಲ. ಸ್ಥಳೀಯರು ಹೇಳುವ ಪ್ರಕಾರ ಇನ್ನು 15 ದಿನ ಕಾಮಗಾರಿ ನಡೆಯಲಿದ್ದು, ನಂತರ ಮೇಲ್ಸೇತುವೆ ಮೇಲೆ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡುವ ಕುರಿತಂತೆ ಚರ್ಚಿಸಿ ಪ್ರಾಯೋಗಿಕವಾಗಿ ವಾಹನಗಳ ಸಂಚಾರಕ್ಕೆ ಅವಕಾಶ ಕೊಟ್ಟು ಮುಂದಿನ ತೀರ್ಮಾನ ಕೈಗೊಳ್ಳಲಾಗುವುದು ಎಂದು ಹೇಳಲಾಗುತ್ತಿದೆ.
ಹೈರಾಣಾಗುತ್ತಿರುವ ಸವಾರರು: ಮೇಲ್ಸೇತುವೆ ಯಾವಾಗ ಸಿದ್ದವಾಗುತ್ತದೋ ಎಂದು ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಗಂಟೆಗಟ್ಟಲೇ ನಿಂತು ಚಲಿಸಬೇಕಾಗಿರುವ ಪರಿಸ್ಥಿತಿ ಇದೆ. ಈ ಬಗ್ಗೆ ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ. ಮಾಹಿತಿ ಪಡೆಯಲು ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಜಾನ್ಬಾಜ್ಗೆ ಕರೆ ಮಾಡಿದರೂ ಪ್ರಯೋಜನವಾಗಲಿಲ್ಲ, ವ್ಯವಸ್ಥಾಪಕಿ ವಾಣಿಶ್ರೀ ಕರೆ ಸ್ವೀಕರಿಸಿಯೂ ಪ್ರತಿಕ್ರಿಯೆ ನೀಡುವುದಿಲ್ಲ.
ಸರ್ವಿಸ್ ರಸ್ತೆಗಳಲ್ಲಿ ವಾಹನ ದಟ್ಟಣೆ ವಿಪರೀತವಾಗಿದ್ದು, ವಾಹನ ದಟ್ಟಣೆ ನಿರ್ವಹಿಸಲು ಸಂಚಾರಿ ಪೊಲೀಸರು ಹರಸಾಹಸಪಡುವಂತಾಗಿದೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮೇಲ್ಸೇತುವೆಯಲ್ಲಿ ಸಂಚಾರವನ್ನು ಪ್ರಾರಂಭಿಸುವ ಸಂಬಂಧ ಯಾವುದೇ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ ಎಂದು ಪೀಣ್ಯ ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಶ್ರೀಧರ್ ಮಾಹಿತಿ ನೀಡಿದ್ದಾರೆ.
ಪ್ರತಿನಿತ್ಯ ಲಕ್ಷ ವಾಹನಗಳು ಸಂಚರಿಸುವ ನಗರದ ಹೆಬ್ಬಾಗಿಲಾಗಿರುವ ಮೇಲ್ಸೇತುವೆಯ ಬಂದ್ ನಿಂದಾಗಿ ತುಮಕೂರು ರಸ್ತೆಯಲ್ಲಿ ವಾಹನ ದಟ್ಟಣೆ ಮಿತಿಮೀರಿದೆ ಹತ್ತು ನಿಮಿಷದಲ್ಲಿ ಕ್ರಮಿಸಬಹುದಾದ ದೂರಕ್ಕೆ ಗಂಟೆಗಟ್ಟಲೆ ಕಾಯುವಂತಾಗಿದ್ದು ಜನತೆ ಸರ್ಕಾರ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.
ಪೀಕ್ ಅವರ್ ಹಾಗೂ ರಜಾದಿನಗಳಲ್ಲಿ ತುಮಕೂರು ರಸ್ತೆಯಲ್ಲಿ ಸಂಚರಿಸಿದರೆ ನರಕ ದರ್ಶನವಾಗುತ್ತದೆ ಎಂದು ವಾಹನ ಸವಾರ ನರಸಿಂಹಮೂರ್ತಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಲಕ್ಷಾಂತರ ವಾಹನಗಳು ಸಂಚರಿಸುವ ಮೇಲ್ಸೇತುವೆಯ ದುರಸ್ತಿ ಕಾರ್ಯವನ್ನು ಸಕಾಲದಲ್ಲಿ ಮುಗಿಸದೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ ಎಂದು ಶಾಸಕ ಆರ್. ಮಂಜುನಾಥ್ ಕಿಡಿಕಾರಿದರು.
ವಾಹನ ಸವಾರರ ಆಕ್ರೋಶ: ಖಾಸಗಿ ಸಂಸ್ಥೆ ಟೋಲ್ ಹೆಸರಿನಲ್ಲಿ ಜನರನ್ನು ಸುಲಿಗೆ ಮಾಡುತ್ತಿದ್ದರೂ ಸಮರ್ಪಕ ಸೇವೆ ನೀಡುತ್ತಿಲ್ಲ ಎಂದು ಕಾರು ಚಾಲಕ ನವೀನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಗಂಟೆಗಟ್ಟಲೆ ಸಂಚಾರ ದಟ್ಟಣೆಯಲ್ಲಿ ಸಿಲುಕುವುದರಿಂದ ಹೆಚ್ಚಿನ ಟ್ರಿಪ್ಗಳನ್ನು ಮಾಡಲಾಗುತ್ತಿಲ್ಲ ಇದರಿಂದ ತುಂಬಾ ತೊಂದರೆಯಾಗುತ್ತಿದೆ ಎಂದು ಮತ್ತೋರ್ವ ಚಾಲಕ ಮನೋಜ್ ಅಳಲು ತೋಡಿಕೊಂಡರು.
ನೈಸ್ ರಸ್ತೆಯಲ್ಲಿ ಸಾಗುವಂತೆ ಪೊಲೀಸರು ವಾಹನ ಸವಾರರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ನಿಧಾನವಾಗುವ ಹಾಗೂ ಶುಲ್ಕ ಕಟ್ಟಬೇಕಾಗಿರುವುದರಿಂದ ವಾಹನ ಸವಾರರು ರಸ್ತೆ ಬಳಸುತ್ತಿಲ್ಲ. ಇದರಿಂದ ಕಣ್ಣು ಹಾಯಿಸಿದಷ್ಟು ದೂರ ತುಮಕೂರು ರಸ್ತೆಯಲ್ಲಿ ವಾಹನಗಳ ಸಾಲೇ ಬೆಳೆದಿದೆ.
