ದಾವಣಗೆರೆ,ಫೆ.20- ಕಾಶಿಯಲ್ಲಿ ನಡೆಯುವ ಗಂಗಾ ಆರತಿ ಮಾದರಿಯಲ್ಲೇ ಜಿಲ್ಲೆಯ ಹರಿಹರದಲ್ಲಿ ತುಂಗಾನದಿಯ ತಟದಲ್ಲಿ ತುಂಗಾ ಆರತಿಗಾಗಿ ನಿರ್ಮಿಸುತ್ತಿರುವ ಭವ್ಯ ಮಂಟಪಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇಂದು ಶಂಕುಸ್ಥಾಪನೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಸಿಎಂ, ತುಂಗಾ ಆರತಿ ಮಂಟಪ ನಿರ್ಮಾಣಕ್ಕೆ 30 ಕೋಟಿ ರೂ. ಹಣ ಬಿಡುಗಡೆ ಮಾಡುತ್ತಿದೆ. ಈ ಮೂಲಕ ಹರಿಹರ ಒಂದು ಪ್ರವಾಸಿ ಹಾಗೂ ಆಧ್ಯಾತ್ಮಿಕ ಕ್ಷೇತ್ರವಾಗಿ ಹೊರಹೊಮ್ಮಲಿದೆ. ಜತೆಗೆ ಹರಿಹರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೂ ಹಣ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.
ಕಟ್ಟಡ, ರಸ್ತೆ, ಮೇಲ್ಸೇತುವೆ ಉದ್ಘಾಟನೆ ಮಾಡುತ್ತೇವೆ. ಆದರೆ, ಇದೊಂದು ಅಪರೂಪದ ಕಾರ್ಯಕ್ರಮವಾಗಿದೆ. ನಮ್ಮ ಎಲ್ಲಾ ನಾಗರಿಕತೆಗಳು ನದಿ ತಟದಲ್ಲೇ ಬೆಳೆದಿವೆ. ನಾಗರಿಕತೆ ಮತ್ತು ಸಂಸ್ಕøತಿ ಎರಡೂ ಒಟ್ಟಿಗೆ ಬೆಳೆಯಬೇಕು. ನಾಗರಿಕತೆಯನ್ನೇ ಸಂಸ್ಕøತಿ ಎಂದು ಕೊಂಡಿದ್ದಾರೆ. ನಮ್ಮಲಿ ಏನಿದೆಯೋ ಅದು ನಾಗರಿಕತೆ. ಚಕ್ಕಡಿ, ಮೋಟಾರ್‍ಸೈಕಲ್, ಬೀಸೋಕಲ್ಲು ಎಲ್ಲಾ ಹೋಗಿ ಮಿಕ್ಸಿ ಬಂದಿದೆ. ಅದು ನಾಗರಿಕತೆ. ಸಂಸ್ಕøತಿಯಲ್ಲ. ನಾಗರಿಕತೆ ಬೆಳೆಯಬೇಕೆಂದು ತಿಳಿಸಿದರು.
ನನ್ನ ಪ್ರಕಾರ ವಿಜ್ಞಾನ ಮತ್ತು ತಂತ್ರಜ್ಞಾನ ಒಂದೇ ನಾಣ್ಯದ ಎರಡು ಮುಖಗಳು. ಒಂದಕ್ಕೊಂದು ಪೂರಕವಾದದ್ದು, ಇದನ್ನು ಅರ್ಥ ಮಾಡಿಕೊಂಡು ಮುನ್ನಡೆಯಬೇಕು. ಅಣು ವಿಭಜನೆಯಾದಾಗ ಒಂದು ಶಕ್ತಿ ಉತ್ಪಾದನೆಯಾಗುತ್ತದೆ. ಅಣುಗಳು ಕೂಡಿದಾಗ ಮತ್ತೊಂದು ಶಕ್ತಿ ಉತ್ಪಾದನೆಯಾಗುತ್ತದೆ. ಅದುವೇ ದೊಡ್ಡ ಶಕ್ತಿ. ಹರಿಹರ ಕ್ಷೇತ್ರದಲ್ಲಿ ಕೂಡುವ ಕೆಲಸವಾಗುತ್ತದೆ ಎಂದರು.
ಈ ವೇಳೆ ಬಜೆಟ್ ಗಾತ್ರದ ಬಗ್ಗೆ ಪ್ರತಿಕ್ರಿಯಿಸಲು ಸಿಎಂ ನಿರಾಕರಿಸಿದ್ದು, ಬಜೆಟ್ ದಿನವೇ ಅದರ ಗಾತ್ರ ತಿಳಿಯಲಿದೆ ಎಂದರು. ಉತ್ತರದಲ್ಲಿ ಹೇಗೆ ಗಂಗಾ ಆರತಿ ಇರುತ್ತದೆಯೋ ಅದೇ ರೀತಿ ರಾಜ್ಯದಲ್ಲೂ ತುಂಗಾ ಆರತಿ ನಡೆಯಬೇಕೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಬಳಿ ಮನವಿ ಮಾಡಲಾಗಿತ್ತು. ಅದಕ್ಕೆ ಒಪ್ಪಿಗೆ ನೀಡಿ ಇಂದು ಮುಖ್ಯಮಂತ್ರಿಗಳು ತುಂಗಾ ಆರತಿ ಮಂಟಪ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ ಎಂದು ಶ್ರೀ ವಚನಾನಂದ ಸ್ವಾಮೀಜಿ ಹರ್ಷ ವ್ಯಕ್ತಪಡಿಸಿದರು.
ಈ ಹಿಂದೆ ದಾವಣಗೆರೆ-ಹರಿಹರ ಮ್ಯಾಂಚೆಸ್ಟರ್ ಸಿಟಿಯಾಗಿದ್ದು, ಈಗ ಆ ವೈಭೋಗವಿಲ್ಲ. ತುಂಗಾ ಆರತಿ ಮೂಲಕ ಪ್ರವಾಸಿ ಕೇಂದ್ರವಾಗಬೇಕು. ಗಂಗಾ ನದಿ ರೀತಿಯಲ್ಲೇ ಕಾವೇರಿ, ಘಟಪ್ರಭಾ, ಮಲಪ್ರಭಾ, ಕೃಷ್ಣೆ ಸೇರಿದಂತೆ ಎಲ್ಲಾ ನದಿಗಳು ಸ್ವಚ್ಛವಾಗಬೇಕು. ಬೈರನಪಾದ ಏತ ನೀರಾವರಿ ನೆನೆಗುದಿಗೆ ಬಿದ್ದಿದೆ. ಅದು ಮತ್ತೆ ಚಾಲನೆಯಾಗಬೇಕು. ಹಾಗೆಯೇ ಎಲ್ಲಾ ಕೈಗಾರಿಕೆಗಳು ಹರಿಹರದಲ್ಲಿ ಸ್ಥಾಪನೆಯಾಗಬೇಕು.
ಈ ಕುರಿತು ಮುಖ್ಯಮಂತ್ರಿಗಳು ಹಾಗೂ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿಯವರು ಹೆಚ್ಚಿನ ಗಮನ ಕೊಡಬೇಕು ಎಂದರು.
ತುಂಗಾ ಆರತಿ ಮಂಟಪ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಬರುವಂತಾಗಲಿ ಎಂದು ಇದೇ ವೇಳೆ ಶ್ರೀ ವಚನಾನಂದ ಸ್ವಾಮೀಜಿ ತಿಳಿಸಿದರು.
