ಸದ್ಯಕ್ಕೆ ಟ್ವಿಟರ್‌ನಲ್ಲಿ ನಿರ್ಬಂಧಗಳ ಸಡಿಲಿಕೆ ಇಲ್ಲ

Social Share

ನವದೆಹಲಿ, ಅ.29- ಸಾಮಾಜಿಕ ಜಾಲತಾಣದ ದೈತ್ಯ ಸಂಸ್ಥೆ ಟ್ವಿಟರ್ ಉದ್ಯಮಿ ಎಲೋನ್ ಮಸ್ಕ್ ಅವರ ಒಡೆತನಕ್ಕೆ ಜಾರಿದ ಬೆನ್ನಲ್ಲೆ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಮುಕ್ತ ಅವಕಾಶಗಳು ಸಿಗುವ ವಿಶ್ವಾಸ ವ್ಯಕ್ತವಾಗಿದ್ದು, ಇನ್ನೂ ಮುಂದಾದರೂ ಸರ್ಕಾರದ ಒತ್ತಡಕ್ಕೆ ಮಣಿದ ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ ತಗ್ಗಲಿ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‍ಗಾಂಧಿ ಆಶಯ ವ್ಯಕ್ತ ಪಡಿಸಿದ್ದಾರೆ. ಅಮರಿಕಾದ ಮಾಜಿ ಅಧ್ಯಕ್ಷರ ಖಾತೆಯ ಕುರಿತು ಗೊಂದಲಗಳು ಮುಂದುವರೆದಿವೆ.

ಎಲೋನ್ ಮಸ್ಕ್ ಟ್ವಿಟರ್ ಖರೀದಿಯ ವ್ಯವಹಾರ ಕುದುರಿಸಲಾರಂಭಿಸಿದ ಕ್ಷಣದಿಂದಲೂ ಅಭಿವ್ಯಕ್ತಿ ಸ್ವಾತಂತ್ರ್ಯದ ಪರವಾಗಿಯೇ ಧ್ವನಿ ಎತ್ತಿದ್ದರು. ಮಾಲೀಕತ್ವ ಬದಲಾವಣೆಯಾಗುತ್ತಿದ್ದಂತೆ ಈವರೆಗೂ ಜಪ್ತಿಯಾಗಿರುವ ಖಾತೆಗಳು ಮರು ಚಾಲನೆಗೊಳ್ಳಲಿವೆ ಎಂಬ ವಿಶ್ವಾಸಗಳು ವ್ಯಕ್ತವಾಗಿವೆ.

ರಾಹುಲ್‍ಗಾಂಧಿ ಅವರು ಎಲೋನ್ ಮಸ್ಕ್ ಅವರನ್ನು ಅಭಿನಂದಿಸಿದ್ದು, ಜೊತೆಯಲ್ಲೇ ಕೆಲ ಆಶಯಗಳನ್ನು ವ್ಯಕ್ತ ಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಟ್ವಿಟರ್ ದ್ವೇಷದ ಮಾತುಗಳ ವಿರುದ್ಧವಿರಲಿದೆ ಎಂಬ ವಿಶ್ವಾಸ ಹೊಂದಿದ್ದೇನೆ. ಸತ್ಯ ಪರಿಶೀಲನೆ ಮತ್ತಷ್ಟು ದೃಢವಾಗಬಹುದು, ಸರ್ಕಾರದ ಒತ್ತಡಕ್ಕೆ ಮಣಿದು ಪ್ರತಿಪಕ್ಷಗಳ ಧ್ವನಿಯನ್ನು ಹತ್ತಿಕ್ಕುವ ಕೆಲಸ ಹೆಚ್ಚು ದಿನ ನಡೆಯುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ಪುನೀತ್ ಪ್ರಥಮ ಪುಣ್ಯಸ್ಮರಣೆಗೆ ಹರಿದುಬಂದ ಅಭಿಮಾನಿ ಸಾಗರ

ಜೊತೆಗೆ ತಮ್ಮ ಖಾತೆಗೆ ಕಾಲಕ್ಕನುಗುಣವಾಗಿ ಹೆಚ್ಚು ಕಡಿಮೆಯಾಗಿರುವ ಅನುಪಾಲಕರ (ಫಾಲೋವರ್ಸ್) ಸಂಖ್ಯೆಯ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. 2021ರ ಜನವರಿಯಲ್ಲಿ ರಾಹುಲ್‍ಗಾಂಧಿ ತಮ್ಮ ಖಾತೆಯಲ್ಲಿ 1.7 ಕೋಟಿ ಅನುಪಾಲಕರನ್ನು ಹೊಂದಿದ್ದರು. ಅದು ಏರುತ್ತಲೇ ಇತ್ತು. 2021ರ ಆಗಸ್ಟ್‍ನಲ್ಲಿ ದೆಹಲಿಯಲ್ಲಿ ನಡೆದ ದಲಿತ ಬಾಲಕಿಯ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಹುಲ್‍ಗಾಂಧಿ ಟ್ವೀಟ್ ಹಾಕಿದ್ದರು. ಅದರಲ್ಲಿ ಅತ್ಯಾಚಾರ ಸಂತ್ರಸ್ಥೆಯ ಗುರುತು ಪತ್ತೆಯಾಗುವಂತ ಪೋಸ್ಟ್ ಹಾಕಿ ಟ್ವಿಟರ್ ಸಂಸ್ಥೆಯ ನಿಯಮಗಳನ್ನು ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಕೆಲ ದಿನಗಳ ಕಾಲ ರಾಹುಲ್‍ಗಾಂಧಿ ಖಾತೆಯನ್ನು ಜಪ್ತಿ ಮಾಡಲಾಗಿತ್ತು.

