ಬೆಂಗಳೂರು, ಜ.29- ಸರ್ಕಾರಿ ವ್ಯವಸ್ಥೆ ಎಂಬುದು ಜನ ಹಿತ ಮರೆತು ಕಾಪೆರ್ರೇಟ್ ವಲಯದ ಬೆನ್ನೆಲುಬಾಗಿ ನಿಂತರೆ ಅದರ ಪರಿಣಾಮ ಏನಾಗಬಹುದು ಎಂಬುದಕ್ಕೆ ತಾಜಾ ಉದಾಹರಣೆ ತುಮಕೂರು ರಸ್ತೆಯ ಮೇಲುಸೇತುವೆ ದುರಸ್ಥಿ ಕಾಮಗಾರಿ. ಒಂದು ತಿಂಗಳಿಗೂ ಹಿಂದೆ ತುಮಕೂರು ರಸ್ತೆಯಲ್ಲಿರುವ ಮೇಲುಸೇತುವೆ ಪಿಲ್ಲರ್ ಸಂಖ್ಯೆ 102, 103ರ ಎಂಟನೆ ಮೈಲಿ ಬಳಿ ತೊಂದರೆ ಕಾಣಿಸಿಕೊಂಡಿದೆ. ಅದನ್ನು ಅಧಿಕಾರಿಗಳು ಮತ್ತು ತಜ್ಞರು ಸೂಕ್ತ ಸಮಯದಲ್ಲಿ ಗುರುತಿಸಿ ಹತ್ತಾರು ಪ್ರಾಣಗಳನ್ನು ಕಾಪಾಡಿದ್ದಾರೆ. ಮೇಲು ಸೇತುವೆ ಜೋಡಣೆಯ ಕೇಬಲ್ ಟೈಟನಿಂಗ್ ಕಾಮಗಾರಿಗಾಗಿ ಡಿಸೆಂಬರ್ 25ರಿಂದ ಆ ದಾರಿಯ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.
ಜನವರಿ 14ರ ವೇಳೆಗೆ ದುರಸ್ಥಿ ಕಾಮಗಾರಿ ಪೂರ್ಣಗೊಳ್ಳಲಿದೆ, ನಂತರ ಸಂಚಾರ ಯತಾಸ್ಥಿತಿಯಲ್ಲಿ ಮುಂದುವರೆಯಲಿದೆ ಎಂದು ಸಾರ್ವಜನಿಕರು ಸಹಿಸಿಕೊಂಡಿದ್ದರು. ಆದರೆ ಹೇಳಿದ ಅವಗೆ ಕಾಮಗಾರಿ ಮುಗಿದಿಲ್ಲ. ಸರ್ಕಾರಿ ವ್ಯವಸ್ಥೆಯಲ್ಲಿ ಯಾವ ಕಾಮಗಾರಿಗಳು ನಿಗದಿತ ಅವಗೆ ಮುಗಿಯದೇ ಇರುವುದು ನಮ್ಮ ರಾಜ್ಯಕ್ಕೆ ಅಂಟಿದ ರೋಗ. ಆದರೆ ಕೆಲವು ವಿಶೇಷ ಪ್ರಕರಣಗಳಲ್ಲಿ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಾಮಗಾರಿಯ ಬೆನ್ನು ಬಿದ್ದು ನಿಗದಿತ ಸಮಯಕ್ಕೆ ಮುಗಿಯುವಂತೆ ನೋಡಿಕೊಂಡಿರುವ ಉದಾಹರಣೆಗಳಿವೆ.
ತುಮಕೂರು ರಸ್ತೆಯ ಮೇಲು ಸೇತುವೆ ಕಾಮಗಾರಿಯೂ ಅದೇ ರೀತಿಯಾಗಬಹುದು ಎಂಬ ನಿರೀಕ್ಷೆ ಜನರಲ್ಲಿತ್ತು. ಸರಿ ಸುಮಾರು 20 ಜಿಲ್ಲೆಗಳಿಗೆ ಈ ರಸ್ತೆಯೇ ಹೆಬ್ಬಾಗಿಲು, ದಿನಕ್ಕೆ 50 ರಿಂದ 60 ಸಾವಿರ ವಾಹನಗಳು ಕಡ್ಡಾಯವಾಗಿ ಸಂಚರಿಸುತ್ತವೆ. ಗೊರಗುಂಟೆ ಪಾಳ್ಯದಿಂದ ನಾಗಸಂದ್ರ ಟೋಲ್ ವರೆಗೆ ಮೇಲುಸೇತುವೆಯಲ್ಲಿ ಸಂಚರಿಸಿದರೆ ಕನಿಷ್ಠ ಏಳರಿಂದ 10 ನಿಮಿಷಗಳಲಿ ಕ್ರಮಿಸಬಹುದಾಗಿತ್ತು.
