ಹಣಕ್ಕಾಗಿ ಯುವಕನ ಕೊಂದು, ಶವವನ್ನು ಕೆರೆಗೆ ಬಿಸಾಡಿದ್ದ ಆರೋಪಿಗಳ ಬಂಧನ

Social Share

ಬೆಂಗಳೂರು, ಜ.26- ಚಿನ್ನ ಪಡೆದುಕೊಂಡು ತಮಗೆ ಹಣ ಕೊಡಿ ಎಂದು ಹೇಳಿ ವ್ಯಕ್ತಿಯನ್ನು ಮನೆಗೆ ಕರೆಸಿಕೊಂಡು ಕೊಲೆ ಮಾಡಿ ಶವವನ್ನು ಮೂಟೆಕಟ್ಟಿ ಕೆರೆಗೆ ಬಿಸಾಡಿದ್ದ ಇಬ್ಬರು ಆರೋಪಿಗಳನ್ನು ಪುಟ್ಟೇನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕುಣಿಗಲ್ ತಾಲ್ಲೂಕಿನ ಅರಕೆರೆ ಹೋಬಳಿ ಮೆಸನಹಳ್ಳಿ ಗ್ರಾಮದ ಮಂಜುನಾಥ್ (28) ಮತ್ತು ಉತ್ತರಿ ಗ್ರಾಮದ ಮುನಿರಾಜು (24) ಬಂಧಿತ ಆರೋಪಿಗಳು.
ಬನಶಂಕರಿ 2ನೆ ಹಂತ, ಸೆರಬಂಡೆಪಾಳ್ಯ, 3ನೆ ಮುಖ್ಯರಸ್ತೆ ನಿವಾಸಿ ದಿವಾಕರ್ ಎಂಬುವವರು ನಗರದ ಎಸ್‍ಎಸ್‍ಆರ್ ಗೋಲ್ಡ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ಕಂಪೆನಿ ಯಾರಿಗೆ ಹಣದ ಅವಶ್ಯಕತೆಯಿದೆಯೋ ಅವರ ಬಳಿ ಚಿನ್ನವನ್ನು ಪಡೆದುಕೊಂಡು ಹಣ ನೀಡುತ್ತದೆ. ದುಂದುವೆಚ್ಚಕ್ಕಾಗಿ ಹಣದ ಅವಶ್ಯಕತೆಯಿದ್ದುದರಿಂದ ಆರೋಪಿಗಳು ಗೂಗಲ್‍ನಲ್ಲಿ ಸರ್ಚ್ ಮಾಡಿ ಎಸ್‍ಎಸ್‍ಆರ್ ಗೋಲ್ಡ್ ಕಂಪೆನಿ ನಂಬರ್ ತೆಗೆದುಕೊಂಡು ಜ.19ರಂದು ಕರೆ ಮಾಡಿದ್ದಾರೆ.
ತಮ್ಮ ಬಳಿ 65 ರಿಂದ 70 ಗ್ರಾಂ ಚಿನ್ನವಿದೆ. ಹಣದ ಆವಶ್ಯಕತೆ ಇರುವುದರಿಂದ ನೀವು ಬಂದು ಹಣ ಕೊಟ್ಟು ಚಿನ್ನವನ್ನು ತೆಗೆದುಕೊಂಡು ಹೋಗಿ ಎಂದು ತಿಳಿಸಿ ಸುಂಕದಕಟ್ಟೆ ಬಳಿ ಇರುವ ತಮ್ಮ ಮನೆಗೆ ಆರೋಪಿಗಳು ದಿವಾಕರ್ ಅವರನ್ನು ಜ.20ರಂದು ಕರೆಸಿಕೊಂಡಿದ್ದಾರೆ.
ಬೈಕ್‍ನಲ್ಲಿ ದಿವಾಕರ್ ಇವರ ಮನೆಗೆ ಬಂದಿದ್ದಾರೆ. ಈ ಮೊದಲೇ ಮುನಿರಾಜು ಮತ್ತು ಒಬ್ಬ ಮಹಿಳೆ ಮನೆಯಲ್ಲಿದ್ದರು. ಈ ಮೂವರು ಸೇರಿಕೊಂಡು ದಿವಾಕರನ ಕತ್ತು ಹಿಸುಕಿ ಕೊಲೆ ಮಾಡಿ ಅವರ ಬಳಿ ಇದ್ದ ಐದು ಲಕ್ಷವನ್ನು ತೆಗೆದುಕೊಂಡಿದ್ದಾರೆ. ನಂತರ ಪ್ಲಾಸ್ಟಿಕ್ ಚೀಲದಲ್ಲಿ ಮೃತದೇಹವನ್ನು ತುಂಬಿಸಿದ್ದಾರೆ.
