ಟರ್ಕಿ, ಫೆ.11- ಭೂಕಂಪನದಲ್ಲಿ ಧರೆಗುರುಳಿದ್ದ ಕಟ್ಟಡಗಳ ಅವಶೇಷಗಳಡಿ ಸಿಲುಕಿಕೊಂಡಿದ್ದ 17 ವರ್ಷದ ಬಾಲಕನೊಬ್ಬ ತನ್ನ ಸ್ವಂತ ಮೂತ್ರ ಕುಡಿದು ಬದುಕುಳಿದಿರುವ ಘಟನೆ ಬೆಳಕಿಗೆ ಬಂದಿದೆ. 94 ಗಂಟೆಗಳ ಕಾಲ ಅವಶೇಷಗಳಡಿ ಸಿಲುಕಿಕೊಂಡಿದ್ದ ಅದ್ನಾನ್ ಮುಹಮ್ಮತ್ ಕೊರ್ಕುಟ್ ಎಂಬಾತನನ್ನು ರಕ್ಷಣಾ ಪಡೆಗಳು ರಕ್ಷಿಸಿ ಹೊರತಂದ ನಂತರ ಆತ ತಾನು ಬದುಕುಳಿಯಲು ಮೂತ್ರಪಾನ ಮಾಡಿದ್ದೇ ಕಾರಣ ಎಂಬ ರಹಸ್ಯ ಬಿಚ್ಚಿಟ್ಟಿದ್ದಾನೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ಅದ್ನಾನ್ ತಮ್ಮ ಕುಟುಂಬದವರೊಂದಿಗೆ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಭೂಕಂಪನ ಸಂಭವಿಸಿತ್ತು. ನೋಡ ನೋಡುತ್ತಿದ್ದಂತೆ ಅವರು ಭೂಗತರಾದರೂ ಹೊರ ಹೋಗಲು ಸಾಧ್ಯವಾಗದೆ 94 ಗಂಟೆಗಳ ಕಾಲ ಅವರು ಅಲ್ಲೇ ಕಾಲ ಕಳೆಯಬೇಕಾಯಿತು.
ಆ ಸಮಯದಲ್ಲಿ ಸ್ವಮೂತ್ರಪಾನ ಮಾಡುತ್ತಿದ್ದೆ. ಜತೆಗೆ ಪಕ್ಕದಲ್ಲೇ ಇದ್ದ ಹೂವುಗಳನ್ನು ತಿಂದು ಜೀವ ಉಳಿಸಿಕೊಂಡಿರುವುದಾಗಿ ಆತ ಹೇಳಿಕೊಂಡಿದ್ದಾನೆ.
ಉಸಿರಾಡಲು ಸಾಧ್ಯವಾಗದೆ ನಿದ್ದೆ ಬರುವಂತಾದಾಗ ಪ್ರತಿ 25 ನಿಮಿಷಗಳಿಗೊಮ್ಮೆ ಮೊಬೈಲ್‍ನಲ್ಲಿ ಅಲಾರಾಂ ಇಟ್ಟುಕೊಂಡಿದ್ದೇ ಎರಡು ದಿನ ಕಳೆದ ನಂತರ ಮೊಬೈಲ್ ಬ್ಯಾಟರಿ ಮುಗಿದಾದ ಗಾಬರಿಗೊಂಡಿದ್ದೇ. ನನಗೆ ಹೊರಗೆ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದವರ ಧ್ವನಿ ಕೇಳಿಸುತ್ತಿತ್ತು. ಆದರೂ ನನ್ನಿಂದ ಕೂಗಿಕೊಳ್ಳಲು ಸಾಧ್ಯವಾಗಲಿಲ್ಲ ಎನ್ನುವುದನ್ನು ಆತ ನೆನೆಸಿಕೊಂಡಿದ್ದಾನೆ.