2010ರಲ್ಲಿ ಸೇತುವೆ ಸೇವೆಗೆ ಸಮರ್ಪಣೆಗೊಂಡ ದಿನದಿಂದಲೂ ಜನ ಇದನ್ನು ಬಳಕೆ ಮಾಡುತ್ತಿದ್ದರು. ಖಾಸಗಿ ಕಂಪೆನಿ ಟೋಲ್ ಹೆಸರಿನಲ್ಲಿ ಜನರನ್ನು ಸುಲಿಗೆ ಮಾಡುತ್ತಿದ್ದರೂ ಸುಗಮ ಸಂಚಾರವನ್ನು ಗಮನದಲ್ಲಿಟ್ಟುಕೊಂಡು ಯಾರು ಚಕಾರ ಎತ್ತುತ್ತಿರಲಿಲ್ಲ.
ಆದರೆ ಈಗ ಪರಿಸ್ಥಿತಿ ಹೇಗಿದೆ ಎಂದರೆ ಈ ಹಾದಿಯಲ್ಲಿ ಪ್ರಯಾಣಿಸಲು ಒಂದರಿಂದ ಎರಡು ಗಂಟೆ ಕಾಲ ಹರಣವಾಗುತ್ತಿದೆ. ವಾಹನ ದಟ್ಟಣೆ ನರಕ ಸದೃಶ್ಯವಾಗಿ ಮಾರ್ಪಟ್ಟಿದೆ. ಬೆಂಗಳೂರಿನಿಂದ ಹೊರ ಹೋಗುವವರು, ಹೊರ ಭಾಗದಿಂದ ಬೆಂಗಳೂರಿಗೆ ಬರುವವರು ಮಾದಾವರದಿಂದ ಚಿಕ್ಕಬಿದರಕಲ್ಲು ಗ್ರಾಮದಿಂದ ಯಶವಂತಪುರದವರೆಗೂ ಯಮಯಾತನೆ ಪಡುವಂತಾಗಿದೆ. ಒಂದು ತಿಂಗಳ ಒಳಗಾಗಿ ಕೆಲಸ ಮುಗಿಸುವುದಾಗಿ ಹೇಳಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತೆ ಸಮಯ ಮುಂದೂಡಿದ್ದಾರೆ.
ಕೇಬಲ್ ಸಡಿಲವಾಗಿರುವ 102 ಮತ್ತು 103 ಪಿಲ್ಲರ್‍ಗಳಲ್ಲಿ ಮಾತ್ರವಲ್ಲದೆ ಮೇಲುಸೇತುವೆಯ ಉದ್ದಕ್ಕೂ ಕೇಬಲ್ ಟೈಟನಿಂಗ್ ಕೆಲಸ ನಿರ್ವಹಿಸಬೇಕಿದ್ದು, ಅದಕ್ಕಾಗಿ ಸಮಯಾವಕಾಶ ಹಿಡಿಯುತ್ತಿದೆ ಎಂದು ಸಬೂಬು ಹೇಳುತ್ತಿದ್ದಾರೆ. ಸಾವಿರಾರು ವಾಹನಗಳು ಸಂಚರಿಸುವ ಹೆಚ್ಚು ದಟ್ಟಣೆ ಹೊಂದಿರುವ ರಸ್ತೆಯಲ್ಲಿ ಕಾಮಗಾರಿಯನ್ನು ಚುರುಕಾಗಿ ಮುಗಿಸಬೇಕು ಎಂಬ ಕನಿಷ್ಠ ಪ್ರಜ್ಞೆ ಇಲ್ಲದೆ ಅಧಿಕಾರಿಗಳು ತಮ್ಮ ಎಂದಿನ ಶೈಲಿಯ ಮೊರೆ ಹೋಗಿರುವುದು ವಿಷಾದನೀಯ.
ಬೆಂಗಳೂರಿನಿಂದ ಹೊರ ಹೊಗುವಾಗ ಎದುರಾಗುವ ನಾಗಸಂದ್ರ ಟೋಲ್‍ನಲ್ಲಿ ಮಾತ್ರ ಶುಲ್ಕ ಸಂಗ್ರಹಿಸುತ್ತಿಲ್ಲ. ಮೇಲುಸೇತುವೆ ಕೆಲಸ ನಡೆಯುತ್ತಿರುವುದರಿಂದ ವಾಹನಗಳು ಈ ಟೋಲ್ ಹಾದು ಹೋಗುತ್ತಿಲ್ಲ. ಹಾಗಾಗಿ ಟೋಲ್ ಸಂಗ್ರಹವಾಗುತ್ತಿಲ್ಲ. ಉಳಿದಂತೆ ನೆಲಮಂಗಲ ಟೋಲ್‍ನಲ್ಲಿ ಶುಲ್ಕ ಸಂಗ್ರಹ ಅಭಾದಿತವಾಗಿ ಮುಂದುವರೆದಿದೆ.
ರಸ್ತೆ ದುರಸ್ತಿಯಿದೆ ಎಂಬ ಕಾರಣಕ್ಕೆ ಸೌಜನ್ಯಕ್ಕಾದರೂ ಖಾಸಗಿ ಕಂಪೆನಿಯವರು ಟೋಲ್ ಸಂಗ್ರಹ ಕೈ ಬಿಟ್ಟಿಲ್ಲ. ಸರ್ಕಾರಿ ಅಧಿಕಾರಿಗಳು ಈ ಕಡೆ ಗಮನ ಹರಿಸಿಲ್ಲ. ರಸ್ತೆಯಲ್ಲಿ ನಕರಯಾತನೆ ಅನುಭವಿಸುತ್ತಲೆ ಹಣ ತೆರುವ ದುಸ್ಥಿತಿ ಸಾರ್ವಜನಿಕರದಾಗಿದೆ.
