ಬೆಂಗಳೂರು, ಸೆ.30- ಬಿಬಿಎಂಪಿ ಚುನಾವಣೆಗೆ ಗ್ರೀನ್ ಸಿಗ್ನಲ್ ದೊರೆತ ಹಿನ್ನೆಲೆಯಲ್ಲಿ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು ಆಯೋಗ ತಿಳಿಸಿದ ಕೂಡಲೇ ಚುನಾವಣೆ ನಡೆಯಲಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಇಂದಿಲ್ಲಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾರ್ಡ್ ವಿಂಗಡಣೆ ಕುರಿತು ಕೆಲವರು ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಅದನ್ನು ವಜಾಗೊಳಿಸಲಾಗಿದೆ. ಈಗ ಮೀಸಲಾತಿ ಪಟ್ಟಿ ವಿಚಾರಣೆ ಮಾತ್ರ ಬಾಕಿ ಉಳಿದಿದ್ದು , ಅದಕ್ಕೂ ನಮಗೂ ಸಂಬಂಧವಿಲ್ಲ. ಸರ್ಕಾರದ ಮಟ್ಟದಲ್ಲಿ ನಿರ್ಧಾರವಾಗಿದೆ.
ಚುನಾವಣೆಗೆ ಎಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದು , ಆಯೋಗ ಯಾವಾಗ ಸೂಚನೆ ನೀಡುತ್ತದೆಯೋ ಅವಾಗ ನಾವು ಚುನಾವಣೆ ನಡೆಸುತ್ತೇವೆ ಎಂದರು.ಮತದಾರರ ಪಟ್ಟಿಯನ್ನು ಕೂಡಾ ಅಂತಿಮಗೊಳಿಸಿ ಪ್ರಕಟಿಸಿದ್ದೇವೆ.
ಮತದಾರರ ಪಟ್ಟಿಯಲ್ಲಿ ಯಾವುದೇ ಗೊಂದಲವಿಲ್ಲ. 2011ರ ಜನಗಣತಿ ಆಧಾರದ ಮೇಲೆ ಪಟ್ಟಿಯನ್ನು ಅಂತಿಮಗೊಳಿಸಲಾಗಿದೆ. ಹೀಗಾಗಿ ಚುನಾವಣೆ ಸಂಬಂಧ ನಮ್ಮ ಕಡೆಯಿಂದ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದೇವೆ ಎಂದರು.