ಬೆಂಗಳೂರು,ಆ.11- ಹಗಲು ಮತ್ತು ರಾತ್ರಿ ವೇಳೆ ಬೈಕ್‍ಗಳ ಹ್ಯಾಂಡಲ್‍ಲಾಕ್ ಮುರಿದು ಕಳವು ಮಾಡುತ್ತಿದ್ದ ಇಬ್ಬರನ್ನು ಯಲಹಂಕ ಠಾಣೆ ಪೊಲೀಸರು ಬಂಧಿಸಿ 6 ಲಕ್ಷ ಬೆಲೆ ಬಾಳುವ 11 ದ್ವಿಚಕ್ರವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಆರ್.ಟಿ.ನಗರದ ಮುಬಾರಕ್ ಪಾಷ(20), ಯಲಹಂಕ ಓಲ್ಡ್ ಟೌನ್ ನಿವಾಸಿ ಮಹೇಶ್(27) ಬಂಧಿತ ಆರೋಪಿಗಳು.
ಆರೋಪಿಗಳ ಬಂಧನದಿಂದ ಯಲಹಂಕ ಪೊಲೀಸ್ ಠಾಣೆಯ ಮೂರು ಬೈಕ್ ಕಳವು ಪ್ರಕರಣಗಳು, ಯಲಹಂಕ ಉಪನಗರದ 4, ಆರ್‍ಟಿನಗರ 2, ದೇವರಜೀವನಹಳ್ಳಿ, ಹೆಬ್ಬಾಳ ಠಾಣೆಯ ತಲಾ ಒಂದು ಬೈಕ್ ಪ್ರಕರಣಗಳು ಸೇರಿದಂತೆ ಒಟ್ಟು 11 ಪ್ರಕರಣಗಳು ಪತ್ತೆಯಾಗಿರುತ್ತವೆ.
ಸುರಭಿ ಲೇಔಟ್ 2ನೇ ಮುಖ್ಯರಸ್ತೆಯಲ್ಲಿರುವ ಮನೆಯ ಮುಂಭಾಗ ಮಧು ಎಂಬುವರು ಜುಲೈ 31ರಂದು ಸಂಜೆ 6 ಗಂಟೆಗೆ ತಮ್ಮ ರಾಯಲ್ ಎನ್‍ಫೀಲ್ಡ್ ಬೈಕ್‍ನ್ನು ನಿಲ್ಲಿಸಿ ಬೀಗ ಹಾಕಿ ಹೋಗಿದ್ದು, ಮಾರನೇ ದಿನ ಬೆಳಗ್ಗೆ 6.30ರ ಸುಮಾರಿನಲ್ಲಿ ನೋಡಿದಾಗ ಬೈಕ್ ಇರಲಿಲ್ಲ.
ಬೈಕ್ ಕಳ್ಳತನವಾಗಿರುವ ಬಗ್ಗೆ ಯಲಹಂಕ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಇಬ್ಬರನ್ನು ಬಂಧಿಸಿ 6 ಲಕ್ಷ ಮೌಲ್ಯದ 11 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.
ಈಶಾನ್ಯ ವಿಭಾಗದ ಉಪಪೊಲೀಸ್ ಆಯುಕ್ತ ಅನೂಪ್ .ಎ ಶೆಟ್ಟಿ ಮಾರ್ಗದರ್ಶನದಲ್ಲಿ ಯಲಹಂಕ ಉಪವಿಭಾಗದ ಎಸಿಪಿ ಮಂಜುನಾಥ್ ಅವರ ನೇತೃತ್ವದಲ್ಲಿ ಇನ್‍ಸ್ಪೆಕ್ಟರ್ ಬಾಲಾಜಿ ಅವರನ್ನೊಳಗೊಂಡ ಸಿಬ್ಬಂದಿ ತಂಡ ಕಾರ್ಯಪ್ರವೃತ್ತರಾಗಿ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.