ರಾಹುಲ್‍ಗಾಂಧಿ ಪರವಾಗಿ ಆಗ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಅಭಿಯಾನವೇ ನಡೆದಿತ್ತು. ಒತ್ತಡಕ್ಕೆ ಮಣಿದು ಒಂದು ವಾರದ ಬಳಿಕ ಖಾತೆ ಮರುಚಾಲನೆಗೊಂಡಿತ್ತು. ಈ ಘಟನೆ ಬಳಿಕ 2022ರ ಫೆಬ್ರವರಿವರೆಗೂ ರಾಹುಲ್‍ಗಾಂಧಿ ಅವರ ಖಾತೆಯಲ್ಲಿ ಅನುಪಾಲಕರ ಸಂಖ್ಯೆ ಹೆಚ್ಚಿರಲಿಲ್ಲ.

ನಂತರ ನಿಧಾನಕ್ಕೆ ಫಾಲೋವರ್ಸ್ ಸಂಖ್ಯೆ ಹೆಚ್ಚಲಾರಂಭಿಸಿದೆ. ಪ್ರಸ್ತುತ ರಾಹುಲ್ ಖಾತೆಯಲ್ಲಿ 2.19 ಕೋಟಿ ಹಿಂಪಾಲಕರಿದ್ದಾರೆ. ಆಗ ಸರ್ಕಾರದ ಒತ್ತಡಕ್ಕೆ ಮಣಿದು ಟ್ವಿಟರ್ ಪ್ರತಿಪಕ್ಷಗಳ ಅಭಿವ್ಯಕ್ತ ಸ್ವಾತಂತ್ರ್ಯವನ್ನು ಹತ್ತಿಕ್ಕಲಾಗಿದೆ ಎಂಬ ಆರೋಪಗಳು ಕೇಳಿ ಬಂದಿದ್ದವು.

ನ.1ರಂದು ಮನೆಗಳ ಮೇಲೆ ಕನ್ನಡ ಧ್ವಜ ಹಾರಿಸಲು ಜೆಡಿಎಸ್ ಕರೆ

ಅಚ್ಚರಿ ಎಂಬಂತೆ ಅಮೆರಿಕಾದ ಮಾಜಿ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಅವರ ಖಾತೆ ಮರು ಚಾಲನೆಗೊಂಡಿಲ್ಲ. ಅಮೆರಿಕಾ ಅಧ್ಯಕ್ಷರ ಚುನಾವಣೆ ವೇಳೆ ಡೋನಾಲ್ಡ್ ಟ್ರಂಪ್ ತಮ್ಮ ಬೆಂಬಲಿಗರನ್ನು ಪ್ರಚೋದಿಸಿ, ಶ್ವೇತ ಭವನದ ಮೇಲೆ ದಾಳಿ ಮಾಡಿಸಿದ್ದರು. ಶಾಂತಿ ಭಂಗ ಉಂಟು ಮಾಡಿದ್ದರು ಎಂಬ ಆರೋಪಗಳು ಕೇಳಿ ಬಂದಿದ್ದವು.

ಗಲಾಟೆಗೂ ಮುನ್ನಾ ಟ್ರಂಪ್ ಟ್ವಿಟರ್‍ನಲ್ಲಿ ಪ್ರಚೋದನಾಕಾರಿ ಸಂದೇಶಗಳನ್ನು ಪ್ರಕಟಿಸಿದರು. ಇದು ಸಂಸ್ಥೆಯ ನಿಯಮಗಳ ಉಲ್ಲಂಘನೆ ಎಂಬ ಆಕ್ಷೇಪದ ಹಿನ್ನೆಲೆಯಲ್ಲಿ ಸುಮಾರು ವರ್ಷಗಳಿಂದಲೂ ಟ್ರಂಪ್ ಅವರ ಅಧಿಕೃತ ಟ್ವಿಟರ್ ಖಾತೆಯಾಗಿರುವ ರಿಯಲ್‍ಡೋನಾಲ್ಡ್ ಟ್ರಂಪ್ ಅನ್ನು ಜಪ್ತಿ ಮಾಡಲಾಗಿದೆ. ಈವರೆಗೂ ಅದು ಮರು ಚಾಲನೆಗೊಂಡಿಲ್ಲ.

