ಬೆಂಗಳೂರು, ಫೆ.21- ಭಜರಂಗ ದಳ ಕಾರ್ಯಕರ್ತ ಹರ್ಷ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ ಎಂದು ಎಡಿಜಿಪಿ ಮುರುಗನ್ ತಿಳಿಸಿದ್ದಾರೆ.ಈ ಪ್ರಕರಣದಲ್ಲಿ ಭಾಗಿಯಾಗಿರುವವರ ಬಗ್ಗೆ ಪೂರ್ಣ ಮಾಹಿತಿ ಪಡೆದುಕೊಳ್ಳುತ್ತಿದ್ದು, ಉಳಿದ ಆರೋಪಿಗಳನ್ನು ಶೀಘ್ರದಲ್ಲೇ ಬಂಸಲಾಗುವುದು ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಶಿವಮೊಗ್ಗಕ್ಕೆ ತೆರಳಿ ಅಲ್ಲಿ ಮೊಕ್ಕಾಂ ಹೂಡಿ ಪರಿಸ್ಥಿತಿಯನ್ನು ಅವಲೋಕಿಸಿರುವ ಮುರುಗನ್ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ಯಾವುದೇ ಕಾರಣಕ್ಕೂ ಶಿವಮೊಗ್ಗ ನಗರದಲ್ಲಿ ಶಾಂತಿ-ಸುವ್ಯವಸ್ಥೆ ಹದಗೆಡಲು ಬಿಡುವುದಿಲ್ಲ ಎಂದು ತಿಳಿಸಿದರು.
ಪೊಲೀಸರು ಹಾಗೂ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಕೆಲವೊಂದು ಕಡೆ ಸಣ್ಣಪುಟ್ಟ ಘಟನೆಗಳಾಗಿವೆ. ಆ ಸ್ಥಳಗಳಲ್ಲಿ ಬಿಗಿ ಕ್ರಮ ಕೈಗೊಳ್ಳಲಾಗಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವವರ ವಿರುದ್ಧ ಕಾನೂನು ರೀತಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ಹರ್ಷ ಅವರ ಪಾರ್ಥಿವ ಶರೀರದ ಮೆರವಣಿಗೆ ಸಂದರ್ಭದಲ್ಲಿ ಕಲ್ಲುತೂರಾಟ ನಡೆಸಿ ಆಸ್ತಿಪಾಸ್ತಿಗೆ ಧಕ್ಕೆ ಮಾಡಿದವರು ಯಾರೇ ಆದರೂ ಅವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.
# ಶಾಂತಿ ಕಾಪಾಡಿ:
ಇದೇ ವೇಳೆ ಎಡಿಜಿಪಿ ಮುರುಗನ್ ಅವರು ಸಾರ್ವಜನಿಕರಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದಾರೆ. ನಿಮ್ಮ ನಗರಕ್ಕೆ ಬೆಂಕಿ ಹಚ್ಚಬೇಡಿ. ನಾವು ನಿಮ್ಮ ಜತೆ ಇರುತ್ತೇವೆ ಎಂದು ಅವರು ತಿಳಿಸಿದ್ದಾರೆ.
# ಮೂವರು ವಶಕ್ಕೆ:
ಭಜರಂಗದಳ ಕಾರ್ಯಕರ್ತ ಹರ್ಷ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಪೊಲೀಸರು ತನಿಖೆ ಕೈಗೊಂಡು ಇಬ್ಬರನ್ನು ಬಂಧಿಸಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.ಇದುವರೆಗಿನ ತನಿಖೆ ಪ್ರಕಾರ, ಕೊಲೆಗೆ ಹಳೆಯ ದ್ವೇಷವೇ ಕಾರಣ ಎಂದು ಕಂಡುಬರುತ್ತಿದೆ ಎಂದು ಹಿರಿಯ ಪೊಲೀಸ್ ಅಕಾರಿಯೊಬ್ಬರು ಈ ಸಂಜೆಗೆ ತಿಳಿಸಿದ್ದಾರೆ.
ಶಿವಮೊಗ್ಗದ ಒಂದು ಪೊಲೀಸ್ ತಂಡ ಬೆಂಗಳೂರಿಗೆ ಬಂದಿದ್ದು, ಸ್ಥಳೀಯ ಪೊಲೀಸರ ನೆರವಿನಿಂದ ಜೆಜೆ ನಗರದಲ್ಲಿ ಶಂಕಿತ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಒಂದು ತಂಡ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲ್ಲೂಕಿಗೆ ಹೋಗಿದ್ದು, ಅಲ್ಲಿನ ಬಳ್ಳಾರಿ ಕ್ಯಾಂಪ್‍ನಲ್ಲಿ ಅಡಗಿ ಕುಳಿತಿದ್ದ ಆರೋಪಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದು, ಉಳಿದ ಆರೋಪಿಗಳಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
