ಬೆಂಗಳೂರು,ಜ.7-ಅಂತೂ ಇಂತೂ ತುಮಕೂರು ರಸ್ತೆ ಸಂಚಾರದ ಅವ್ಯವಸ್ಥೆಗೆ ಮುಕ್ತಿ ದೊರಕುವ ಲಕ್ಷಣಗಳು ಗೋಚರಿಸುತ್ತಿದೆ. ಗೊರಗುಂಟೆಪಾಳ್ಯ ಸಮೀಪದ ಮೇಲ್ಸೇತುವೆಯ ಎರಡು ಪಿಲ್ಲರ್‍ಗಳಲ್ಲಿ ಕಾಣಿಸಿಕೊಂಡಿದ್ದ ತಾಂತ್ರಿಕ ದೋಷದಿಂದ ಕಳೆದ ಡಿಸೆಂಬರ್ 25 ರಿಂದ ಮುಚ್ಚಲಾಗಿದ್ದ ಮೇಲ್ಸೇತುವೆ ಬುಧವಾರದಿಂದ ವಾಹನ ಸಂಚಾರಕ್ಕೆ ಮುಕ್ತಗೊಳ್ಳುವ ಸಾಧ್ಯತೆಗಳಿವೆ.
ದುರಸ್ತಿಪಡಿಸಲಾಗಿರುವ ಮೇಲ್ಸೇತುವೆಯ ಮೇಲೆ ಲೋಡ್ ಟೆಸ್ಟಿಂಗ್ ನಡೆಸಲಾಗುತ್ತಿದೆ. ಟೆಸ್ಟ್‍ನಲ್ಲಿ ತಜ್ಞರು ರಸ್ತೆ ಸಂಚಾರಕ್ಕೆ ಅನುಮತಿ ನೀಡಿದರೆ ಬುಧವಾರದಿಂದ ವಾಹನ ಸಂಚಾರ ಆರಂಭಗೊಳ್ಳಲಿದೆ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮೂಲಗಳು ತಿಳಿಸಿವೆ. ಮೇಲ್ಸೇತುವೆ ಮೇಲೆ ಲೋಡ್ ಟೆಸ್ಟಿಂಗ್ ನಡೆಸಬೇಕಾದ ಹಿನ್ನಲೆಯಲ್ಲಿ ತಡರಾತ್ರಿಯಿಂದ ಮುಖ್ಯ ರಸ್ತೆ ಕೂಡ ಬಂದ್ ಮಾಡಲಾಗಿದೆ.
ಹೀಗಾಗಿ ತುಮಕೂರು ರಸ್ತೆಯಲ್ಲಿ ವಾಹನಗಳು ಇರುವೆ ಸಾಲಿನಂತೆ ನಿಧಾನವಾಗಿ ಚಲಿಸುವ ದೃಶ್ಯಗಳು ಕಂಡು ಬರುತ್ತಿವೆ. ಮುಖ್ಯ ರಸ್ತೆಯನ್ನು ಸಂಪೂರ್ಣ ಬಂದ್ ಮಾಡಿ ಕೇವಲ ಸರ್ವೀಸ್ ರಸ್ತೆಯಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿರುವುದರಿಂದ ಇಂದು ಮತ್ತು ನಾಳೆ ತುಮಕೂರು ರಸ್ತೆ ಸಂಚಾರ ಮಾಡದಿರುವುದೇ ಉತ್ತಮ.
ಎಂಟನೆ ಮೈಲಿ ರಸ್ತೆಯಿಂದ ಟೋಲ್‍ವರೆಗಿನ ಎರಡು ಮುಖ್ಯ ರಸ್ತೆಯನ್ನು ಬಂದ್ ಮಾಡಲಾಗಿದೆ. ಐಐಎಸ್‍ಸಿಯ ತಜ್ಞರ ಸಮಿತಿ ಮೇಲ್ಸೇತುವೆಯ 102 ಮತ್ತು 103 ನೇ ನಂಬರಿನ ಪಿಲ್ಲರ್‍ನಲ್ಲಿ ಕಾಣಿಸಿಕೊಂಡ ತಾಂತ್ರಿಕ ದೋಷವನ್ನು ಸರಿಪಡಿಸುವಲ್ಲಿ ಯಶಸ್ವಿಯಾಗಿದೆ. ಇದರ ಜತೆಗೆ ಇತರ ಪಿಲ್ಲರ್‍ಗಳ ಸಾಮಥ್ರ್ಯವನ್ನು ತಪಾಸಣೆಗೊಳಪಡಿಸಿದೆ.
ದುರಸ್ತಿ ಕಾಮಗಾರಿ ಸಂಪೂರ್ಣಗೊಂಡಿರುವುದರಿಂದ ಪ್ರತಿನಿತ್ಯ 50 ಸಾವಿರಕ್ಕೂ ಹೆಚ್ಚು ವಾಹನಗಳು ಸಂಚರಿಸುವ ರಸ್ತೆಯ ಸಾಮಥ್ರ್ಯ ಪರೀಕ್ಷೆ ನಡೆಸಲಾಗುತ್ತಿದೆ.
ನಿನ್ನೆ ತಡರಾತ್ರಿಯಿಂದ ನಾಳೆ ರಾತ್ರಿವರೆಗೆ ನಿರಂತರವಾಗಿ ಮೇಲ್ಸೇತುವೆ ಮೇಲ್ಭಾಗ ಲೋಡ್ ಟೆಸ್ಟಿಂಗ್ ನಡೆಸಲಾಗುವುದು. ಈ ಸಂದರ್ಭದಲ್ಲಿ ಯಾವುದೇ ದೋಷ ಕಂಡುಬರದಿದ್ದರೆ ಬುಧವಾರದಿಂದ ತುಮಕೂರು ರಸ್ತೆ ಸಂಚಾರ ಮುಕ್ತಗೊಳಿಸಲಾಗುವುದು ಎಂದು ಮೂಲಗಳು ಉಲ್ಲೇಖಿಸಿವೆ.