ಹನ್ನೊಂದು ವರ್ಷದಲ್ಲೇ ಸೇತುವೆ ದುರಸ್ಥಿಗೆ ಬಂದಿದೆ ಎಂದರೆ ಅದರ ನಿರ್ಮಾಣ ಕಾಮಗಾರಿ ಗುಣಮಟ್ಟ ಪ್ರಶ್ನಾರ್ಹವಾಗಿದೆ. ಟೋಲ್ ಸಂಗ್ರಹದ ಕರಾರು ಅವ ಮುಗಿದ ಬಳಿಕ ಖಾಸಗಿ ಕಂಪೆನಿಯಿಂದ ಈ ರಸ್ತೆಯನ್ನು ಸರ್ಕಾರ ತನ್ನ ವಶಕ್ಕೆ ತೆಗೆದುಕೊಳ್ಳಬಹುದು. ಆ ವೇಳೆಗೆ ಮತ್ತಷ್ಟು ಶಿಥಲಗೊಂಡಿರುವ ಸೇತುವೆ ಯಾವ ರೀತಿಯಲ್ಲಾದರೂ ಅನಾಹುತ ಸೃಷ್ಟಿಸಬಹುದು.
ಕಾಮಗಾರಿಯ ಗುಣಮಟ್ಟದ ಬಗ್ಗೆ ಈವರೆಗೂ ಯಾವ ಅಕಾರಿಯೂ ಬಾಯಿ ಬಿಡುತ್ತಿಲ್ಲ. ಸ್ಥಳೀಯ ಜನಪ್ರತಿನಿಗಳಂತೂ ತಮಗೂ ಇದಕ್ಕೂ ಸಂಬಂಧವೇ ಇಲ್ಲವೇನೋ ಎಂಬಂತೆ ಬದುಕುತ್ತಿದ್ದಾರೆ.
ಸರ್ಕಾರಿ ವ್ಯವಸ್ಥೆ ಈ ರೀತಿ ಕಾಪೆರ್ರೇಟ್ ಸಂಸ್ಥೆಗಳ ಜೊತೆ ಶಾಮೀಲಾಗಿ ಬಿಟ್ಟರೆ ಜನ ಸಾಮಾನ್ಯರ ಕಷ್ಟಗಳಿಗೆ ಕೊನೆಯಿಲ್ಲವಾಗುತ್ತದೆ. ಒಂದೆಡೆ ಸಂಚಾರ ದಟ್ಟಣೆಯ ನರಕಯಾತನೆ, ಮತ್ತೊಂದೆಡೆ ಅಭಾದಿತವಾಗಿ ಫಾಸ್ಟ್ ಟ್ಯಾಗ್ ಹೆಸರಿನಿಂದ ಟೋಲ್ ವಸೂಲಿ. ಸಣ್ಣಪುಟ್ಟ ವಿಷಯಗಳಿಗೆಲ್ಲಾ ಬೀದಿಗಿಳಿಯುವ ಪ್ರತಿಪಕ್ಷಗಳು ಈ ವಿಷಯದಲ್ಲಿ ಬಾಯಿ ಮುಚ್ಚಿಕೊಂಡಿರುವುದೇಕೆ ಎಂದೆ ಅರ್ಥವಾಗುತ್ತಿಲ್ಲ.
ಟೋಲ್ ಸಂಗ್ರಹಿಸುವ ರಸ್ತೆಗಳ ಜನಪ್ರತಿನಿಗಳಿಗೆ ಕಲ್ಪವೃಕ್ಷ, ಕಾಮಧೇನುಗಳಿದ್ದಂತೆ. ಟೋಲ್ ಕಂಪೆನಿಗಳ ಪ್ರತಿನಿಗಳು ಕಾಲ ಕಾಲಕ್ಕೆ ಜನ ನಾಯಕರು ಸೇರಿದಂತೆ ಗಲಾಟೆ ಮಾಡುವ ಎಲ್ಲರನ್ನು ಭೇಟಿ ಮಾಡುತ್ತಿರುತ್ತಾರೆ. ಅಲ್ಲಿಗೆ ಬೆಕ್ಕು ಕಣ್ಣು ಮುಚ್ಚಿಕೊಂಡು ಹಾಲು ಕುಡಿದಂತೆ ಅಧಿಕಾರಿಗಳು, ಜನಪ್ರತಿನಿಗಳು ವರ್ತಿಸುತ್ತಾರೆ. ಖಾಸಗಿ ಕಂಪೆನಿಯವರು ಗೊತ್ತಿದ್ದೂ ಜನರ ಸುಲಿಗೆಯನ್ನು ಅವ್ಯಾಹತವಾಗಿ ಮುಂದುವರೆಸುತ್ತಾರೆ.