ಸಾಕ್ಷ್ಯ ನಾಶಪಡಿಸುವ ದುರುದ್ದೇಶದಿಂದ ಮೃತದೇಹ ಮತ್ತು ದ್ವಿಚಕ್ರ ವಾಹನವನ್ನು ಮಾಗಡಿ ರಸ್ತೆಯಲ್ಲಿರುವ ಹೊನ್ನಾಪುರ ಕೆರೆಯಲ್ಲಿ ಬಿಸಾಡಿದ್ದರು. ಈ ನಡುವೆ ದಿವಾಕರ್ ಜ.20ರಂದು ಬೆಳಗ್ಗೆ 10 ಗಂಟೆ ಸುಮಾರಿಗೆ ಪತ್ನಿ ಶಿವಗಾಮಿ ಅವರನ್ನು ಕೆಲಸ ಮಾಡುವ ಜೆಪಿ ನಗರ 6ನೆ ಹಂತ, 15ನೆ ಕ್ರಾಸ್, ಶೆಲ್ ಪೆಟ್ರೋಲ್ ಬಂಕ್ ಎದುರಿನ ಆದಿತ್ಯ ಗ್ಲೋಬಲ್ ಕಚೇರಿ ಬಳಿ ಬಿಟ್ಟು ತನಗೆ ಸುಂಕದಕಟ್ಟೆಯಲ್ಲಿ ಕೆಲಸವಿದೆ ಎಂದು ಹೇಳಿ ಹೋದವರು ಮರಳಿ ವಾಪಸ್ ಬಂದಿಲ್ಲವೆಂದು ತಾಯಿ ಲಕ್ಷ್ಮಿ ಪುಟ್ಟೇನಹಳ್ಳಿ ಠಾಣೆಗೆ ಜ.21ರಂದು ಮಧ್ಯಾಹ್ನ 1 ಗಂಟೆಗೆ ದೂರು ನೀಡಿದ್ದಾರೆ.  ದಿವಾಕರ್ ಫೋನ್ ಸಹ ಸ್ವಿಚ್ ಆಫ್ ಆಗಿದೆ, ತಮ್ಮ ಮಗನನ್ನು ಹುಡುಕಿಕೊಡುವಂತೆ ದೂರಿನಲ್ಲಿ ತಿಳಿಸಿದ್ದರು.
ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ದಿವಾಕರ್ ಅವರ ಮೊಬೈಲ್ ನಂಬರ್‍ನ ಕರೆಗಳ ವಿವರಗಳನ್ನು ಪಡೆದು ಪರಿಶೀಲಿಸಿದಾಗ ಕೊನೆಯದಾಗಿ 20ರಂದು ಬೆಳಗ್ಗೆ 11 ಗಂಟೆ ಸಮಯದಲ್ಲಿ ಹೊಯ್ಸಳ ನಗರದ ಸುಂಕದಕಟ್ಟೆ ಎಂಬ ಸ್ಥಳದಲ್ಲಿ ಸ್ವಿಚ್‍ಆಫ್ ಆಗಿರುವುದು ಗೊತ್ತಾಗಿದೆ.
ಮೊಬೈಲ್ ನಂಬರ್ ಒಳ ಮತ್ತು ಹೊರ ಕರೆಗಳ ಮಾಹಿತಿಗಳನ್ನು ಆಧರಿಸಿ ಅನುಮಾನಾಸ್ಪದ ವ್ಯಕ್ತಿಗಳಾದ ಮಂಜುನಾಥ್ ಮತ್ತು ಮಿನಿರಾಜುನ್ನು ಬಂಸಿ ಠಾಣೆಗೆ ಕರೆತಂದು ತೀವ್ರ ವಿಚಾರಣೆಗೊಳಪಡಿಸಿದಾಗ ದುಂದುವೆಚ್ಚಕ್ಕಾಗಿ ಹಣದ ಆವಶ್ಯಕತೆಯಿದ್ದುದರಿಂದ ಚಿನ್ನ ಕೊಡುವುದಾಗಿ ಹೇಳಿ ಕರೆಸಿಕೊಂಡು ಕೊಲೆ ಮಾಡಿ ಹಣ ದೋಚಿದ್ದಾಗಿ ಬಾಯ್ಬಿಟ್ಟಿದ್ದಾರೆ.
ಅಂದು ದಿವಾಕರ್ ಅವರನ್ನು ಕೊಲೆ ಮಾಡಿ ಮೂಟೆಯಲ್ಲಿ ಹಾಕಿ ಶವ ತೇಲದಂತೆ ಕಲ್ಲು ಕಟ್ಟಿ ಹೊನ್ನಾಪುರ ಕೆರೆಗೆ ಬಿಸಾಡಿದ್ದಾಗಿ ಹೇಳಿದ್ದಾರೆ. ತಕ್ಷಣ ಪೊಲೀಸರು ಕೆರೆ ಬಳಿ ಹೋಗಿ ಪರಿಶೀಲಿಸಿ ದಿವಾಕರನ ಶವ ಮತ್ತು ಅವರ ಬೈಕನ್ನು ಮೇಲೆತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ದಕ್ಷಿಣ ವಿಭಾಗದ ಉಪ ಪೊಲೀಸ್ ಆಯುಕ್ತ ಹರೀಶ್ ಪಾಂಡೆ, ಸುಬ್ರಹ್ಮಣ್ಯಪುರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶಿವಕುಮಾರ್ ನೇತೃತ್ವದಲ್ಲಿ ಪುಟ್ಟೇನಹಳ್ಳಿ ಠಾಣೆ ಅಕಾರಿ ಮತ್ತು ಸಿಬ್ಬಂದಿ ತಂಡ ಉತ್ತಮ ಕಾರ್ಯನಿರ್ವಹಿಸಿ ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಉತ್ತಮ ಕಾರ್ಯವನ್ನು ಹಿರಿಯ ಅಧಿಕಾರಿಗಳು ಪ್ರಶಂಸಿಸಿದ್ದಾರೆ.

Articles You Might Like

Share This Article