ಪುನೀತ್ ಪ್ರಥಮ ಪುಣ್ಯಸ್ಮರಣೆಗೆ ಹರಿದುಬಂದ ಅಭಿಮಾನಿ ಸಾಗರ

ಆದರೆ ಡೋನಾಲ್ಡ್ ಜೆ.ಟ್ರಂಪ್ ಎಂಬ ಮತ್ತೊಂದು ಖಾತೆ ಚಾಲ್ತಿಯಲ್ಲಿದೆ. ಅದರಲ್ಲಿ ಹಲವು ವರ್ಷಗಳಿಂದಲೂ ಮಾಜಿ ಅಧ್ಯಕ್ಷರ ಘನತೆಗೆ ತಕ್ಕುದ್ದು ಎಂದು ಹೇಳಲಾಗದಿರುವ ಅಸಂಬಂಧ ಪೋಸ್ಟ್‍ಗಳು ಪ್ರಕಟವಾಗುತ್ತಲೇ ಇವೆ.

ನಿನ್ನೆ ಹೊಸ ಪೋಸ್ಟ್ ಪ್ರಕಟವಾಗಿದೆ ಅದರಲ್ಲಿ, ಧನ್ಯವಾದ ಎಲೋನ್ ಮಸ್ಕ್, ಮತ್ತೆ ಮರಳಿ ಬಂದಿರುವುದು ಸಂತಸ ತಂದಿದೆ. ಬಹುಶಃ ಎಲ್ಲಾ ದ್ವೇಷಿಗಳಿಗೆ ಮತ್ತು ಸೋಲು ಕಂಡವರನ್ನು ಮಿಸ್ ಮಾಡಿಕೊಂಡಿದ್ದೆ ಎಂದು ಲೇವಡಿ ಮಾಡಲಾಗಿದೆ. ಈ ಪೋಸ್ಟ್ ಮಾಡಿರುವ ಖಾತೆಗೂ ಟ್ವಿಟರ್ ಬ್ಲೂಟಿಕ್ ನೀಡಿದೆ.

ಎಲೋನ್ ಮಸ್ಕ್ ಅವರು ಡೋನಾಲ್ಡ್ ಟ್ರಂಪ್ ಅವರ ಖಾತೆ ಬಿಟ್ಟು, ಜಪ್ತಿಯಾದ ಉಳಿದ ಎಲ್ಲರ ಖಾತೆಗಳನ್ನು ಮರು ಚಾಲುಗೊಳಿಸಲು ಉದ್ದೇಶಿದ್ದಾರೆ ಎಂದು ಜೆನ್ನಿ ಟಿಗ್ಟಪ್ಯಾಂಟ್ಸ್ ಎಂಬವರು ಪೋಸ್ಟ್ ಹಾಕಿದ್ದನ್ನು ರಿಟ್ವೀಟ್ ಮಾಡಿರುವ ಡೋನಾಲ್ಡ್ ಜೆ. ಟ್ರಂಪ್ ಖಾತೆದಾರರು ಇದು ಸುಳ್ಳು ಎಂದು ತಳ್ಳಿಹಾಕಿದ್ದಾರೆ.

ಈ ನಡುವೆ ಎಲೋನ್ ಮಸ್ಕ್ ಟ್ವೀಟ್ ಮಾಡಿದ್ದು, ಟ್ವಿಟರ್ ವಿಶಾಲವಾದ ದೃಷ್ಟಿಕೋನ ಹಾಗೂ ವೈವಿದ್ಯತೆಯ ಮಾರ್ಗದಲ್ಲಿ ಕಂಟೆಂಟ್ ಮಾಡರೇಷನ್ ಕೌನ್ಸಿಲ್ ಅನ್ನು ರಚಿಸಲಿದೆ. ಈವರೆಗೂ ಕಂಟೆಂಟ್ ಮಾಡರೇಷನ್ ಕುರಿತು ಯಾವುದೇ ನಿರ್ಧಾರಗಳನ್ನು ತೆಗೆದುಕೊಂಡಿಲ್ಲ. ಕೌನ್ಸಿಲ್ ಸಭೆಗೂ ಮುನ್ನಾ ಯಾವುದೇ ಖಾತೆಗಳ ಮರುಚಾಲನೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಕೇಂದ್ರ ಸರ್ಕಾರದ ಮಾಹಿತಿ ತಂತ್ರಜ್ಞಾನ ಸಚಿವ ರಾಜೀವ್ ಚಂದ್ರಶೇಖರ್ ಅವರು ರಾಯಿಟರ್ಸ್ ಸುದ್ದಿ ಸಂಸ್ಥೆಗೆ ಹೇಳಿಕೆ ನೀಡಿದ್ದು, ಟ್ವಿಟರ್ ಯಾರ ಒಡೆತನಕ್ಕೆ ಸೇರಿದೆ ಎಂಬುದು ಮುಖ್ಯವಲ್ಲ. ಯಾರ ಮಾಲೀಕತ್ವದಲ್ಲೇ ಇದ್ದರೂ ಭಾರತ ಸರ್ಕಾರದ ನಿಯಮಗಳು ಹಾಗೂ ಕಾನೂನುಗಳ ಪಾಲನೆ ಕಡ್ಡಾಯವಾಗಲಿದೆ. ಈ ನಿಟ್ಟಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದಿದ್ದಾರೆ.

Articles You Might Like

Share This Article